ನವದೆಹಲಿ, ಫೆಬ್ರುವರಿ 1: ಕೇಂದ್ರ ಸರ್ಕಾರದ ಪಾಲಿಗೆ ಈ ಬಾರಿಯ ಬಜೆಟ್ ಅತ್ಯಂತ ಕಠಿಣ ಹಾಗೂ ಸವಾಲಿನದ್ದು. ಹತ್ತಾರು ಸಮಸ್ಯೆಗಳ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಮಂಡಿಸುತ್ತಿರುವ ಬಜೆಟ್, ವಿವಿಧ ಹೊಸ ಘೋಷಣೆಗಳನ್ನು ಮಾಡುವ ನಿರೀಕ್ಷೆಯಿದೆ.
ನಿರ್ಮಲಾ ಸೀತಾರಾಮನ್ ಮುಂದೆ ಹಲವು ಸವಾಲುಗಳಿವೆ. ಒಂದೆಡೆ ಕೊರೊನಾ ವೈರಸ್ ಸೋಂಕಿನ ಸಂಕಷ್ಟ, ಆರ್ಥಿಕತೆಯ ಹಿನ್ನಡೆ, ವಿವಾದಾತ್ಮಕ ಕಾಯ್ದೆಗಳಿಂದ ಉಂಟಾಗಿರುವ ಸಮಸ್ಯೆಗಳು ಸೇರಿದಂತೆ ಅನೇಕ ವಿಚಾರಗಳನ್ನು ಅವರು ಇಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕಿದೆ. ಅವುಗಳಲ್ಲಿ ಮೂರು ಪ್ರಮುಖ ಅಂಶಗಳು ಇಲ್ಲಿವೆ.
ಉದ್ಯೋಗ: ಕೋವಿಡ್ ಭೀತಿಯ ನಡುವೆ ತೀವ್ರ ಹೊಡೆತ ಅನುಭವಿಸಿದ್ದ ಆರ್ಥಿಕ ಬೆಳವಣಿಗೆ ಸಾಕಷ್ಟು ಸುಧಾರಣೆಯಾಗಿದೆ. ಆದರೂ ದೇಶದ ಉದ್ಯೋಗ ಸ್ಥಿತಿ ಇಂದಿಗೂ ಸಾಂಕ್ರಾಮಿಕ ಪೂರ್ವ ಸನ್ನಿವೇಶದ ಮಟ್ಟಕ್ಕೆ ಮರಳಿಲ್ಲ. ಅಷ್ಟೇ ಅಲ್ಲ, ನಿರುದ್ಯೋಗದ ಮಟ್ಟ ಇನ್ನೂ ಏರಿಕೆಯಾಗುತ್ತಲೇ ಇದೆ ಎನ್ನುತ್ತದೆ ಭಾರತೀಯ ಆರ್ಥಿಕತೆ ನಿಗಾ ಕೇಂದ್ರ (ಸಿಎಂಐಇ).

ಬೇಡಿಕೆ: ದೇಶಕ್ಕೆ ಈಗ ತುರ್ತು ಆರ್ಥಿಕತೆ ಚೇತರಿಕೆಯ ಅಗತ್ಯವಿದೆ. ಹೀಗಾಗಿ ಸರ್ಕಾರವು ಬೇಡಿಕೆ ವೃದ್ಧಿಸುವ ಕ್ರಮಗಳನ್ನು ಜಾರಿಗೆ ತರುವಂತೆ ಪರಿಣತರು ಸಲಹೆ ನೀಡಿದ್ದಾರೆ. ಜತೆಗೆ ಸರ್ಕಾರದ ಆದಾಯಯಕ್ಕೆ ಪೆಟ್ಟು ನೀಡಿರುವ ಅನುಭೋಗದ ಮಟ್ಟದ ಇಳಿಕೆಯನ್ನು ಸುಧಾರಿಸಲು ಗಮನ ಹರಿಸುವಂತೆ ಹೇಳಿದ್ದಾರೆ.
ಬೆಳವಣಿಗೆ ಆಧಾರಿತ ಹೂಡಿಕೆ: ಪ್ರಮುಖ ಬೆಳವಣಿಗೆ-ಕೇಂದ್ರಿತ ವಲಯಗಳಲ್ಲಿನ ಹೆಚ್ಚಳದ ಬಗ್ಗೆ ಕೂಡ ಈ ವೇಳೆ ಸರ್ಕಾರ ಗಮನ ಹರಿಸಬೇಕಿದೆ. ಸರ್ಕಾರವು ಸಾರ್ವಜನಿಕ ಮೂಲಸೌಕರ್ಯ ಪ್ರಾಜೆಕ್ಟ್‌ಗಳ ಮೇಲೆ ಹೆಚ್ಚಿನ ವ್ಯಯ ಮಾಡಬೇಕು. ಇದು ಉದ್ಯೋಗ ಸೃಷ್ಟಿಗೆ ನೆರವಾಗಲಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications