ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಹು ನಿರೀಕ್ಷಿತ ಬಜೆಟ್ 2021 ಅನ್ನು ಇಂದು (ಫೆಬ್ರವರಿ 1, 2021) ಮಂಡನೆ ಮಾಡಲಿದೆ. ಉದ್ಯೋಗ ಸೃಷ್ಟಿ, ಗ್ರಾಮೀಣಾಭಿವೃದ್ಧಿಗಾಗಿ ಹೆಚ್ಚಿನ ವೆಚ್ಚವನ್ನು ಬಜೆಟ್ ನಲ್ಲಿ ಮೀಸಲಿಡುವ ಮೂಲಕ, ಕೊರೊನಾ ಹೊಡೆತಕ್ಕೆ ಸಿಲುಕಿದ ವಿಶ್ವದಲ್ಲಿ ಬಹು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಮರಳಿ ಹಳಿಗೆ ತರಬೇಕಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಗ್ಗೆ 11ಕ್ಕೆ ಬಜೆಟ್ ಮಂಡನೆ ಮಾಡಲಿದ್ದಾರೆ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಹಣ ಮೀಸಲಿಡುವ ನಿರೀಕ್ಷೆ ಇದೆ. ಇನ್ನು ಸರಾಸರಿ ತೆರಿಗೆದಾರರ ಕೈಲಿ ಹೆಚ್ಚು ಹಣ ಉಳಿಯುವಂತೆ ಹಾಗೂ ಬಳಕೆ ಹೆಚ್ಚು ಮಾಡುವಂತೆ, ವಿದೇಶಿ ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ಬಜೆಟ್ ನಿರೀಕ್ಷಿಸಲಾಗಿದೆ.
ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಬಜೆಟ್ ಈ ಹಿಂದೆಂದಿಗಿಂತ ಭಿನ್ನವಾಗಿ ಇರಲಿದೆ ಎಂದು ಈಗಾಗಲೇ ತಿಳಿಸಿದ್ದಾರೆ. ಆರ್ಥಿಕ ಸಮೀಕ್ಷೆ 2021- 22 ಅಂದಾಜು ಮಾಡಿರುವಂತೆ ಆರ್ಥಿಕ ಬೆಳವಣಿಗೆ 11% ಆಗಬಹುದು.

ಬಜೆಟ್ ಗೆ ಪೂರ್ವಭಾವಿಯಾಗಿ ಕೆಲವು ಮುಖ್ಯಾಂಶಗಳು:
* ಮುಂದಿನ ವರ್ಷದಲ್ಲಿ ಸಗಟು ತೆರಿಗೆ ಆದಾಯ ವರ್ಷದಿಂದ ವರ್ಷಕ್ಕೆ ಹೋಲಿಸಿದಲ್ಲಿ 19% ಹೆಚ್ಚಳ ಆಗಬಹುದು ಎಂದು ಸಿಟಿಗ್ರೂಪ್ ನಿರೀಕ್ಷಿಸಿದೆ. ಇದರ ಜತೆಗೆ ಒಟ್ಟಾರೆ ಜಿಎಸ್ ಟಿ ಸಂಗ್ರಹ ಕೂಡ ಉತ್ತಮ ಆಗುವ ಸಾಧ್ಯತೆ ಇದೆ. ಮುಂದಿನ ಆರ್ಥಿಕ ವರ್ಷದಲ್ಲಿ ತಿಂಗಳ ಸರಾಸರಿ ಜಿಎಸ್ ಟಿ ಆದಾಯ 1.15 ಲಕ್ಷ ಕೋಟಿ ಬರಬಹುದು ಎಂದು ಅಂದಾಜು ಮಾಡಲಾಗಿದೆ. ಅಂದರೆ ವರ್ಷಕ್ಕೆ ರು. 14 ಲಕ್ಷ ಕೋಟಿ ಆಗುತ್ತದೆ.
* ಬಜೆಟ್ ಮಂಡನೆಗೂ ಮುನ್ನ ಬೆಳಗ್ಗೆ 10.15ಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಇದೆ.
* ಬಜೆಟ್ ಮಂಡನೆಗೂ ಮುನ್ನ ಹಣಕಾಸು ಸಚಿವೆ ಮತ್ತು ಅವರ ತಂಡ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರನ್ನು ಭೇಟಿ ಆಗಲಿದ್ದಾರೆ. ಈ ಸಮಯದಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಮತ್ತು ಹಣಕಾಸು ಸಚಿವಾಲಯದ ಇತರ ಅಧಿಕಾರಿಗಳು ಹಾಜರಿರುತ್ತಾರೆ.
* ಈಗಾಗಲೇ ಹಣಕಾಸು ಸಚಿವೆ 'ಕೇಂದ್ರ ಬಜೆಟ್ ಮೊಬೈಲ್ ಆಪ್' ಬಿಡುಗಡೆ ಮಾಡಿದ್ದಾರೆ. ಸಂಸದರಿಗೆ ಮತ್ತು ಜನ ಸಾಮಾನ್ಯರಿಗೆ ಬಜೆಟ್ ದಾಖಲೆಗಳು ಅದರಲ್ಲೇ ಸಿಗಲಿದೆ.
* ನಿರ್ಮಲಾ ಸೀತಾರಾಮನ್ ಮೊದಲ ಬಜೆಟ್ ಮಂಡಿಸಿದ್ದು 2019ರಲ್ಲಿ. ದಶಕಗಳಿಂದ ಬಳಸುತ್ತಿದ್ದ, ಬಜೆಟ್ ದಾಖಲೆಗಳನ್ನು ತರುತ್ತಿದ್ದ ಚರ್ಮದ ಬ್ರೀಫ್ ಕೇಸ್ ಬದಲಿಸಿದ್ದರು. "ಬಹಿ- ಖಾತಾ"ವನ್ನು ಸಾಂಪ್ರದಾಯಿಕ ಕೆಂಪು ಬಟ್ಟೆಯಲ್ಲಿ ತಂದಿದ್ದರು.
* ಈಚಿನ ವರ್ಷಗಳಲ್ಲಿ ಬಜೆಟ್ ನಂತರದಲ್ಲಿ ಷೇರು ಪೇಟೆ ಹೇಗೆ ಪ್ರತಿಕ್ರಿಯಿಸಿದೆ ಎಂಬುದನ್ನು ಗಮನಿಸುವುದಾದರೆ ಇಳಿಜಾರಿನ ಹಾದಿ ಕಂಡುಬರುತ್ತದೆ.
* 2020ರ ಮಾರ್ಚ್ ನಲ್ಲಿ ಷೇರು ಮಾರುಕಟ್ಟೆ 40% ಕುಸಿತ ಕಂಡಿತ್ತು. ಆ ನಂತರ ಚೇತರಿಸಿಕೊಂಡು ಮತ್ತೆ ಸಾರ್ವಕಾಲಿಕ ಎತ್ತರವನ್ನು ತಲುಪಿತು. ಹೂಡಿಕೆದಾರರು ಈಗ ಬಜೆಟ್ ನತ್ತ ಕಣ್ಣು ನೆಟ್ಟಿದ್ದಾರೆ. ಈ ಬಾರಿಯ ಬಜೆಟ್ ಹೂಡಿಕೆ ನಿರ್ಧಾರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಎದುರು ನೋಡುತ್ತಿದ್ದಾರೆ.
* ಆದಾಯ ತೆರಿಗೆ ಪಾವತಿದಾರರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಎನ್ ಪಿಎಸ್ ಅಥವಾ ನ್ಯಾಷನಲ್ ಪೆನ್ಷನ್ ಸ್ಕೀಮ್ ನಲ್ಲಿ ಸರ್ಕಾರವು ಕೆಲವು ವಿನಾಯಿತಿ ಘೋಷಿಸಬಹುದು ಎಂಬ ನಿರೀಕ್ಷೆ ತಜ್ಞರಲ್ಲಿದೆ.


Click it and Unblock the Notifications