ಕೇಂದ್ರ ಸರ್ಕಾರ ಬಜೆಟ್ 2021 ಮಂಡನೆ ಮಾಡಿಯಾಗಿದೆ. ಈ ಬಾರಿ ಬಜೆಟ್ ನಲ್ಲಿ ಇರಿಸಿಕೊಂಡಿರುವ ವೆಚ್ಚದ ಅಂದಾಜು 34.50 ಲಕ್ಷ ಕೋಟಿ ರುಪಾಯಿ. ಆ ಪೈಕಿ 1,10,055 ಕೋಟಿ ರುಪಾಯಿ ರೈಲ್ವೆಗೆ ಮೀಸಲು. ಬಹಳ ಮಂದಿಗೆ ಪ್ರಶ್ನೆ ಇದ್ದಿರಬಹುದು; ಹೀಗೆ ಲಕ್ಷ ಕೋಟಿ ರುಪಾಯಿಗಳ ಯೋಜನೆ, ವೆಚ್ಚ, ಹೂಡಿಕೆ ಬಗ್ಗೆ ಸರ್ಕಾರ ಪ್ರಸ್ತಾಪ ಮಾಡುತ್ತದೆ. ಅದಕ್ಕೆ ಅಷ್ಟೊಂದು ಹಣ ಹೇಗೆ ಬರುತ್ತದೆ ಮತ್ತು ಅದನ್ನು ಹೇಗೆ ವಿತರಣೆ ಮಾಡುತ್ತದೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ಸರ್ಕಾರಕ್ಕೆ 2021- 22ನೇ ಸಾಲಿಗೆ ಯಾವುದರಿಂದ ಎಷ್ಟು ಆದಾಯ ಬರುತ್ತದೆ ಹಾಗೂ ಅದನ್ನು ಹೇಗೆ ಖರ್ಚು ಮಾಡುತ್ತದೆ ಎಂಬುದನ್ನು ಸರಳವಾಗಿ ವಿವರಿಸುವ ಉದ್ದೇಶದಿಂದ ಇಲ್ಲಿ ರುಪಾಯಿಗೆ ಇಳಿಸಲಾಗಿದೆ. ಅಂದರೆ ಸರ್ಕಾರಕ್ಕೆ ಒಂದು ರುಪಾಯಿ ಹಣ ಹೇಗೆ ಬರುತ್ತದೆ ಮತ್ತು ಅದರ ಖರ್ಚು ಹೇಗೆ ಎಂಬ ವಿವರಣೆ ಇದು.
ನೇರ ಹಾಗೂ ಪರೋಕ್ಷ ತೆರಿಗೆಯಿಂದ 53 ಪೈಸೆ ಬರುತ್ತದೆ.
ಹಣದ ಸಾಲ ಮತ್ತಿತರ ಸಾಲ ರೂಪಗಳಲ್ಲಿ 36 ಪೈಸೆ
ತೆರಿಗೆಯೇತರ ಆದಾಯ 6 ಪೈಸೆ
ಸಾಲಯೇತರ ಬಂಡವಾಳ ಸ್ವೀಕೃತಿ 5 ಪೈಸೆ.

ಸಂಸತ್ ನಲ್ಲಿ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರ ಪ್ರಕಾರ, 1 ರುಪಾಯಿಯಲ್ಲಿ 15 ಪೈಸೆ ಆದಾಯ ಜಿಎಸ್ ಟಿ ಮೂಲಕವೇ ಬರುತ್ತದೆ. ಇನ್ನು ಕಾರ್ಪೊರೇಟ್ ತೆರಿಗೆ 13 ಪೈಸೆ ಬರುತ್ತದೆ. 8 ಪೈಸೆಯನ್ನು ಕೇಂದ್ರ ಅಬಕಾರಿ ಸುಂಕ ಮತ್ತು 3 ಪೈಸೆ ಸೀಮಾ ಸುಂಕ, ಆದಾಯ ತೆರಿಗೆ ಮೂಲಕ 14 ಪೈಸೆ ಬರುತ್ತದೆ. ಇನ್ನು ಸಾಲದ ಮೂಲಕ ಸಂಗ್ರಹಿಸುವುದು ಹಾಗೂ ಇತರ ಸಾಲಗಳು 36 ಪೈಸೆ.
ಇನ್ನು ಖರ್ಚಿನ ವಿಚಾರಕ್ಕೆ ಬಂದರೆ, ಅತಿ ದೊಡ್ಡ ಪಾವತಿ ರುಪಾಯಿಗೆ 20 ಪೈಸೆ ಬಡ್ಡಿಗೆ ಅಂತಲೇ ನೀಡಲಾಗುತ್ತದೆ. ಆ ನಂತರ ರಾಜ್ಯಗಳ ಪಾಲಿನ ತೆರಿಗೆ ಮತ್ತು ಇತರ ಸುಂಕಗಳು 16 ಪೈಸೆ, ರಕ್ಷಣಾ ವಲಯಕ್ಕೆ 8 ಪೈಸೆ. ಕೇಂದ್ರ ವಲಯದ ಯೋಜನೆಗಳಿಗೆ 14 ಪೈಸೆ, ಕೇಂದ್ರದಿಂದ ಪ್ರಾಯೋಜಿತ ಯೋಜನೆಗಳಿಗೆ 9 ಪೈಸೆ, ಹಣಕಾಸು ಆಯೋಗ ಮತ್ತು ಇತರ ವರ್ಗಾವಣೆ 10 ಪೈಸೆ, ಸಬ್ಸಿಡಿ ಮತ್ತು ಪಿಂಚಣಿ ಕ್ರಮವಾಗಿ 8 ಮತ್ತು 5 ಪೈಸೆ ಹಾಗೂ ಇತರ ವೆಚ್ಚಗಳಿಗಾಗಿ 10 ಪೈಸೆ ಖರ್ಚು ಮಾಡುತ್ತದೆ.


Click it and Unblock the Notifications