ಬೈಜೂಸ್ ಬ್ರ್ಯಾಂಡ್ ಹೆಸರಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಶಿಕ್ಷಣ ತಂತ್ರಜ್ಞಾನ ಸ್ಟಾರ್ಟ್ಅಪ್ ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ (ಟಿಎಲ್‌ಪಿಎಲ್) ಪ್ರಸ್ತುತ ಭಾರೀ ಆರ್ಥಿಕ ಸಂಕಷ್ಟದಲ್ಲಿದೆ. ಆದರೆ ದಿನದಿಂದ ದಿನಕ್ಕೆ ಒಂದಲ್ಲ ಒಂದು ಸಮಸ್ಯೆ ಬೈಜೂಸ್‌ಗೆ ಎದುರಾಗುತ್ತಿದೆ.
ಇದೀಗ ಸಂಸ್ಥೆಯ ಉನ್ನತ ಕಾರ್ಯನಿರ್ವಾಹಕ ಚೆರಿಯನ್ ಥಾಮಸ್ ಬೈಜೂಸ್‌ಗೆ ರಾಜೀನಾಮೆ ನೀಡಿದ್ದಾರೆ. ಈ ಹಿಂದೆಯೂ ಹಲವಾರು ಮಂದಿ ಬೈಜೂಸ್‌ಗೆ ರಾಜೀನಾಮೆ ನೀಡುತ್ತಾ ಬಂದಿದ್ದಾರೆ. ಚೆರಿಯನ್ ಥಾಮಸ್ ಬೈಜೂಸ್ ತೊರೆದು ಯುಎಸ್ ಮೂಲದ ಮೊಬೈಲ್ ಅಪ್ಲಿಕೇಶನ್ ಡೆವಲಪರ್ ಇಂಪೆಂಡಿಂಗ್ ಇಂಕ್‌ಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇರ್ಪಡೆಯಾಗಲಿದ್ದಾರೆ. ಚೆರಿಯನ್ ಥಾಮಸ್ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಚೆರಿಯನ್ ಥಾಮಸ್ ಯಾರು ತಿಳಿಯಿರಿ
ಚೆರಿಯನ್ ಥಾಮಸ್ ಸುಮಾರು ಆರು ವರ್ಷಗಳ ಕಾಲ ಬೈಜೂಸ್‌ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಬೈಜೂಸ್‌ನಲ್ಲಿ ಚೆರಿಯನ್ ಥಾಮಸ್ ಅಂತಾರಾಷ್ಟ್ರೀಯ ವ್ಯಾಪಾರದ ಹಿರಿಯ ಉಪಾಧ್ಯಕ್ಷ ಸ್ಥಾನವನ್ನು ನಿರ್ವಹಣೆ ಮಾಡುತ್ತಾ ಬಂದಿದ್ದಾರೆ. ಚೆರಿಯನ್ ಥಾಮಸ್ 2017 ರಲ್ಲಿ ಬೈಜೂಸ್‌ಗೆ ಸೇರಿ ಸಂಸ್ಥೆಯ ಮೊದಲ ಜಾಗತಿಕ ಉದ್ಯೋಗಿಯಾದರು.
ಚೆರಿಯನ್ ಥಾಮಸ್ ಮೊದಲಿನಿಂದಲೂ ಜಾಗತಿಕ ತಂಡವನ್ನು ನಿರ್ಮಿಸಲು ಪ್ರಯತ್ನ ಪಟ್ಟಿದ್ದಾರೆ. ಇದರಿಂದಾಗಿ ಓಸ್ಮೋದಂತಹ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಬೈಜೂಸ್‌ಗೆ ಸಾಧ್ಯವಾಗಿದೆ. ಈ ಎಜುಕೇಷನ್ ಟೆಕ್ ಸಂಸ್ಥೆಯು ತನ್ನ ಮೊದಲ ಯುಎಸ್ ಸಂಸ್ಥೆಯ ಸ್ವಾಧೀನ ಪ್ರಕ್ರಿಯೆಯನ್ನು 2019 ರಲ್ಲಿ ಪೂರ್ಣಗೊಳಿಸಿದೆ. ಶೈಕ್ಷಣಿಕ ಆಟಗಳ ತಯಾರಕ ಸಂಸ್ಥೆಯನ್ನು 120 ಮಿಲಿಯನ್ ಡಾಲರ್‌ಗೆ ಬೈಜೂಸ್ ಪಡೆದುಕೊಂಡಿದೆ.
ಇನ್ನು ಚೆರಿಯನ್ ಥಾಮಸ್ ಸೇರಲಿರುವ ಯುಎಸ್ ಮೂಲದ ಮೊಬೈಲ್ ಅಪ್ಲಿಕೇಶನ್ ಡೆವಲಪರ್ ಇಂಪೆಂಡಿಂಗ್ ಇಂಕ್ ಕ್ಲಿಯರ್, ಹೆಡ್ಸ್ ಅಪ್ ಮತ್ತು ಕ್ಲಾಸಿಕ್ಸ್‌ನಂತಹ ಪ್ರಸಿದ್ಧ ಆಟಗಳಿಗೆ ಹೆಸರುವಾಸಿಯಾಗಿದೆ. ಈ ಸಂಸ್ಥೆಯು ಗೇಮಿಂಗ್ ವಲಯದಲ್ಲಿ ವಿಶಿಷ್ಟವಾದ ಆವಿಷ್ಕಾರಗಳಿಗೆ ಜನಪ್ರಿಯವಾಗಿದೆ.
ಚೆರಿಯನ್ ಥಾಮಸ್ ತನ್ನ ನೋಟಿಸ್ ಅವಧಿಯನ್ನು ಬೈಜೂಸ್‌ನಲ್ಲಿ ಕಳೆದಿದ್ದು, ಕಳೆದ ವಾರವೇ ಕಂಪನಿಯನ್ನು ತೊರೆದಿದ್ದಾರೆ. ಬೈಜೂಸ್‌ಗೆ ಸೇರುವ ಮುನ್ನ ಚೆರಿಯನ್ ಥಾಮಸ್ ಮೊದಲ ಆಹಾರ ಬ್ಲಾಗಿಂಗ್ ವೇದಿಕೆಯಾದ ಕುಕಂಬರ್‌ಟೌನ್‌ನ ಸಹಸಂಸ್ಥಾಪಕರಾಗಿದ್ದಾರೆ. ಜೂನ್ 2015 ರಲ್ಲಿ, ಅತಿದೊಡ್ಡ ಆಹಾರ ಜಾಲವಾದ ಕುಕ್‌ಪ್ಯಾಡ್ ಜಪಾನ್ ಕುಕಂಬರ್‌ಟೌನ್ ಅನ್ನು ಸ್ವಾಧೀನಪಡಿಸಿಕೊಂಡಿತು.
ಥಾಮಸ್ ಗೇಮಿಂಗ್ ಮೇಜರ್ ಝಿಂಗಾ ಜೊತೆಗೆ ಕೆಲಸ ಮಾಡಿದ್ದಾರೆ. ವರದಿಗಳ ಪ್ರಕಾರ ಅದರ ಆರಂಭಿಕ ಉದ್ಯೋಗಿಗಳಲ್ಲಿ ಚೆರಿಯನ್ ಥಾಮಸ್ ಕೂಡಾ ಒಬ್ಬರಾಗಿದ್ದಾರೆ. ಎಂಜಿನಿಯರಿಂಗ್, ಉತ್ಪನ್ನ ನಿರ್ವಹಣೆ, ವ್ಯವಸ್ಥಾಪಕರಾಗಿ ಝಿಂಗಾದಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ.
ಬೈಜೂಸ್‌ನ ಪ್ರಮುಖ ಹುದ್ದೆಗೆ ಸೇರಿದ ರಿಚರ್ಡ್
ಐಟಿ ಕಂಪನಿಯಾದ ಇನ್ಫೋಸಿಸ್‌ನ ಮಾಜಿ ಹಿರಿಯ ಎಕ್ಸಿಕ್ಯೂಟೀವ್ ರಿಚರ್ಡ್ ಲೋಬೊ ಅವರು ಬೈಜೂಸ್ ಎಜ್ಯುಟೆಕ್‌ನ ಮಾನವ ಸಂಪನ್ಮೂಲ ವಿಭಾಗವನ್ನು ಸೇರಿಕೊಂಡಿದ್ದಾರೆ. ಲೋಬೊ ಅವರು ಇನ್ಫೋಸಿಸ್‌ನಲ್ಲಿ 23 ವರ್ಷಗಳ ಸುಧೀರ್ಘ ವೃತ್ತಿ ಬದುಕಿನಲ್ಲಿ ನಾನಾ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
"ನಾನು ಈ ಪ್ರಮುಖ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಉತ್ಸುಕನಾಗಿದ್ದೇನೆ ಹಾಗೂ ಬೈಜೂಸ್ ತಂಡದೊಂದಿಗೆ ಸೇರಿಕೊಂಡು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಪ್ರಯುತ್ನ ಮಾಡಲಾಗುವುದು," ಎಂದು ಲೋಬೊ ಹೇಳಿದ್ದಾರೆ.


Click it and Unblock the Notifications