ಭಾರತದ ಸ್ಟಾರ್ಟ್ ಅಪ್ ಗಳಲ್ಲಿ ಆಗಿರುವ ಚೈನೀಸ್ ಹೂಡಿಕೆಗಳ ಬಗ್ಗೆ ತನಿಖೆ ನಡೆಸಬೇಕು ಎಂದು ವರ್ತಕರ ಒಕ್ಕೂಟವಾದ CAIT ಭಾನುವಾರ ಸರ್ಕಾರವನ್ನು ಆಗ್ರಹಪಡಿಸಿದೆ. ವಾಣಿಜ್ಯ ಹಾಗೂ ಕೈಗಾರಿಕೆ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರಿಗೆ ಈ ಬಗ್ಗೆ ಕಾನ್ಫಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ಪತ್ರ ಬರೆದಿದೆ.
ಭಾರತದ ಪ್ರಮುಖ 141 ಸ್ಟಾರ್ಟ್ ಅಪ್ ಗಳ ಪಟ್ಟಿಯೊಂದನ್ನು ಹಂಚಿಕೊಂಡಿದ್ದು, ಅವುಗಳಲ್ಲಿ ಚೀನಾ ಮೂಲದ ಹೂಡಿಕೆ ಇದೆ ಎಂದು ಹೇಳಲಾಗಿದೆ. ಆತಿಥ್ಯ, ಆಹಾರ ಡೆಲಿವರಿ, ಐಟಿ, ಲಾಜಿಸ್ಟಿಕ್ಸ್, ಪಾವತಿ ಅಪ್ಲಿಕೇಷನ್ ಗಳು, ಇ ಕಾಮರ್ಸ್ ಪ್ರವಾಸ, ಸಾಗಣೆ, ಫಾರ್ಮಾಸ್ಯುಟಿಕಲ್ಸ್, ಇನ್ಷೂರೆನ್ಸ್, ಷೇರು ಮಾರುಕಟ್ಟೆ, ಹೆಲ್ತ್ ಕೇರ್, ಐ ಕೇರ್, ಪ್ಲೇ ಅಪ್ಲಿಕೇಷನ್ ಮತ್ತಿತರ ಕ್ಷೇತ್ರಗಳಲ್ಲಿ ಚೀನಾ ಮೂಲದ ಕಂಪೆನಿಗಳ ಹೂಡಿಕೆ ಇದೆ ಎನ್ನಲಾಗಿದೆ.

ಇದನ್ನು ಗಮನಿಸಿದರೆ ಚೀನೀ ಕಂಪೆನಿಗಳ ಯೋಜಿತ ಕಾರ್ಯತಂತ್ರ ಎನಿಸುತ್ತದೆ. ತಮ್ಮ ಹೂಡಿಕೆ ಮೂಲಕ ಭಾರತೀಯರ ಬಗ್ಗೆ ಮಹತ್ವದ ದತ್ತಾಂಶಗಳನ್ನು ಚೀನೀ ಕಂಪೆನಿಗಳು ಪಡೆದುಕೊಂಡಿವೆ. ಆದ್ದರಿಂದ ಈ ಮೇಲ್ಕಂಡಂತೆ ಪ್ರಸ್ತಾವ ಮಾಡಿರುವ ಸಂಸ್ಥೆಗಳ ಬಗ್ಗೆ ಆಳವಾದ ತನಿಖೆ ಆಗಬೇಕು. ಅವುಗಳ ವ್ಯವಹಾರದ ಮಾದರಿಯನ್ನು ಕೂಲಂಕಷವಾಗಿ ಪರಿಶೀಲಿಸುವುದು ಹೆಚ್ಚು ಅಗತ್ಯ ಎಂದು CAIT ಪತ್ರದಲ್ಲಿ ಆಗ್ರಹಿಸಿದೆ.
ಇನ್ನು ಭವಿಷ್ಯದಲ್ಲಿ ಯಾವುದೇ ಹೂಡಿಕೆ ಮಾಡಬೇಕಾದರೂ ಸರ್ಕಾರದ ಮೂಲಕವೇ ಆಗಬೇಕು. ಆಟೋಮೆಟಿಕ್ ಆಗಿ ಮಾಡಬಾರದು ಎಂದು ಕೂಡ ಸಲಹೆ ನೀಡಲಾಗಿದೆ.


Click it and Unblock the Notifications