ರಾಜ್ಯ ಸರ್ಕಾರಗಳು ವಿಮಾನ ನಿಲ್ದಾಣಗಳನ್ನು ತೆರೆಯಲು ಸಿದ್ಧವಾದ ಮೇಲಷ್ಟೇ ದೇಶೀ ವಿಮಾನ ಹಾರಾಟ ನಡೆಯಲಿದೆ ಎಂದು ನಾಗರಿಕ ವಿಮಾನ ಯಾನ ಖಾತೆ ಸಚಿವ ಮಂಗಳವಾರ ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರವೊಂದೇ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ದೇಶದಾದ್ಯಂತ ಮೊದಲ ಬಾರಿಗೆ ಲಾಕ್ ಡೌನ್ ಘೋಷಣೆ ಮಾಡಿದ ಮಾರ್ಚ್ 25ರಿಂದ ದೇಶೀ ವಿಮಾನ ಹಾರಾಟ ಸೇವೆಯನ್ನು ರದ್ದು ಮಾಡಲಾಗಿದೆ. ಇದೀಗ ಮೇ 31ನೇ ತಾರೀಕಿನ ತನಕ ಲಾಕ್ ಡೌನ್ ವಿಸ್ತರಣೆ ಆಗಿದೆ. ಈಚೆಗೆ ಕೇಂದ್ರದಿಂದ ಅಂತರರಾಜ್ಯ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಜತೆಗೆ ಸ್ಥಳೀಯ ಸಂಚಾರಕ್ಕೂ ವಿನಾಯಿತಿ ಸಿಕ್ಕಿದೆ.
ಟ್ಯಾಕ್ಸಿ, ಆಟೋರಿಕ್ಷಾ, ಬಸ್ ಗಳ ಕಾರ್ಯ ನಿರ್ವಹಣೆಗೆ ಅವಕಾಶ
ಹಲವು ರಾಜ್ಯಗಳಲ್ಲಿ ಟ್ಯಾಕ್ಸಿ, ಆಟೋರಿಕ್ಷಾ, ಬಸ್ ಗಳ ಕಾರ್ಯ ನಿರ್ವಹಣೆಗೆ ಅವಕಾಶ ನೀಡಿವೆ. ಆದರೆ ಈ ತಿಂಗಳ ಕೊನೆಯ ತನಕ ವಿಮಾನ ಹಾರಾಟ ಸೇವೆಯನ್ನು ನಿಷೇಧಿಸಲಾಗಿದೆ. ಈ ಲಾಕ್ ಡೌನ್ ಅವಧಿಯಲ್ಲಿ ಸರಕುಗಳು, ವೈದ್ಯಕೀಯ ಸ್ಥಳಾಂತರ ಮತ್ತು ವಿಶೇಷ ವಿಮಾನಗಳ ಕಾರ್ಯ ನಿರ್ವಹಣೆ ಮಾತ್ರ ಇರುತ್ತವೆ.
ಗ್ರೇಡೆಡ್ ವಿಧಾನದಲ್ಲಿ ವಿಮಾನ ಹಾರಾಟ ಆರಂಭ
ಭಾರತ ವಿಮಾನ ನಿಲ್ದಾಣಾ ಪ್ರಾಧಿಕಾರವು "ಗ್ರೇಡೆಡ್ ವಿಧಾನ"ದಲ್ಲಿ ವಿಮಾನ ಹಾರಾಟ ಸೇವೆ ಪುನರಾರಂಭಕ್ಕೆ ಮಾರ್ಗದರ್ಶಿ ಸೂತ್ರ ನೀಡಿದೆ. ವಿಮಾನದೊಳಗೆ ಕಟ್ಟುನಿಟ್ಟಾಗಿ ಅಂತರ ಕಾಯ್ದುಕೊಳ್ಳಬೇಕು. ಒಬ್ಬರಿಂದ ಮತ್ತೊಬ್ಬರಿಗೆ ಕನಿಷ್ಠ ನಾಲ್ಕು ಅಡಿ ಅಂತರ ಇರಬೇಕು. ಅದೇ ರೀತಿ ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು.
ಜೂನ್ ಬುಕ್ಕಿಂಗ್ ಆರಂಭವಾಗಿದೆ
ವಿಮಾನ ಯಾನ ಸಚಿವರು ಮಾತನಾಡಿ, ವಿಮಾನ ಯಾನ ಕಾರ್ಯ ಚಟುವಟಿಕೆಗಳು ಗ್ರೇಡೆಡ್ ವಿಧಾನದಲ್ಲೇ ಆರಂಭವಾಗುವ ಸಾಧ್ಯತೆ ಇದೆ. ಆರಂಭದಲ್ಲಿ 25ರಿಂದ 30 ಪರ್ಸೆಂಟ್ ಸಾಮರ್ಥ್ಯದೊಂದಿಗೆ ಶುರುವಾಗಲಿದೆ. ಹಲವು ವಿಮಾನ ಯಾನ ಸಂಸ್ಥೆಗಳು ದೇಶೀ ವಿಮಾನ ಹಾರಾಟ ಸೇವೆಗಾಗಿ ಜೂನ್ ನಿಂದ ಟಿಕೆಟ್ ಬುಕ್ಕಿಂಗ್ ಆರಂಭಿಸಿವೆ. ದೇಶೀಯ ವಿಮಾನದ ಬುಕ್ಕಿಂಗ್ ಆರಂಭಿಸಿರುವುದಾಗಿ ಇಂಡಿಗೋ ಹಾಗೂ ವಿಸ್ತಾರ ಸಂಸ್ಥೆಗಳು ತಿಳಿಸಿವೆ.


Click it and Unblock the Notifications