ಲಾಕ್ ಡೌನ್ ಅವಧಿಯಲ್ಲಿ ಮನೆಯಿಂದಲೇ ಕೆಲಸ ಮಾಡಿ, ಕಚೇರಿಗಳಿಗೆ ಹಾಜರಾಗದಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಪ್ರಯಾಣ ಭತ್ಯೆ ನೀಡುವುದಿಲ್ಲ ಎಂದು ಸಿಬ್ಬಂದಿ ಮತ್ತು ತರಬೇತಿ (DoPT) ಇಲಾಖೆಯು ಸ್ಪಷ್ಟ ಪಡಿಸಿದ್ದು, ಈ ಕುರಿತು ಕಚೇರಿ ನೆನಪಿನೋಲೆಯನ್ನು ಹೊರಡಿಸಲಾಗಿದೆ.
ಡಿಸೆಂಬರ್ 1, 2020ರಂದು ಈ ಆದೇಶ ಹೊರಬಂದಿದ್ದು, ಕಚೇರಿ ಮತ್ತು ಮನೆಯ ಮಧ್ಯೆ ಪ್ರಯಾಣಕ್ಕಾಗಿ ಪ್ರಯಾಣ ಭತ್ಯೆಯನ್ನು ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುತ್ತಿತ್ತು. ಆದ್ದರಿಂದ ಯಾವ ತಿಂಗಳಲ್ಲಿ ಲಾಕ್ ಡೌನ್ ಕಾರಣಕ್ಕೆ ಕಚೇರಿಗೆ ಬಂದಿಲ್ಲವೋ ಅಂಥ ಸಿಬ್ಬಂದಿಯು ಪ್ರಯಾಣ ಭತ್ಯೆ ಪಡೆಯುವುದಕ್ಕೆ ಅರ್ಹರಲ್ಲ. ಏಕೆಂದರೆ, ಇಡೀ ತಿಂಗಳು ಕಚೇರಿಗೇ ಬಾರದಿದ್ದ ಮೇಲೆ ಪ್ರಯಾಣಕ್ಕೆ ಖರ್ಚಾಗುವುದು ಏನೂ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಕೆಲವು ಸಿಬ್ಬಂದಿಗೆ ಕಚೇರಿಗೆ ಬರುವುದರಿಂದ ಕೇಂದ್ರ ಸರ್ಕಾರ ವಿನಾಯಿತಿ ನೀಡಿತ್ತು. ದೈಹಿಕ ಅಂಗವಿಕಲತೆ ಇರುವ ಸಿಬ್ಬಂದಿ, ಗರ್ಭಿಣಿ ಉದ್ಯೋಗಿಗಳಿಗೆ ಕಚೇರಿಗೆ ಬರುವುದರಿಂದ ವಿನಾಯಿತಿ ನೀಡಿ, ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅನುಮತಿ ನೀಡಲಾಗಿತ್ತು. ಅಂಥವರು ಸಹ ಪ್ರಯಾಣ ಭತ್ಯೆ ಎಂದು ಪಡೆಯುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ.

ಅದೇ ರೀತಿ ಕೋವಿಡ್- 19 ಇರುವುದರಿಂದ ಸಾರ್ವಜನಿಕ ಸಾರಿಗೆ ಇಲ್ಲದೆ, ಮನೆ ಹಾಗೂ ಕಚೇರಿ ಮಧ್ಯೆ ಪ್ರಯಾಣಿಸಲು ಇಡೀ ತಿಂಗಳು ಕಾರಿನ ವ್ಯವಸ್ಥೆ ಮಾಡಿಕೊಟ್ಟಿರುವ ಅಧಿಕಾರಿಗಳು/ಸಿಬ್ಬಂದಿ ಸಹ ಪ್ರಯಾಣ ಭತ್ಯೆ ಪಡೆಯುವುದಕ್ಕೆ ಅರ್ಹರಲ್ಲ ಎಂದು ತಿಳಿಸಲಾಗಿದೆ.


Click it and Unblock the Notifications