ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದ್ದ ಜಿಎಸ್‌ಟಿ ಪರಿಹಾರವನ್ನು ಬಿಡುಗಡೆಗೊಳಿಸಿದ್ದು, ಆದಾಯ ನಷ್ಟವನ್ನು ಸರಿದೂಗಿಸಲು ಒಟ್ಟಾರೆ 35,298 ಕೋಟಿ ರುಪಾಯಿಗಳನ್ನು ರಾಜ್ಯಗಳಿಗೆ ಬಿಡುಗಡೆ ಮಾಡಿದೆ.
ಜುಲೈ 1, 2017ರಿಂದ ರಾಜ್ಯಗಳು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಗೆ ಸೇರಿಕೊಂಡ ಬಳಿಕ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಗಳನ್ನು ಸಂಗ್ರಹಿಸುವ ಅಧಿಕಾರಕ್ಕೆ ಶರಣಾದವು. ಹೀಗಾಗಿ ಮೊದಲ 5 ವರ್ಷದಲ್ಲಿ ಆಗಿರುವ ಯಾವುದೇ ಆದಾಯ ನಷ್ಟವನ್ನು ರಾಜ್ಯಗಳಿಗೆ ಭರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಇತ್ತೀಚೆಗಷ್ಟೇ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ತಿಳಿಸಿದ್ದರು.

ಕೇಂದ್ರ ಸರ್ಕಾರವು 2016-17 ಮೂಲ ವರ್ಷದಲ್ಲಿ ಪರಿಹಾರ ಮೊತ್ತವನ್ನು ಆದಾಯದ ಮೇಲೆ ಶೇಕಡಾ 14ಕ್ಕೆ ನಿಗದಿ ಪಡಿಸಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟಾರೆಯಾಗಿ 35,298 ಕೋಟಿ ರುಪಾಯಿ ಜಿಎಸ್‌ಟಿ ಪರಿಹಾರ ಬಿಡುಗಡೆ ಮಾಡಿದೆ ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ ತನ್ನ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.
ಎನ್‌ಡಿಎಯೇತರ ರಾಜ್ಯ ಸರಕಾರಗಳ ಮುಖ್ಯಮಂತ್ರಿಗಳು ಇತ್ತೀಚೆಗಷ್ಟೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ಭೇಟಿ ಈ ಬಗ್ಗೆ ಮನವಿ ಮಾಡಿಕೊಂಡಿದ್ದರು. ವಿಪಕ್ಷಗಳು ಆಡಳಿತ ನಡೆಸುವ ರಾಜ್ಯ ಸರಕಾರಗಳು ಹೇಳುವ ಪ್ರಕಾರ ಕೇಂದ್ರದಿಂದ 50 ಸಾವಿರ ಕೋಟಿ ರುಪಾಯಿ ಬಾಕಿ ಇದೆ. ಪರಿಹಾರ ವಿಳಂಭವಾಗಿದ್ದರಿಂದ ಬಿಜೆಪಿಯೇತರ ಸರ್ಕಾರಗಳು ಕೇಂದ್ರದ ವಿರುದ್ಧ ಭಾರೀ ಟೀಕೆ ಮಾಡಿದ್ದವು.
ಜಿಎಸ್‌ಟಿ ಉನ್ನತ ಮಂಡಳಿ ಸಭೆಯು ಇದೇ 18ರಂದು (ಬುಧವಾರ) ನವದೆಹಲಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಜಿಎಸ್‌ಟಿ ಸಂಗ್ರಹ, ಪರಿಹಾರ ನೀಡಿಕೆ, ಪರಿಹಾರ ವಿಳಂಭದ ಕುರಿತು ಬಿರುಸಿನ ಚರ್ಚೆಯಾಗುವ ಸಾಧ್ಯತೆ ಇದೆ.


Click it and Unblock the Notifications