ಭಾರತದಲ್ಲಿ ಮಾರುಕಟ್ಟೆ ನಿಯಮಗಳ ಪ್ರಕಾರ ಚೀನಾದ ವ್ಯಾಪಾರ- ವ್ಯವಹಾರವೂ ಸೇರಿದಂತೆ ವಿದೇಶೀ ಹೂಡಿಕೆದಾರರ ಕಾನೂನುಬದ್ಧ ಹಕ್ಕು ಹಾಗೂ ಆಸಕ್ತಿಯನ್ನು ರಕ್ಷಿಸಬೇಕಾದದ್ದು ಆ ದೇಶದ ಜವಾಬ್ದಾರಿ ಎಂದು ನವದೆಹಲಿಯಲ್ಲಿ ಇರುವ ಚೀನಾ ರಾಯಭಾರ ಕಚೇರಿ ವಕ್ತಾರರು ಮಂಗಳವಾರ ಹೇಳಿದ್ದಾರೆ.
ಚೀನಾದ ಮೊಬೈಲ್ ಫೋನ್ ಗಳಲ್ಲಿ ಪ್ರಮುಖವಾಗಿ ಬಳಸುವ ಅಪ್ಲಿಕೇಷನ್ ಗಳನ್ನು ಎರಡನೇ ಕಂತಿನಲ್ಲಿ ನಿಷೇಧ ಮಾಡಿರುವುದನ್ನು ಸೋಮವಾರ ಭಾರತ ಘೋಷಿಸಿತು. ಈ ಘೋಷಣೆಯ ಬೆನ್ನಿಗೇ ಪ್ರತಿಕ್ರಿಯೆ ಬಂದಿದೆ. ಜೂನ್ 29ನೇ ತಾರೀಕಿನಂದು ಭಾರತ ಸರ್ಕಾರ ನಿಷೇಧಿಸಿದ 59 ಅಪ್ಲಿಕೇಷನ್ ಗಳನ್ನೇ ಹೋಲುವಂತಿವೆ ಅಥವಾ ಅದರದೇ ತದ್ರೂಪಿನಂತೆ ಇವೆ ಈಗ ನಿಷೇಧ ಮಾಡಿರುವ ಆಪ್ ಗಳು.
ಪರಸ್ಪರ ಸಹಕಾರದಿಂದ ಎರಡೂ ದೇಶಕ್ಕೆ ಲಾಭ
ವಾಸ್ತವ ನೆಲೆಗಟ್ಟಿನಲ್ಲಿ ಚೀನಾ ಹಾಗೂ ಭಾರತ ಪರಸ್ಪರ ಸಹಕಾರ ನೀಡುವುದರಿಂದ ಎರಡೂ ದೇಶಕ್ಕೆ ಅನುಕೂಲ. ಇಂಥ ಸಹಕಾರದ ಮಧ್ಯೆ ಉದ್ದೇಶಪೂರ್ವಕವಾಗಿ ಹಸ್ತಕ್ಷೇಪ ಮಾಡಿದಲ್ಲಿ ಭಾರತದ ಹಿತಾಸಕ್ತಿ ಕಾಪಾಡಲು ಸಾಧ್ಯವಿಲ್ಲ. ಚೈನೀಸ್ ಕಂಪೆನಿಗಳ ಕಾನೂನುಬದ್ಧ ಹಕ್ಕುಗಳು ಹಾಗೂ ಆಸಕ್ತಿಯನ್ನು ಕಾಪಾಡಲು ಚೀನಾ ಕೂಡ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಚೀನಾ ರಾಯಭಾರ ಕಚೇರಿ ವಕ್ತಾರ ಜಿ ರೊಂಗ್ ಹೇಳಿಕೆ ನೀಡಿದ್ದಾರೆ.
ನಿಷೇಧಿಸಿದ ಅಪ್ಲಿಕೇಷನ್ ಗಳ ತದ್ರೂಪು ಮತ್ತೆ ಟಾಪ್ ನಲ್ಲಿ
ಭಾರತ- ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಏರ್ಪಟ್ಟ ನಂತರ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಯಿತು. ಚೀನಾ ಮೂಲದ ಕಂಪೆನಿಯ ಟಿಕ್ ಟಾಕ್ ಸೇರಿದಂತೆ ಇತರ ಆಪ್ ಗಳನ್ನು ಜೂನ್ ತಿಂಗಳಲ್ಲಿ ನಿಷೇಧಿಸಿತ್ತು. ಇದೀಗ ಆ ಆಪ್ ಗಳ ತದ್ರೂಪಿನಂತೆ ಇರುವವು ಗೂಗಲ್ ಪ್ಲೇನಲ್ಲಿ ಟಾಪ್ ಗೆ ಬಂದಿವೆ. ಅವುಗಳನ್ನು ಚೈನೀಸ್ ಡೆವಲಪರ್ ಗಳೇ ಅಭಿವೃದ್ಧಿಪಡಿಸಿದ್ದಾರೆ.
ರಸ್ತೆ, ಟೆಲಿಕಾಂ ಬಿಡ್ಡಿಂಗ್ ಕೂಡ ಮಾಡುವಂತಿಲ್ಲ
ಈ ಮಧ್ಯೆ ಭಾರತದ ರಸ್ತೆ, ಟೆಲಿಕಾಂ ಯೋಜನೆಗಳಲ್ಲಿ ಬಿಡ್ಡಿಂಗ್ ಗೆ ಭಾಗವಹಿಸದಂತೆ ಚೈನೀಸ್ ಕಂಪೆನಿಗಳಿಗೆ ನಿಷೇಧ ಹೇರಲಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ, ಅಂತರರಾಷ್ಟ್ರೀಯ ಕಾನೂನುಗಳಿಗೆ ಭಾರತ ಬದ್ಧವಾಗಿರಬೇಕು. ಈಗ ನಡೆಯುತ್ತಿರುವ ತಪ್ಪನ್ನು ಸರಿಪಡಿಸಬೇಕು ಎಂದು ಚೀನಾ ಕಡೆಯಿಂದ ಒತ್ತಾಯಿಸಲಾಗಿದೆ.


Click it and Unblock the Notifications