ಇತ್ತೀಚೆಗಷ್ಟೇ ವಿದೇಶಿ ಹೂಡಿಕೆ ನಿಯಮದಲ್ಲಿ ಬದಲಾವಣೆ ತಂದ ಭಾರತದ ನಿರ್ಧಾರವನ್ನು ಅವಕಾಶವಾದಿ ಚೀನಾ ವಿರೋಧಿಸಿದೆ. ಇದು ಜಿ20 ನಿಯಮಗಳಿಗೆ ವಿರುದ್ಧವಾಗಿದ್ದು ಮುಕ್ತ ವ್ಯಾಪಾರದ ಸಾಮಾನ್ಯ ಪ್ರವೃತ್ತಿಗಳಿಗೆ ವಿರುದ್ಧವಾದ ನಡೆ ಎಂದು ಟೀಕಿಸಿದೆ.
ಹಿಂದೆ ಇದ್ದ ವಿದೇಶಿ ಹೂಡಿಕೆ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿರುವ ಭಾರತವು ದೇಶವು ಸಂಕಷ್ಟದಲ್ಲಿದ್ದಾಗ, ಲಾಕ್‌ಡೌನ್ ವೇಳೆಯಲ್ಲಿ ಅವಕಾಶವಾದಿ ಜನರು ಸುಲಭವಾಗಿ ದೇಶದ ಕಂಪನಿಗಳ ಮೇಲೆ ಹಿಡಿದ ಸಾಧಿಸದಿರಲು , ಹೂಡಿಕೆ ಮಾಡದಿರಲು ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಆದರೆ ಭಾರತ ಸರ್ಕಾರವು ನಿರ್ದಿಷ್ಟ ದೇಶಗಳಿಂದ ವಿದೇಶಿ ನೇರ ಹೂಡಿಕೆಗಾಗಿ ಸೂಚಿಸಿರುವ ಹೊಸ ಮಾನದಂಡಗಳು ವಿಶ್ವ ವ್ಯಾಪಾರ ಸಂಘಟನೆಯ ತಾರತಮ್ಯ ರಹಿತ ತತ್ವಗಳಿಗೆ ವಿರುದ್ಧವಾಗಿವೆ ಎಂದು ಚೀನಾ ಹೇಳಿದೆ. ಅಲ್ಲದೇ ಇದು ಮುಕ್ತ ವ್ಯಾಪಾರದ ಆಶಯಗಳನ್ನು ಗಾಳಿಗೆ ತೂರುತ್ತದೆ ಎಂದೂ ಕಿಡಿಕಾರಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೀನಾದ ರಾಯಭಾರ ಕಚೇರಿಯ ವಕ್ತಾರ ಜೀ ರಾಂಗ್, ಭಾರತ ತನ್ನ ಎಫ್‌ಡಿಐ ನೀತಿಯಲ್ಲಿ ಮಾಡಿಕೊಂಡ ಬದಲಾವಣೆಗಳು ನ್ಯಾಯಸಮ್ಮತವಾಗಿಲ್ಲ ಎಂದು ಟೀಕಿಸಿದ್ದಾರೆ. ಭಾರತದ ಈ ನಿರ್ಧಾರ ಹೆಚ್ಚುವರಿ ಅಡೆತಡೆಗಳನ್ನು ಸೃಷ್ಟಿಸಿದ್ದು, ಇದು G-20 ನಿರ್ಣಯಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿವೆ ಎಂದು ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.
ಕೊರೊನಾವೈರಸ್ ಬಿಕ್ಕಟ್ಟಿನ ವೇಳೆ ದೇಶದ ಎಲ್ಲಾ ಉದ್ಯಮಗಳು ನಷ್ಟ ಅನುಭವಿಸುತ್ತಿವೆ. ಈ ವೇಳೆ ಅವಕಾಶವಾದಿಗಳು ಹೂಡಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದರಿತ ಭಾರತವು, ತನ್ನ ಭೂ ಗಡಿಯನ್ನು ಹಂಚಿಕೊಳ್ಳುವ ದೇಶಗಳು ವಿದೇಶಿ ಹೂಡಿಕೆಗಳಿಗೆ ಅನುಮತಿ ಪಡೆಯುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.


Click it and Unblock the Notifications