ಚೀನಾದ ಕೇಂದ್ರ ಬ್ಯಾಂಕ್ ಭಾರತದ ಹೌಸಿಂಗ್ ಡೆವಲಪ್ ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ನಲ್ಲಿ ಇದ್ದ ಷೇರಿನಲ್ಲಿ ಅಲ್ಪ ಪಾಲನ್ನು ಮಾರಾಟ ಮಾಡಿದೆ. ಎಚ್ ಡಿಎಫ್ ಸಿ ಷೇರುದಾರರ ಮಾಹಿತಿಯನ್ನು ಎಕ್ಸ್ ಚೇಂಜ್ ಗಳ ಜತೆ ಹಂಚಿಕೊಂಡಿದ್ದು, ಅದರಲ್ಲಿ ಈ ಬಗ್ಗೆ ಗೊತ್ತಾಗಿದೆ. ಜೂನ್ ಅಂತ್ಯದ ಕೊನೆಗೆ ಕನಿಷ್ಠ 1% ಪಾಲನ್ನಾದರೂ ಹೊಂದಿರುವ ಹೂಡಿಕೆದಾರರ ಪಟ್ಟಿಯಿಂದ ಪೀಪಲ್ ಬ್ಯಾಂಕ್ ಆಫ್ ಚೀನಾವನ್ನು (PBOC) ಕೈ ಬಿಡಲಾಗಿದೆ.
ಕಳೆದ ಮಾರ್ಚ್ ಅಂತ್ಯದ ಹೊತ್ತಿಗೆ PBOCಯಿಂದ ಎಚ್ ಡಿಎಫ್ ಸಿಯ 1.75 ಕೋಟಿ ಷೇರು, ಅಂದರೆ 1.01%ನಷ್ಟು ಷೇರಿನ ಪಾಲನ್ನು ಹೊಂದಿತ್ತು. ಚೀನಾದ ಕೇಂದ್ರ ಬ್ಯಾಂಕ್ ಯಾವುದಾರೂ ಷೇರನ್ನು ಅಡಮಾನದ ರೂಪದಲ್ಲಿ ಇಟ್ಟುಕೊಂಡಿದ್ದರೆ ಅದನ್ನು ನಿರ್ಧರಿಸುವುದು ಕಷ್ಟವಾಗಲಿದೆ.
ಮುಕ್ತ ಮಾರುಕಟ್ಟೆಯಲ್ಲಿ ಮಾರಿರಬಹುದು
PBOCಯಿಂದ ಸ್ವಲ್ಪ ಭಾಗದ ಷೇರನ್ನಾದರೂ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿರಬಹುದು ಎಂದು ಹಿಂದೂ ಬಿಜಿನೆಸ್ ಲೈನ್ ವರದಿ ಮಾಡಿತ್ತು. ಮಾರುಕಟ್ಟೆ ಮೂಲಗಳನ್ನು ಉದಾಹರಿಸಿ ಈ ವರದಿಯನ್ನು ಮಾಡಲಾಗಿತ್ತು. ಶುಕ್ರವಾರ ಬೆಳಗ್ಗೆ ಎಚ್ ಡಿಎಫ್ ಸಿ ಷೇರುಗಳು 2.2%ನಷ್ಟು ಕುಸಿತಗೊಂಡಿದ್ದವು.
ಏಪ್ರಿಲ್ ನಲ್ಲಿ ನಿಯಮ ರೂಪಿಸಿದ ಭಾರತ
ಜನವರಿಯಲ್ಲಿ ಎಚ್ ಡಿಎಫ್ ಸಿ ದಾಖಲೆಯ ಎತ್ತರದಲ್ಲಿ ಇತ್ತು. ಅಲ್ಲಿಂದ ಏಪ್ರಿಲ್ ನಲ್ಲಿ 40% ದರ ಕುಸಿಯಿತು. ಆ ನಂತರ 27 ಪರ್ಸೆಂಟ್ ಏರಿಕೆ ಕಂಡಿತು. ಮಾರ್ಚ್ ಅಂತ್ಯದ ಹೊತ್ತಿಗೆ ಭಾರತದಲ್ಲಿ PBOC ಹೂಡಿಕೆ ಪ್ರಮಾಣ ಹೆಚ್ಚಿಸಿತ್ತು. ಕೊರೊನಾದಲ್ಲಿ ಷೇರುಗಳ ಬೆಲೆ ಇಳಿಕೆ ಆಗಿದ್ದನ್ನೇ ಬಳಸಿಕೊಂಡು, ಕಂಪೆನಿ ಷೇರುಗಳ ಖರೀದಿ ಮಾಡದಿರುವಂತೆ ಏಪ್ರಿಲ್ ನಲ್ಲಿ ಭಾರತವು ಚೀನಾ ಸೇರಿದಂತೆ ನೆರೆ ರಾಷ್ಟ್ರಗಳು ಹೂಡಿಕೆ ಮಾಡುವ ಪ್ರಮಾಣಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ತಂದಿತು.
1%ಗೂ ಹೆಚ್ಚು ಷೇರು ಹೊಂದಿರುವ ಹೂಡಿಕೆದಾರರ ಮಾಹಿತಿ
ಭಾರತದಲ್ಲಿ ಸಾರ್ವಜನಿಕವಾಗಿ ವಹಿವಾಟು ನಡೆಸುವ ಯಾವುದೇ ಕಂಪೆನಿಯು ಪ್ರತಿ ತ್ರೈಮಾಸಿಕದ ಕೊನೆಗೆ ಆ ಕಂಪೆನಿಯಲ್ಲಿ 1%ಗೂ ಹೆಚ್ಚು ಷೇರು ಹೊಂದಿರುವ ಹೂಡಿಕೆದಾರರ ಮಾಹಿತಿಯನ್ನು ಬಹಿರಂಗ ಮಾಡಬೇಕು. ಈಚೆಗಿನ ಮಾಹಿತಿ ಪ್ರಕಾರ, ಎಚ್ ಡಿಎಫ್ ಸಿಯಲ್ಲಿ ಸಿಂಗಪೂರ್ ಸರ್ಕಾರ, ವ್ಯಾನ್ ಗಾರ್ಡ್ ಮತ್ತು ಇನ್ವೆಸ್ಕೋ ಓಪ್ಪೆನ್ ಹೈಮರ್ ಗಳು ಹೂಡಿಕೆ ಮಾಡಿವೆ.


Click it and Unblock the Notifications