ಇದು ಚೀನಾದಿಂದ ಬಂದಿರುವ ಸುದ್ದಿ. ಇಡೀ ಜಗತ್ತಿಗೆ ಗೊತ್ತಿದ್ದ ಸಂಗತಿ ಏನೆಂದರೆ, ಆ ದೇಶದ ಶ್ರೀಮಂತ ನಂಬರ್ ಒನ್ ಅನಿಸಿಕೊಂಡು ಈವರೆಗೆ ಇದ್ದದ್ದು ಅಲಿಬಾಬ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಜಾಕ್ ಮಾ. ಆದರೆ ಈಗ ನಂಬರ್ ಒನ್ ಸ್ಥಾನದಲ್ಲಿ ಬೇರೆ ವ್ಯಕ್ತಿ ಬಂದಿದ್ದಾರೆ. ಆತನ ಬಗ್ಗೆ ಮಾಹಿತಿಗಾಗಿ ಇಂಟರ್ ನೆಟ್ ಹೊಕ್ಕು ಹುಡುಕಾಡುವವರ ಸಂಖ್ಯೆ ಹೆಚ್ಚಾಗಿದೆ.
ಅಲಿಬಾಬದ ಜಾಕ್ ಮಾನನ್ನು ಅತ್ಯಂತ ಶ್ರೀಮಂತ ಎಂಬ ಸಿಂಹಾಸನದಿಂದ ಬದಿಗೆ ಸರಿಸಿ, ಅಲ್ಲಿ ವಿರಾಜಮಾನ ಆಗಿರುವ ವ್ಯಕ್ತಿಯ ಹೆಸರು ಮಾ ಹ್ಯುತೆಂಗ್. ಆ ವ್ಯಕ್ತಿಯ ಆಸ್ತಿ ಮೌಲ್ಯ 5000 ಕೋಟಿ ಅಮೆರಿಕನ್ ಡಾಲರ್. ಭಾರತದ ರುಪಾಯಿ ಲೆಕ್ಕದಲ್ಲಿ ಹೆಳಬೇಕು ಅಂದರೆ, 3.80 ಲಕ್ಷ ಕೋಟಿ. ಅಂದ ಹಾಗೆ ಜಾಕ್ ಮಾ ಬಳಿ ಇರುವ ಆಸ್ತಿ 4800 ಕೋಟಿ ಅಮೆರಿಕನ್ ಡಾಲರ್. ಭಾರತದ ರುಪಾಯಿಗಳಲ್ಲಿ 3.60 ಲಕ್ಷ ಕೋಟಿಗೂ ಹೆಚ್ಚು ಮೊತ್ತ.
ಈ ಮಾಹಿತಿಯನ್ನು ಬಯಲಿಗಿಟ್ಟಿರುವುದು ಬ್ಲೂಮ್ ಬರ್ಗ್ ಬಿಲಯನೇರ್ಸ್ ಸೂಚ್ಯಂಕ.
1998ರಲ್ಲಿ ಟೆನ್ಸೆಂಟ್ ಸ್ಥಾಪನೆ
ಮಾ ಹ್ಯುತೆಂಗ್ ಅವರನ್ನು ಪೋನಿ ಮಾ ಅಂತಲೂ ಕರೆಯಲಾಗುತ್ತದೆ. ಚೀನಾ ಮೋಷನ್ ಟೆಲಿಕಾಂ ಡೆವಲಪ್ ಮೆಂಟ್ ಲಿಮಿಟೆಡ್ ನಲ್ಲಿ ಇಂಟರ್ ನೆಟ್ ಪೇಜಿಂಗ್ ವ್ಯವಸ್ಥೆಯ ರೀಸರ್ಚ್ ಅಂಡ್ ಡೆವಲಪ್ ಮೆಂಟ್ ಮುನ್ನಡೆಸುತ್ತಿದ್ದ ವ್ಯಕ್ತಿ ಇವರು. ಅದು ಚೀನಾದಲ್ಲಿ ಟೆಲಿಕಮ್ಯುನಿಕೇಷನ್ ಸೇವೆ ಮತ್ತು ಉತ್ಪನ್ನಗಳನ್ನು ಒದಗಿಸುತ್ತಿತ್ತು. ಆ ನಂತರ 1998ರಲ್ಲಿ ಟೆನ್ಸೆಂಟ್ ಸಂಸ್ಥಾಪಕರಲ್ಲಿ ಒಬ್ಬರಾದರು. ಕಂಪೆನಿಯಲ್ಲಿ ಇರುವ ಮಾಹಿತಿ ಪ್ರಕಾರ ಮಾ ಹ್ಯುತೆಂಗ್ ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಅದರಲ್ಲಿ ಕಂಪ್ಯೂಟರ್ ಹಾಗೂ ಆನ್ವಯಿಕ ಎಂಜಿನಿಯರಿಂಗ್ ವಿಷಯದಲ್ಲಿ ಪರಿಣತಿ ಅವರದು. ಈ ಪದವಿ ಪಡೆದಿರುವುದು ಶೆಂಜಾನ್ ವಿಶ್ವವಿದ್ಯಾಲಯದಿಂದ.
2004ರಲ್ಲಿ ಹಾಂಕಾಂಗ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಷೇರು ವಿತರಣೆ
ಚೀನಾದಲ್ಲಿ ಬಹಳ ಹೆಸರು ಮಾಡಿರುವ WeChat ಎಂಬ ಸೋಷಿಯಲ್ ಮೀಡಿಯಾ ಮೆಸೇಜಿಂಗ್ ಅಪ್ಲಿಕೇಷನ್ ಸೇರಿದಂತೆ ಹಲವು ಇಂಟರ್ ನೆಟ್ ಪ್ಲಾಟ್ ಫಾರ್ಮ್ ಅಭಿವೃದ್ಧಿ ಪಡಿಸಿದ ಅಗ್ಗಳಿಕೆ ಇವರದು. ಜೂನ್ 16, 2004ರಲ್ಲಿ ಟೆನ್ಸೆಂಟ್ ಹಾಂಕಾಂಗ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಸಾರ್ವಜನಿಕರಿಗೆ ಷೇರು ವಿತರಣೆ ಮಾಡಿತು. ಈ ಕಂಪೆನಿಯಿಂದ ಆನ್ ಲೈನ್ ಗೇಮ್ ಗಳು, ವಿಡಿಯೋ, ಲೈವ್ ಸ್ಟ್ರೀಮಿಂಗ್, ಸುದ್ದಿ, ಸಂಗೀತ, ಸಾಹಿತ್ಯವನ್ನು ಒದಗಿಸಲಾಗುತ್ತದೆ. ಗೇಮಿಂಗ್ ವಿಭಾಗಕ್ಕೆ ಬಂದರೆ ಆನರ್ ಆಫ್ ಕಿಂಗ್ಸ್, ಪಬ್ ಜಿ ಮೊಬೈಲ್ ಹಾಗೂ ಲೀಗ್ ಆಫ್ ಲೆಜೆಂಡ್ಸ್ ನಂಥದ್ದನ್ನು ನೀಡಿದೆ.
ವಿಶ್ವದ ಅತ್ಯಂತ ಪ್ರಭಾವಿಗಳ ಪಟ್ಟಿಯಲ್ಲಿ ಹ್ಯುತೆಂಗ್
ವಿಕಿಪೀಡಿಯಾ ಮಾಹಿತಿಯಂತೆ ಮಾ ಹ್ಯುತೆಂಗ್ ಚೀನಾದ ವ್ಯಾಪಾರೋದ್ಯಮಿ, ಹೂಡಿಕೆದಾರ ಹಾಗೂ ದಾನಿ. ಮೂರು ಬಾರಿ (2007, 2014, 2018) ಟೈಮ್ ನಿಯತಕಾಲಿಕೆಯಲ್ಲಿ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2015ರಲ್ಲಿ ಫೋರ್ಬ್ಸ್ ನಿಂದ ಬಿಡುಗಡೆ ಮಾಡಿದ ವಿಶ್ವದ ಅತ್ಯಂತ ಪ್ರಭಾವಿಗಳ ಪಟ್ಟಿಯಲ್ಲೂ ಅವರಿದ್ದರು. 2017ರಲ್ಲಿ ಫಾರ್ಚೂನ್ ನಿಂದ ಬಿಡುಗಡೆ ಮಾಡಿದ ಟಾಪ್ ಬಿಜಿನೆಸ್ ಮನ್ ಪಟ್ಟಿಯಲ್ಲಿ ಮಾ ಹ್ಯುತೆಂಗ್ ಇದ್ದರು. CEOWORLD ನಿಯತಕಾಲಿಕೆ 2018ರಲ್ಲಿ ಬಿಡುಗಡೆ ಮಾಡಿದ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲೂ ಹ್ಯುತೆಂಗ್ ಸ್ಥಾನ ಪಡೆದಿದ್ದರು.


Click it and Unblock the Notifications