ಕಳೆದ ವಾರ ವಹಿವಾಟಿನಲ್ಲಿ ಷೇರು ಪೇಟೆಯು ನಿರಂತರವಾಗಿ ಏರಿಕೆಯನ್ನು ದಾಖಲಿಸಿದ್ದು ಸೋಮವಾರ ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡಿದೆ. ಈಗ ವಹಿವಾಟಿನ ಅಂತ್ಯದಲ್ಲೂ ಷೇರು ಪೇಟೆಯು ಕುಸಿದಿದೆ. ಸೆನ್ಸೆಕ್ಸ್, ನಿಫ್ಟಿ ಕೆಳಕ್ಕೆ ಇಳಿದಿದೆ. ಪ್ರಮುಖವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಸ್ಟಾಕ್ ಭಾರಿ ಕುಸಿತ ಕಂಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಷೇರು ಸುಮಾರು ಶೇಕಡ 3.42ರಷ್ಟ ಕುಸಿತ ಕಂಡಿದ್ದು, ರೂಪಾಯಿ 2,417.40ಕ್ಕೆ ತಲುಪಿದೆ. ಜೂನ್ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಆದಾಯವು ಶೇಕಡ 46ರಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ. ಇದಾದ ಬೆನ್ನಲ್ಲೇ ಷೇರು ಕುಸಿತವಾಗಿದೆ.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 306 ಅಂಕ ಅಥವಾ ಶೇಕಡ 0.55ರಷ್ಟು ಕುಸಿತವಾಗಿ 55,766ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 88 ಅಂಕ ಅಥವಾ ಶೇಕಡ 0.53ರಷ್ಟು 16,631ಕ್ಕೆ ತಲುಪಿದೆ. ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡ 0.09ರಷ್ಟು ಕುಸಿತ ಕಂಡರೆ, ಸ್ಮಾಲ್ ಕ್ಯಾಪ್ ಶೇಕಡ 0.58ರಷ್ಟು ಕುಸಿದಿದೆ.
15 ಸೆಕ್ಟರ್ ಗೇಜ್‌ಗಳಲ್ಲಿ 13 ಏರಿಕೆಯನ್ನು ದಾಖಲು ಮಾಡಿದೆ. ಉಪ ಸೂಚ್ಯಂಕಗಳಾದ ನಿಫ್ಟಿ ಆಯಿಲ್ & ಗ್ಯಾಸ್, ನಿಪ್ಟಿ ಆಟೋ, ನಿಫ್ಟಿ ಫಾರ್ಮಾ ಕ್ರಮವಾಗಿ ಶೇಕಡ 1.36, ಶೇಕಡ 1.67 ಮತ್ತು ಶೇಕಡ 1.02ರಷ್ಟು ಇಳಿಕೆಯಾಗಿದೆ. ಈ ಸಂದರ್ಭದಲ್ಲೇ ನಿಫ್ಟಿ ಮೆಟಲ್, ನಿಫ್ಟಿ ಐಟಿ ಕ್ರಮವಾಗಿ ಶೇಕಡ 1.42 ಮತ್ತು ಶೇಕಡ O.17ರಷ್ಟು ಹೆಚ್ಚಾಗಿದೆ.
ಎಂ&ಎಂ ಟಾಪ್ ನಿಫ್ಟಿ ಲೂಸರ್
ಷೇರು ಮಾರುಕಟ್ಟೆಯಲ್ಲಿ ಎಂ&ಎಂ ಟಾಪ್ ನಿಫ್ಟಿ ಲೂಸರ್ ಆಗಿದೆ. ಎಂ&ಎಂ ಷೇರುಗಳು ಶೇಕಡ 3.99ರಷ್ಟು ಕುಸಿದು ರೂಪಾಯಿ 1,134ಕ್ಕೆ ತಲುಪಿದೆ. ಈ ಸಂದರ್ಭದಲ್ಲೇ ರಿಲಯನ್ಸ್ ಇಂಡಸ್ಟ್ರೀಸ್, ಮಾರುತಿ, ಈಚರ್ ಮೋಟಾರ್ಸ್, ಒಎನ್‌ಜಿಸಿ ಷೇರುಗಳು ಭಾರೀ ಕುಸಿತ ಕಂಡಿದೆ. ಇನ್ನು ಟಾಟಾ ಸ್ಟೀಲ್ಸ್ ಟಾಪ್ ನಿಫ್ಟಿ ಗೇನರ್ ಆಗಿದೆ. ಟಾಟಾ ಸ್ಟೀಲ್ಸ್ ಷೇರು ಸುಮಾರು ಶೇಕಡ 2.63ರಷ್ಟು ಏರಿಕೆಯಾಗಿ ರೂಪಾಯಿ 960.70ಕ್ಕೆ ತಲುಪಿದೆ.
ಯಾವ ಷೇರು ಏರಿಕೆ ಇಳಿಕೆ?
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಒಟ್ಟು 1,514 ಷೇರುಗಳು ಏರಿಕೆಯನ್ನು ಕಂಡಿದ್ದರೆ, 1,909 ಷೇರುಗಳು ಕುಸಿತ ಕಂಡಿದೆ. ಇನ್ನು 30 ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ ಎಂ&ಎಂ, ರಿಲಯನ್ಸ್, ಮಾರುತಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಟೆಕ್ ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್, ನೆಸ್ಲೆ ಇಂಡಿಯಾ, ಡಾ. ರೆಡ್ಡೀಸ್, ಬಜಾಜ್ ಫಿನ್‌ಸರ್ವ್, ಹಿಂದೂಸ್ತಾನ್ ಯೂನಿಲಿವರ್, ಪವರ್ ಗ್ರಿಡ್, ಸನ್ ಫಾರ್ಮಾ ಶೇಕಡ 3.80ರಷ್ಟು ಏರಿಕೆಯಾಗಿದೆ. ಈ ಸಂದರ್ಭದಲ್ಲೇ ಟಾಟಾ ಸ್ಟೀಲ್ಸ್, ಇಂಡಸ್‌ಇಂಡ್ ಬ್ಯಾಂಕ್, ಏಷ್ಯನ್ ಪೇಂಟ್ಸ್, ಎಚ್‌ಸಿಎಲ್ ಟೆಕ್ನಾಲಜಿ, ವಿಪ್ರೋ, ಎನ್‌ಟಿಪಿಸಿ, ಎಸ್‌ಬಿಐ, ಎಲ್&ಟಿ, ಎಚ್‌ಡಿಎಫ್‌ಸಿ, ಐಟಿಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಟೈಟಾನ್, ಐಸಿಐಸಿಐ ಬ್ಯಾಂಕ್ ಷೇರುಗಳು ಏರಿಕೆಯಾಗಿದೆ.
ಜೊಮಾಟೋ, ಎಲ್‌ಐಸಿ ಷೇರು
ಈ ಸಂದರ್ಭದಲ್ಲೇ ಜೊಮಾಟೋ ಷೇರುಗಳು ಭಾರೀ ಕುಸಿತ ಕಂಡಿದೆ. ಷೇರು ಸುಮಾರು ಶೇಕಡ 11.37 ರಷ್ಟು ಕುಸಿದು ರೂಪಾಯಿ 47.55ಗೆ ತಲುಪಿದೆ. ಬ್ಲಿಂಕಿಟ್ ಜೊತೆಗೆ ಒಪ್ಪಂದದ ಬಳಿಕ ಜೊಮಾಟೋ ಷೇರುಗಳು ನಿರಂತರವಾಗಿ ಕುಸಿಯುತ್ತಿದೆ. ಇನ್ನು ಈ ಸಂದರ್ಭದಲ್ಲೇ ಭಾರತದ ಅತೀ ದೊಡ್ಡ ವಿಮಾ ಸಂಸ್ಥೆ, ಅತೀ ದೊಡ್ಡ ಹೂಡಿಕೆದಾರ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಷೇರುಗಳು ಕೂಡಾ ಕುಸಿದಿದೆ. ಸೋಮವಾರ ವಹಿವಾಟಿನ ಆರಂಭದಲ್ಲಿ ಎಲ್‌ಐಸಿ ಷೇರುಗಳು ಶೇಕಡ 0.03ರಷ್ಟು ಕುಸಿದು, ರೂಪಾಯಿ 688.75ರಲ್ಲಿ ವಹಿವಾಟು ಆರಂಭ ಮಾಡಿದೆ. ವಹಿವಾಟಿನ ಅಂತ್ಯದಲ್ಲಿಯೂ ಷೇರುಗಳು ಕುಸಿದಿದೆ. ಎಲ್‌ಐಸಿ ಷೇರುಗಳು ಸೋಮವಾರ ವಹಿವಾಟಿನ ಅಂತ್ಯದಲ್ಲಿ ಸುಮಾರು ಶೇಕಡ 0.70ರಷ್ಟು ಕುಸಿದು ರೂಪಾಯಿ 684.15ಕ್ಕೆ ತಲುಪಿದೆ.


Click it and Unblock the Notifications