ಕೆರೆ ಒತ್ತುವರಿ ತೆರವು ಕಾರ್ಯ ಬಾಕಿಯಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು.ಮಳೆಗಾಲ ಆರಂಭಕ್ಕೂ ಮುನ್ನ ಕೆರೆ ಒತ್ತುವರಿಯನ್ನು ತೆರವುಗೊಳಿಸಿ, ಕೆರೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆಯನ್ನು ನೀಡಿದ್ಧಾರೆ.
ಹೌದು, ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಕೆರೆಗಳ ಸ್ಥಿತಿಗತಿಯ ಬಗ್ಗೆ ಸಿದ್ದರಾಮಯ್ಯ ಮಾಹಿತಿ ಪಡೆದುಕೊಂಡರು. ಕೆರೆಗಳ ಸರ್ವೆ ಕಾರ್ಯ, ಒತ್ತುವರಿ ತೆರವು ಮತ್ತು ಜೀರ್ಣೋದ್ದಾರ ಕೆಲಸಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದರು.

ನರೇಗಾ ಅಡಿಯಲ್ಲಿ ಕೆರೆಗಳ ಸಂರಕ್ಷಣೆ ಕಾರ್ಯ
ಕೆರೆಗಳ ಸಂರಕ್ಷಣೆ ಕಾರ್ಯವನ್ನು ನರೇಗಾ ಅಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಬೇಕು. ಮೀನುಗಾರಿಕಾ ಇಲಾಖೆ ವತಿಯಿಂದ ಎಲ್ಲಾ ಕೆರೆಗಳಿಗೆ ಮೀನು ಮರಿಗಳನ್ನು ಬಿಡುವ ಕಾರ್ಯ ಮಾಡಿದರೆ ಆದಾಯ ಗಳಿಸಲು ಸಾಧ್ಯತೆ ಹೆಚ್ಚಾಗುತ್ತದೆ.
ರಾಜ್ಯದಲ್ಲಿ ಒಟ್ಟು 40,998 ಕೆರೆಗಳಿದ್ದು, ಇವುಗಳ ಪೈಕಿ ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ 26,365 ಕೆರೆಗಳು, ಸಣ್ಣ ನೀರಾವರಿಯಲ್ಲಿ 3,247, ಬಿಬಿಎಂಪಿ ವ್ಯಾಪ್ತಿಯಲ್ಲಿ 117 ಕೆರೆಗಳಿವೆ ಸೇರುತ್ತೇವೆ.ರಾಜ್ಯದಲ್ಲಿ 30 ಸಾವಿರ ಕೆರೆಗಳ ಸರ್ವೇ ಕಾರ್ಯವನ್ನು ಕಂದಾಯ ಇಲಾಖೆ ಈಗಾಗಲೇ ಪೂರ್ಣಗೊಳಿಸಿದೆ. ಉಳಿದಿರುವ 10,754 ಕೆರೆಗಳ ಸಮೀಕ್ಷೆ ಕಾರ್ಯವನ್ನು ಆರು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಮಾಹಿತಿಯನ್ನು ತಿಳಿಸಿದ್ದರು.
ಒತ್ತುವರಿದಾರರ ವಿರುದ್ಧ ಕ್ರಮ
ಕೆರೆ ಒತ್ತುವರಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಒತ್ತುವರಿದಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ಹೊಣೆ ನಿಭಾಯಿಸದಿದ್ದರೆ ಅದನ್ನೂ ಗಂಭೀರವಾಗಿ ಪರಿಗಣಿಸಬೇಕು. ಕಂದಾಯ ಇಲಾಖೆಯು 30ಸಾವಿರ ಕೆರೆಗಳ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿದ್ದು, ಉಳಿದ 10,754 ಕೆರಗಳ ಸರ್ವೆಯನ್ನು ಆರು ತಿಂಗಳ ಒಳಗೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಎಸ್‌ಟಿಪಿಗೆ ಅನುಮೋದಿಸಲು ಸೂಚನೆ
ಬೆಂಗಳೂರಿನಲ್ಲಿ ಹೊಸದಾಗಿ 583 ಎಂಎಲ್‌ಡಿ ನೀರನ್ನು ಸಂಸ್ಕರಿಸಲು ಹೊಸ ಎಸ್‌ಟಿಪಿಗಳನ್ನು ನಿರ್ಮಿಸುವ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿ ಎಂದು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.
ಸಣ್ಣ ನೀರಾವರಿ ಇಲಾಖೆಯ ಪ್ರಗತಿ ಪರಿಶೀಲನೆ
ಸಣ್ಣ ನೀರಾವರಿ ಇಲಾಖೆಯ ಪ್ರಗತಿಯನ್ನು ಪರಿಶೀಲಸಿದ ಅವರು, ಕೆಸಿ ವ್ಯಾಲಿ, ವೃಷಭಾವತಿ, ಹೊಸಕೋಟೆ, ಆನೆಕಲ್ ಯೋಜನೆಗಳ ಅಡಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕೆರೆಗಳನ್ನು ತುಂಬಿಸಲು ಅಗತ್ಯವಿರುವ ನೀರನ್ನು ಒದಗಿಸಲು ಬೆಂಗಳೂರು ಜಲಮಂಡಳಿ ಕ್ರಮ ತೆಗೆದುಕೊಳ್ಳಬೇಕು.ಹಾಗೂ ಅನುದಾನ ಒದಗಿಸಲಾಗುವುದು ಎಂದರು.
ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯ 8.92 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದೆ. ಇದರಲ್ಲಿ 421 ಏತ ನೀರಾವರಿ ಯೋಜನೆಗಳ 94,315 ಹೆಕ್ಟೇರ್, 3778 ಕೆರೆಗಳ 4,37,086 ಹೆಕ್ಟೇರ್ ಅಚ್ಚುಕಟ್ಟು ಸೇರಿದೆ.
ಪ್ರಸ್ತುತ ವರ್ಷದಲ್ಲಿ ಇಲಾಖೆಗೆ 1,577 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಇದುವರೆಗೆ 1,468.17 ಕೋಟಿ ವೆಚ್ಚ ಮಾಡಲಾಗಿದೆ. ಪ್ರಸ್ತುತ ವರ್ಷ 9,449 ಹೆಕ್ಟೇರ್ ಹೊಸ ಅಚ್ಚುಕಟ್ಟು ಸೃಷ್ಟಿಸಲಾಗಿದೆ. ಒಟ್ಟು 1,112.59 ಕೋಟಿ ವೆಚ್ಚದಲ್ಲಿ 17 ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಕಾಮಗಾರಿಯನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು. ಇದರಿಂದಾಗಿ 5,989.64 ಹೆಕ್ಟೇರ್ ಅಚ್ಚುಕಟ್ಟು ಸೃಜನೆಯಾಗಲಿದೆ ಎಂದು ಹೇಳಿದ್ದರು.
145 ಕೆರೆಗಳನ್ನು ತುಂಬಿಸುವ ಯೋಜನೆ
ಕೆಸಿ ವ್ಯಾಲಿ 1 ನೇ ಹಂತದಲ್ಲಿ 1,342 ಕೋಟಿ ವೆಚ್ಚದಲ್ಲಿ 145 ಕೆರೆಗಳನ್ನು ತುಂಬಿಸುವ ಯೋಜನೆ ಪೂರ್ಣಗೊಳಿಸಲಾಗಿದೆ. ಈ ಯೋಜನೆಯಡಿ ಬಿಡಬ್ಲುಎಸ್‌ಎಸ್‌ಬಿ 440 ಎಂಎಲ್‌ಡಿ ಸಂಸ್ಕರಿಸಿದ ನೀರನ್ನು ಒದಗಿಸಬೇಕಾಗಿದ್ದು, ಪ್ರಸ್ತುತ 265 ಎಂಎಲ್‌ಡಿ ಒದಗಿಸುತ್ತಿದೆ. ಪೂರ್ಣ ಪ್ರಮಾಣದ ನೀರು ಪೂರೈಕೆಗೆ ಅಗತ್ಯವಿರುವ ಸಂಸ್ಕರಣಾ ಘಟಕಗಳ ನಿರ್ಮಾಣ ಕಾರ್ಯವನ್ನು ಈ ವರ್ಷದ ಅಂತ್ಯದ ಒಳಗಾಗಿ ಪೂರ್ಣಗೊಳಿಸಬೇಕು.
ಕೆಸಿ ವ್ಯಾಲಿ 2ನೇ ಹಂತದಲ್ಲಿ ರೂ.446 ಕೋಟಿ ವೆಚ್ಚದಲ್ಲಿ 272 ಕೆರೆಗಳನ್ನು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಇದುವರೆಗೆ 32 ಕೆರೆಗಳನ್ನು ತುಂಬಿಸಲಾಗಿದೆ.
ಪ್ರಸ್ತುತ ಒಟ್ಟು 1300 ಎಂಎಲ್‌ಡಿ ನೀರನ್ನು ಬೆಂಗಳೂರು ನಗರದಲ್ಲಿ ಸಂಸ್ಕರಿಸಲಾಗುತ್ತಿದೆ. ಹೊಸದಾಗಿ 583 ಎಂಎಲ್‌ಡಿ ನೀರು ಸಂಸ್ಕರಿಸಲು ಪೂರಕವಾಗಿ ಹೊಸ ಎಸ್‌ಟಿಪಿಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಬಿಡಬ್ಲುಎಸ್‌ಎಸ್‌ಬಿ ಕ್ರಮ ಕೈಗೊಳ್ಳಬೇಕು
ಕೆಸಿ ವ್ಯಾಲಿ, ಹೆಚ್‌ಎನ್ ವ್ಯಾಲಿ, ವೃಷಭಾವತಿ, ಹೊಸಕೋಟೆ, ಆನೆಕಲ್ ಯೋಜನೆಗಳಡಿ ಸಣ್ಣ ನೀರಾವರಿ ಇಲಾಖೆ ಕೆರೆಗಳನ್ನು ತುಂಬಿಸಲು ಅಗತ್ಯವಿರುವ ಸಂಪೂರ್ಣ ಪ್ರಮಾಣದ ನೀರನ್ನು ಒದಗಿಸಲು ಬಿಡಬ್ಲುಎಸ್‌ಎಸ್‌ಬಿ ಕ್ರಮ ಕೈಗೊಳ್ಳಬೇಕು. ಇದಕ್ಕೆ ಅಗತ್ಯವಿರುವ ಅನುದಾನ ಒದಗಿಸಲಾಗುವುದು.
ನಗರ ಪ್ರದೇಶದ ಕೆರೆಗಳು ಮಾತ್ರವಲ್ಲದೆ, ರಾಜ್ಯದ ಎಲ್ಲಾ ಕೆರೆಗಳ ಮಾಲಿನ್ಯದ ಮಟ್ಟವನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪರಿಶೀಲಿಸಿ ನಿಯಮಿತವಾಗಿ ವರದಿ ಸಲ್ಲಿಸಬೇಕು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮೂಲಕ ಕೆರೆಗಳಿಗೆ ಕಾಯಕಲ್ಪ ನೀಡುವಂತೆ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


Click it and Unblock the Notifications