ಕನ್ನಡದ ಎಂಟರ್ ಟೇನ್ ಮೆಂಟ್ ಚಾನೆಲ್ ಗಳಿಗೂ ಕೊರೊನಾ ಬಿಸಿ ತಟ್ಟುತ್ತಿದೆ. ಇತ್ತೀಚೆಗೆ ಚೀನಾ ಮೂಲದ ಮೊಬೈಲ್ ಕಂಪೆನಿಗಳು ಚಾನೆಲ್ ಗಳಿಗೆ ಹೆಚ್ಚು ಜಾಹೀರಾತು ನೀಡುತ್ತಿದ್ದವು. ಉದಾಹರಣೆಗೆ, ಚೀನಾ ಮೂಲದ ಕಂಪೆನಿಗಳೇ ಆದ ವಿವೋ, ಒಪ್ಪೋ, ಒನ್ ಪ್ಲಸ್ ಹಾಗೂ ಎಂಐ ದೊಡ್ಡ ಪ್ರಮಾಣದಲ್ಲಿ ಜಾಹೀರಾತುಗಳನ್ನು ನೀಡುತ್ತಿದ್ದವು. ಇದೀಗ ಜಾಹೀರಾತು ಪ್ರಮಾಣವೇ ಕಡಿಮೆಯಾಗಿದೆ.
ಇನ್ನು ಐಪಿಎಲ್ ನ ಮುಖ್ಯ ಪ್ರಾಯೋಜಕತ್ವ ಇದ್ದದ್ದು ವಿವೋ ಕಂಪೆನಿಯದು. ಚೀನಾದಲ್ಲಿ ಕೊರೊನಾ ಪ್ರಭಾವ ಆ ಪರಿಯಲ್ಲಿ ಆಗಿರುವುದು, ಭಾರತದಲ್ಲಿ ನಿಧಾನಕ್ಕೆ ವ್ಯಾಪಿಸುತ್ತಿರುವ ಕಾರಣಕ್ಕೆ ಈ ಬಾರಿ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಹೇಗೆ ನಡೆಯುತ್ತದೆ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಇನ್ನು ಐಟಿ ಕಂಪೆನಿಗಳಲ್ಲಿ ವರ್ಕ್ ಫ್ರಂ ಹೋಮ್ ಅವಕಾಶ ನೀಡಿರುವುದನ್ನು ನೀವು ಕೇಳಿದ್ದಿರಬಹುದು. ಆದರೆ ಕನ್ನಡದ ಎಂಟರ್ ಟೇನ್ ಮೆಂಟ್ ಚಾನೆಲ್ ಗಳು ಸಹ ವರ್ಕ್ ಫ್ರಂ ಹೋಮ್ ಮಾಡುವುದಕ್ಕೆ ತರಬೇತಿ ನೀಡುತ್ತಿವೆ. ಕೊರೊನಾದ ಪರಿಣಾಮ ಯಾವ ಮಟ್ಟದಲ್ಲಾದರೂ ಆಗಬಹುದು. ಅದಕ್ಕೆ ಸಿದ್ಧವಾಗಿರಬೇಕಿರುವುದು ಮುಖ್ಯ ಎಂಬ ಸಂದೇಶವನ್ನು ಉದ್ಯೋಗಿಗಳಿಗೆ ಕಳುಹಿಸಲಾಗಿದೆ.

ಜಾಹೀರಾತು ಆದಾಯ ಕಡಿಮೆ ಆಗಿರುವುದರಿಂದ ಈ ಬಾರಿ ಎಂಟರ್ ಟೇನ್ ಮೆಂಟ್ ಚಾನೆಲ್ ಗಳ ಒಟ್ಟಾರೆ ಆದಾಯದ ಮೇಲೂ ಇದು ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಅಂದಾಜು ಮಾಡಲಾಗಿದೆ. ಇದರಿಂದ ಮುಖ್ಯವಾಗಿ ದೊಡ್ಡ ಬಜೆಟ್ ನ ಕಾರ್ಯಕ್ರಮಗಳಿಗೆ ಬ್ರೇಕ್ ಬೀಳುತ್ತದೆ. ಇನ್ನು ಉದ್ಯೋಗಿಗಳ ವೇತನ ಹೆಚ್ಚಳ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಆಗುವುದು ಅನುಮಾನ.
ಬೆಂಗಳೂರಿನಲ್ಲೇ ಇರುವ ಕನ್ನಡದ ಮನರಂಜನೆ ಚಾನೆಲ್ ಗಳು ಸಹ ವರ್ಕ್ ಫ್ರಂ ಹೋಮ್ ಅವಕಾಶ ನೀಡಿರುವುದು ಕೊರೊನಾ ಭೀತಿಯಿಂದಲೇ. ಆದರೆ ಇದರ ಹಿಂದೆ ಅದೆಂಥ ದೊಡ್ಡ ಆತಂಕ ಇರಬಹುದು ಎಂದು ಊಹಿಸುವುದು ಕಷ್ಟವಾಗಲಿಕ್ಕಿಲ್ಲ. ಇನ್ನು ಜಾಹೀರಾತು ಮೂಲಕ ಬರುವ ಆದಾಯದಲ್ಲಿ ಗಣನೀಯ ಇಳಿಕೆ ಆಗಿದೆ ಎಂಬುದನ್ನು ಸಹ ಹೇಳಲಾಗುತ್ತಿದೆ.


Click it and Unblock the Notifications