ಕೊರೊನಾವೈರಸ್ ಮಹಾಮಾರಿ ಏಕಾಏಕಿ ದೇಶದ ಹಾಗೂ ವಿಶ್ವದ ಅರ್ಥ ವ್ಯವಸ್ಥೆಯ ಚಿತ್ರಣವನ್ನೇ ಬದಲಿಸಿಬಿಟ್ಟಿದೆ. ಉದ್ದಿಮೆಗಳು, ವ್ಯಾಪಾರ, ವ್ಯವಹಾರ ಸೇರಿದಂತೆ ಎಲ್ಲವೂ ಬಂದ್ ಆಗಿದೆ. ಹೀಗಾಗಿ ಕೊರೊನಾವೈರಸ್ ಕಾಟದಿಂದ ತಪ್ಪಿಸಿಕೊಳ್ಳಲು ಕಂಪನಿಗಳು ದೀರ್ಘಾವಧಿಯ ತಂತ್ರಜ್ಞಾನ ಬಳಕೆಗೆ ಬದಲಾಗುತ್ತಿವೆ.
ಹೌದು, ಸದ್ಯ ಕಂಪನಿಗಳಿಗೆ ಇರುವ ಒಂದೇ ಆಯ್ಕೆಯೆಂದರೆ ಉದ್ಯೋಗಿಗಳಿಂದ ಮನೆಯಿಂದಲೇ ಕೆಲಸ ಮಾಡಿಸುವುದು. ಹೀಗಾಗಿಯೇ ವರ್ಕ್ ಫ್ರಮ್ ಹೋಮ್ ಮೇಲೆ ಕಂಪನಿಗಳು ಅವಲಂಬಿತಗೊಳ್ಳುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ತಂತ್ರಜ್ಞಾನದ ಮೇಲೆ ಖರ್ಚು ಮಾಡುತ್ತಿವೆ.
ವರ್ಚುವಲ್ ಕನೆಕ್ಟಿವಿಟಿ, ನೆಟ್‌ವರ್ಕಿಂಗ್, ಕ್ಲೌಡ್-ಆಧಾರಿತ ಸೇವೆಗಳ ಜೊತೆಗೆ ವಿಪಿಎನ್, ಸೆಕ್ಯುರಿಟಿ ಫೈರ್‌ವಾಲ್‌ಗಳು ಮತ್ತು ಸಾಸ್(SaaS) ಆಧಾರಿತ ಸಂವಹನಗಳಂತಹ ತಂತ್ರಜ್ಞಾನಗಳ ಮೇಲೆ ಕಂಪನಿಗಳು ಹೆಚ್ಚಿನ ಹಣ ಖರ್ಚು ಮಾಡುತ್ತಿದ್ದು, ಕೊರೊನಾವೈರಸ್ ಭೀತಿ ಮುಗಿದ ಬಳಿಕವು ಅದನ್ನೇ ಮುಂದುವರಿಸುವ ಯೋಚನೆಯಲ್ಲಿವೆ.
74 ಪರ್ಸೆಂಟ್ ಕಂಪನಿಗಳಿಂದ ಶಾಶ್ವತ WFH ಯೋಜನೆ
ಇತ್ತೀಚಿನ ಗಾರ್ಟ್ನರ್ ಸಮೀಕ್ಷೆಯ ಪ್ರಕಾರ ಕೊರೊನಾವೈರಸ್ ಭಯದಿಂದ 74 ಪರ್ಸೆಂಟ್ ಕಂಪನಿಗಳು ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ತಂತ್ರಜ್ಞಾನಕ್ಕೆ ಬದಲಾಗುವ ಯೋಜನೆ ನಡೆಸಿವೆ.
"ಸಹಜವಾಗಿ, ಉದ್ಯಮದ ಅವಶ್ಯಕತೆಗೆ ಅನುಗುಣವಾಗಿ ತಂತ್ರಜ್ಞಾನ ಬಳಕೆಯ ಹೆಚ್ಚಳವು ಬದಲಾಗುತ್ತದೆ. WFH ಅನ್ನು ಸಕ್ರಿಯಗೊಳಿಸಲು, ಉದ್ಯಮಗಳು ವರ್ಚುವಲ್ ಡೆಸ್ಕ್‌ಟಾಪ್ ಮೂಲಸೌಕರ್ಯ, ಡೆಸ್ಕ್‌ಟಾಪ್ ಸೇವೆಗಾಗಿ, ಸಂಪರ್ಕ, ನೆಟ್‌ವರ್ಕಿಂಗ್, ಕ್ಲೌಡ್ ಆಧಾರಿತ ಸೇವೆಗಳ ಜೊತೆಗೆ ವರ್ಚುವಲ್ ಖಾಸಗಿ ನೆಟ್‌ವರ್ಕ್‌ಗಳು ಮತ್ತು ಭದ್ರತಾ ಫೈರ್‌ವಾಲ್‌ಗಳಲ್ಲಿ ಹೂಡಿಕೆ ಮಾಡಲಿವೆ "ಎಂದು ಗಾರ್ಟ್ನರ್ ಹಿರಿಯ ನಿರ್ದೇಶಕ ವಿಶ್ಲೇಷಕ ನವೀನ್ ಮಿಶ್ರಾ ಹೇಳಿದ್ದಾರೆ.
2020ರ ಮಾರ್ಚ್ ಮಧ್ಯ ಭಾಗದಿಂದ ತಂತ್ರಜ್ಞಾನಗಳ ಆಯ್ಕೆಯು ಬದಲಾಗಿದೆ
ಕೊರೊನಾವೈರಸ್ ಚೀನಾದಲ್ಲಿ ಮೊದಲ ಬಾರಿಗೆ ಕಂಡು ಬಂದಾಗ ಬೃಹತ್ ಕಂಪನಿಗಳು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಯಾವಾಗ ವಿಶ್ವದಾದ್ಯಂತ ಹರಡೋಕೆ ಶುರುವಾಯ್ತೋ ದಿಕ್ಕೇ ತೋಚದಂತಾದವು. ಮಾರ್ಚ್ 2020ರ ಮಧ್ಯಭಾಗದಲ್ಲಿ ಐಡಿಸಿ ನಡೆಸಿದ ಜಾಗತಿಕ ಐಟಿ ಖರೀದಿದಾರರ ಭಾವನೆ ಸಮೀಕ್ಷೆಯ ಪ್ರಕಾರ ತಂತ್ರಜ್ಞಾನಗಳ ಆಯ್ಕೆಯು ಭಿನ್ನವಾಗಿದೆ ಎಂದು ಸೂಚಿಸುತ್ತದೆ. ವಿಶೇಷವಾಗಿ ಬಹುತೇಕ ಉದ್ಯಮಗಳು ವಿಭಿನ್ನ ತಂತ್ರಜ್ಞಾನಕ್ಕೆ ಮೊರೆ ಹೋಗುತ್ತಿವೆ.
ಉತ್ತರ ಅಮೆರಿಕಾ, ಯೂರೋಪಿನ ಉದ್ಯಮಗಳು ಈಗಾಗಲೇ ಶಿಫ್ಟ್
ವರ್ಕ್ ಫ್ರಮ್ ಹೋಮ್ ತಂತ್ರಜ್ಞಾನಕ್ಕೆ ಮಾರು ಹೋಗುತ್ತಿರುವ ಕಂಪನಿಗಳು ಈಗಾಗಲೇ ಅವುಗಳ ಅಭಿವೃದ್ಧಿಗೆ ಮುಂದಾಗುತ್ತಿವೆ. ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಾದ ಉತ್ತರ ಅಮೆರಿಕಾ ಮತ್ತು ಯುರೋಪಿನ ಉದ್ಯಮಗಳು ಈಗಾಗಲೇ ಹೆಚ್ಚಿನ ಕೆಲಸವನ್ನು ವರ್ಚುವಲ್ ಕಾರ್ಯಕ್ಷೇತ್ರಗಳು, ವಿಡಿಯೋ ಕಾನ್ಫರೆನ್ಸಿಂಗ್ ಮತ್ತು ಡೇಟಾ ವಿಶ್ಲೇಷಣೆಯನ್ನು ಮನೆಯಿಂದಲೇ ನಡೆಸುವ ಸಾಮರ್ಥ್ಯವನ್ನು ಹೊಂದಿವೆ.
'' ಜಪಾನ್ (ಎಪಿಜೆ) ಪ್ರದೇಶವನ್ನು ಹೊರತುಪಡಿಸಿ ಏಷ್ಯಾ ಪೆಸಿಫಿಕ್ ಉದ್ಯಮಗಳು ವರ್ಚುವಲ್ ಕಾರ್ಯಕ್ಷೇತ್ರಗಳು, ದೂರದ ಪ್ರದೇಶಗಳಿಂದಲೇ ಕಲಿಕೆ / ತರಬೇತಿ ಮತ್ತು ವಿಡಿಯೋ ಕಾನ್ಫರೆನ್ಸಿಂಗ್ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಹೆಚ್ಚು ಗಮನ ಹರಿಸಿದೆ" ಎಂದು ಐಟಿ ಖರ್ಚು ಮಾರ್ಗದರ್ಶಿಗಳ ಸಂಶೋಧನಾ ನಿರ್ದೇಶಕ ವಿನಯ್ ಗುಪ್ತಾ ಹೇಳಿದ್ದಾರೆ.
ಆನ್‌ಲೈನ್ ಅಪ್ಲಿಕೇಶನ್ ಮೇಲೆ ಹೆಚ್ಚಲಿದೆ ಖರ್ಚು
ಲಾಕ್‌ಡೌನ್ ಕಾರಣದಿಂದ ಕಂಪನಿಗಳು ತನಗೆ ಅನುಕೂಲವಾಗುವಂತಹ ಅಪ್ಲಿಕೇಶನ್ ಮೇಲೆ ಮುಂದಿನ ದಿನಗಳಲ್ಲಿ ಹೆಚ್ಚಿನ ಖರ್ಚು ಮಾಡಲಿವೆ ಎಂದು ಸಮೀಕ್ಷೆ ಹೇಳಿದೆ. 2019ರಲ್ಲಿ ಜಾಗತಿಕವಾಗಿ ಕಾನ್ಫರೆನ್ಸ್ ಅಪ್ಲಿಕೇಶನ್‌ಗಳು, ಇಮೇಲ್ ಅಪ್ಲಿಕೇಶನ್‌ಗಳು, ಎಂಟರ್‌ಪ್ರೈಸ್ ಸೋಷಿಯಲ್ ನೆಟ್‌ವರ್ಕ್‌ಗಳು ಮತ್ತು ತಂಡದ ಸಹಕಾರಿ ಅಪ್ಲಿಕೇಶನ್‌ಗಳು ಸುಮಾರು 18.5 ಬಿಲಿಯನ್ ಡಾಲರ್ ಮಾರುಕಟ್ಟೆ ಗಾತ್ರವನ್ನು ಪ್ರತಿನಿಧಿಸುತ್ತಿದ್ದವು. ಆದರೆ 2019 ರಿಂದ 2023ರ ಅವಧಿಯಲ್ಲಿ ವಾರ್ಷಿಕವಾಗಿ ಇದು 13 ಪರ್ಸೆಂಟ್ ಹೆಚ್ಚು ಬೆಳೆಯಲಿದೆ.
ಈ ತಂತ್ರಜ್ಞಾನಗಳಲ್ಲಿ, 2020 ರಲ್ಲಿ ಕಾನ್ಫರೆನ್ಸ್ ಅಪ್ಲಿಕೇಶನ್‌ಗಳು ಮತ್ತು ತಂಡದ ಸಹಕಾರಿ ಅಪ್ಲಿಕೇಶನ್‌ಗಳು 15 ಪರ್ಸೆಂಟ್‌ಕ್ಕಿಂತ ಹೆಚ್ಚಿನ ವಾರ್ಷಿಕ ಬೆಳವಣಿಗೆಯನ್ನು ಕಾಣುತ್ತವೆ ಎಂದು ಐಡಿಸಿ ಅಂದಾಜಿಸಿದೆ.


Click it and Unblock the Notifications