ಭಾರತದಲ್ಲಿ ಕೊರೊನಾವೈರಸ್ ಭಾರೀ ಆರ್ಥಿಕ ನಷ್ಟವನ್ನುಂಟು ಮಾಡಿರುವ ಜೊತೆಗೆ ಕೋಟ್ಯಾಂತರ ಉದ್ಯೋಗ ನಷ್ಟಕ್ಕೂ ಕಾರಣವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೂನ್ಯಕ್ಕೆ ತಲುಪಲಿದೆ ಎಂದು ಅನೇಕ ಮೌಲ್ಯಮಾಪನ ಸಂಸ್ಥೆಗಳು ಸಹ ಹೇಳಿವೆ. ಇದರ ಜೊತೆಗೆ ವಿದೇಶಿ ಹೂಡಿಕೆದಾರರು ಭಾರತದಿಂದ ಅಂದಾಜು 16 ಬಿಲಿಯನ್ ಡಾಲರ್ ಹಣವನ್ನು ಹಿಂಪಡೆದಿದ್ದಾರೆ ಎನ್ನಲಾಗಿದೆ.
ವಿದೇಶಿ ಹೂಡಿಕೆದಾರರು ಏಷ್ಯಾದ ಆರ್ಥಿಕತೆಗಳಿಂದ ಅಂದಾಜು 26 ಬಿಲಿಯನ್ ಡಾಲರ್ ಮತ್ತು ಭಾರತದಿಂದ 16 ಬಿಲಿಯನ್ ಡಾಲರ್ ಹಣವನ್ನು ಹಿಂಪಡೆದಿದ್ದಾರೆ ಎಂದು ಸಿಎಸ್‌ಆರ್ ವರದಿಯೊಂದು ತಿಳಿಸಿದೆ. 16 ಬಿಲಿಯನ್ ಡಾಲರ್ ಅಂದರೆ ಭಾರತದ ರುಪಾಯಿಗಳಲ್ಲಿ ಸುಮಾರು 1.20 ಲಕ್ಷ ಕೋಟಿ ರುಪಾಯಿಗೂ ಹೆಚ್ಚಿನ ಬಂಡವಾಳವಾಗಿದೆ.
ಕೊರೊನಾದಿಂದ ತತ್ತರಿಸುವ ದೇಶಗಳಿಂದ ಹೂಡಿಕೆ ಹಿಂತೆಗೆತ
ಈಗಾಗಲೇ ಮೂಡೀಸ್ ವರದಿಯೂ ಕೂಡ ಭಾರತದ ಆರ್ಥಿಕತೆ 2020-21ನೇ ಆರ್ಥಿಕ ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕಾಣಲ್ಲ ಎಂಬುದನ್ನು ಉಲ್ಲೇಖಿಸಿದೆ. ಸಿಎಸ್‌ಆರ್ ಕೂಡ ಅದನ್ನೇ ಹೇಳಿದ್ದು ಕೊರೊನಾ ಹೊಡೆತದಿಂದ ತತ್ತರಿಸಿರುವ ದೇಶಗಳಲ್ಲಿ ಹೂಡಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳಲು ಬಂಡವಾಳದಾರರು ಮುಂದಾಗಿದ್ದಾರೆ. ಭವಿಷ್ಯದಲ್ಲಿ ಆಗುವ ಮತ್ತಷ್ಟು ಆರ್ಥಿಕ ನಷ್ಟವನ್ನು ಗಮನದಲ್ಲಿಟ್ಟುಕೊಂಡು ವಿದೇಶಿ ಹೂಡಿಕೆದಾರರು ಬಂಡವಾಳವನ್ನು ಹಿಂಪಡೆಯುತ್ತಿದ್ದಾರೆ.
ಅಮರಿಕಾದಲ್ಲಿ ಜಿಡಿಪಿ ಅಂದಾಜು 4.8 ಪರ್ಸೆಂಟ್ ಕುಸಿತ
ಯುರೋಪ್‌ನಲ್ಲಿ, 30 ದಶಲಕ್ಷಕ್ಕೂ ಹೆಚ್ಚು ಜನರು ಜರ್ಮನಿ, ಫ್ರಾನ್ಸ್, ಯುಕೆ, ಸ್ಪೇನ್ ಮತ್ತು ಇಟಲಿಯಲ್ಲಿ ರಾಜ್ಯ ಬೆಂಬಲಕ್ಕಾಗಿ(ನಿರುದ್ಯೋಗ) ಅರ್ಜಿ ಸಲ್ಲಿಸಿದ್ದಾರೆ. ಅಮೆರಿಕಾದಲ್ಲಿ 2020 ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡಾ 4.8 ರಷ್ಟು ಕುಸಿದಿದೆ ಎಂದು ಪ್ರಾಥಮಿಕ ಅಂಕಿಅಂಶಗಳು ಸೂಚಿಸಿವೆ. ಇದು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ 2008 ರ ನಾಲ್ಕನೇ ತ್ರೈಮಾಸಿಕದ ನಂತರದ ಅತಿದೊಡ್ಡ ತ್ರೈಮಾಸಿಕ ಕುಸಿತವಾಗಿದೆ ಎಂದು ಸಿಎಸ್‌ಆರ್ ತಿಳಿಸಿದೆ.
ಭಾರತ, ಚೀನಾದಲ್ಲಿ ಮಾತ್ರ ಈ ವರ್ಷ ಕೊಂಚ ಬೆಳವಣಿಗೆ ನಿರೀಕ್ಷೆ
ಕೊರೊನಾವೈರಸ್ ಪರಿಣಾಮವಾಗಿ ಜಗತ್ತಿನ ಬೃಹತ್ ಆರ್ಥಿಕತೆಗಳೆಲ್ಲಾ ಕುಗ್ಗುತ್ತಿದ್ದರೆ, ಚೀನಾ, ಭಾರತ ಮತ್ತು ಇಂಡೋನೇಷ್ಯಾ ಮೂರು ದೇಶಗಳು ಮಾತ್ರ 2020 ರಲ್ಲಿ ಸಣ್ಣ ಮಟ್ಟಿಗೆ ಸಕಾರಾತ್ಮಕ ಆರ್ಥಿಕ ಬೆಳವಣಿಗೆಯನ್ನು ಅನುಭವಿಸುವ ನಿರೀಕ್ಷೆಯಿದೆ ಎಂದು ಸಿಎಸ್‌ಆರ್ ಹೇಳಿದೆ.
ನೀತಿಗಳಲ್ಲಿನ ವ್ಯತ್ಯಾಸಗಳು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ನಡುವಿನ ಸಂಬಂಧವನ್ನು ವ್ಯತ್ಯಾಸಗೊಳಿಸಿದೆ. ಜೊತೆಗೆ ಜಾಗತಿಕ ನಾಯಕತ್ವದ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದು ವರದಿ ತಿಳಿಸಿದೆ.


Click it and Unblock the Notifications