ಕೊರೊನಾವೈರಸ್ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ಲಾಕ್‌ಡೌನ್ ಜನರ ಬದುಕಿನ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದಿನೇ ದಿನೇ ಕೆಲಸ ಕಳೆದುಕೊಳ್ಳುವವರ ಸಂಖ್ಯೆಯು ಬೆಳೆಯುತ್ತಲೇ ಇದೆ. ಇದರ ಜೊತೆಗೆ ವಿಶ್ವದ ಅತಿದೊಡ್ಡ ಕ್ಯಾಬ್ ಸೇವಾ ಕಂಪನಿ ಉಬರ್ ಕೂಡ ಭಾರೀ ಆಘಾತ ಅನುಭವಿಸಿದೆ.
ವಿಶ್ವದ ಅನೇಕ ಕಂಪನಿಗಳು ಹಣಕಾಸಿನ ಮುಗ್ಗಟ್ಟಿನಿಂದಾಗಿ ದಿವಾಳಿಯೆಂದು ಘೋಷಿಸುತ್ತಿವೆ. ಇದರ ಜೊತೆಗೆ ಉಬರ್ ಕೂಡ ಹಣಕಾಸಿನ ತೊಂದರೆಯಿಂದ ನೂರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಮುಂದಾಗಿದೆ.
3,700 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ
ಲಾಕ್‌ಡೌನ್‌ನಿಂದಾಗಿ ಸಾರಿಗೆ ವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಕ್ಯಾಬ್ ಸೇವೆ ವ್ಯಾಪಕವಾದ ನಷ್ಟವನ್ನು ಅನುಭವಿಸಿದೆ. ಯುಎಸ್ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ)ಗೆ ಉಬರ್ ಬುಧವಾರ ಸಲ್ಲಿಸಿದ ನಿಯಂತ್ರಕ ಫೈಲಿಂಗ್‌ನಲ್ಲಿ ಆರ್ಥಿಕ ಸವಾಲುಗಳು ಮತ್ತು ಕೊರೊನಾವೈರಸ್‌ನಿಂದಾಗಿ ಉಂಟಾಗಿರುವ ಅನಿಶ್ಚಿತತೆ ಹಾಗೂ ವ್ಯವಹಾರದ ಮೇಲೆ ಅದರ ಪ್ರಭಾವದಿಂದಾಗಿ ಕಂಪನಿಯು ತನ್ನ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಯೋಜಿಸಿದೆ ಎಂದು ತಿಳಿಸಿದೆ.
ಇದಕ್ಕಾಗಿ ಒಟ್ಟು 3,700 ಪೂರ್ಣ ಸಮಯದ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ತಿಳಿಸಿದೆ.
ವಿಶ್ವದಾದ್ಯಂತ 14 ಪರ್ಸೆಂಟ್ ಉದ್ಯೋಗ ಕಡಿತ
ಉಬರ್ ಟೆಕ್ನಾಲಜೀಸ್ ಇಂಕ್ 3,700 ಉದ್ಯೋಗಿಗಳನ್ನು ತೆಗೆದುಹಾಕುವ ಜೊತೆಗೆ 180 ಚಾಲಕ ಸೇವಾ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚಲಿದೆ. ಈ ನಿರ್ಧಾರದಿಂದಾಗಿ ಪ್ರಪಂಚದಾದ್ಯಂತ ಉಬರ್‌ನ 14 ಪರ್ಸೆಂಟ್ ಸಿಬ್ಬಂದಿಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಬೆಂಬಲ ಮತ್ತು ನೇಮಕಾತಿಯಲ್ಲಿರುವವರು ಇದರ ಪರಿಣಾಮ ಎದುರಿಸಲಿದ್ದಾರೆ ಎಂದು ಕಂಪನಿಯ ಸಿಇಒ ದಾರಾ ಖೋಸ್ರೋಶಾಹಿ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ನಮ್ಮ ರೈಡ್ ಟ್ರಿಪ್ ಸಂಪುಟಗಳು ಗಮನಾರ್ಹವಾಗಿ ಕ್ಷೀಣಿಸುತ್ತಿರುವುದರಿಂದ ಸಂವಹನ ಕಾರ್ಯಾಚರಣೆಗಳು ಸೇರಿದಂತೆ ವೈಯಕ್ತಿಕ ಬೆಂಬಲದ ಅಗತ್ಯವು ಗಮನಾರ್ಹವಾಗಿ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ನೇಮಕಾತಿ ಮಾಡುವವರಿಗೆ ಕೆಲಸವಿಲ್ಲ ಎಂದು ಹೇಳಲಾಗಿದೆ.
ವಿಶ್ವದ 450 ಚಾಲಕ ಕೇಂದ್ರಗಳಲ್ಲಿ 40 ಪರ್ಸೆಂಟ್ ಬಂದ್
ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿರುವ 450 ಕ್ಕೂ ಹೆಚ್ಚು ಚಾಲಕ ಕೇಂದ್ರಗಳಲ್ಲಿ, 40 ಪರ್ಸೆಂಟ್ ಸ್ಥಗಿತಗೊಳ್ಳುತ್ತದೆ. ಗ್ರೀನ್‌ಲೈಟ್ ಹಬ್ಸ್ ಎಂದು ಕರೆಯಲ್ಪಡುವ ಸ್ಥಳಗಳನ್ನು ಜನರು ಉಬರ್‌ಗೆ ಚಾಲನೆ ಮಾಡಲು ಸೈನ್ ಅಪ್ ಮಾಡಲು, ಅಪ್ಲಿಕೇಶನ್ ಅನ್ನು ಹೇಗೆ ಬಳಸಬೇಕೆಂದು ಕಲಿಸಲು ಮತ್ತು ಕೆಲಸದ ಮೇಲೆ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸಲು ಬಳಸಲಾಗುತ್ತದೆ. ಮಾರ್ಚ್‌ನಲ್ಲಿ ಉತ್ತರ ಅಮೆರಿಕಾದಲ್ಲಿ ವೈರಸ್ ಹರಡುತ್ತಿದ್ದಂತೆ, ಅಮೆರಿಕಾ ಮತ್ತು ಕೆನಡಾದಲ್ಲಿ ಎಲ್ಲಾ ಹಬ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚುತ್ತಿದೆ ಎಂದು ಉಬರ್ ಘೋಷಿಸಿತ್ತು.


Click it and Unblock the Notifications