ಕೊರೊನಾದ ಕಾರಣಕ್ಕೆ ಭಾರತದ ಆರ್ಥಿಕತೆಗೆ ಎಷ್ಟು ನಷ್ಟ ಆಗಬಹುದು ಎಂದು ಅಂದಾಜು ಮಾಡಲಾಗಿದೆ. 40 ದಿನಗಳ ಅವಧಿಗೆ (ಮಾರ್ಚ್ 25ರಿಂದ ಮೇ 3ರ ತನಕ) 32000 ಕೋಟಿ ಅಮೆರಿಕನ್ ಡಾಲರ್ ನಷ್ಟು ಜಿಡಿಪಿಗೆ ನಷ್ಟವಾಗಬಹುದು ಎಂದು ವರದಿಯೊಂದು ಹೇಳಿದೆ. ಇದನ್ನು ಭಾರತದ ರುಪಾಯಿಗಳಲ್ಲಿ ಹೇಳಬೇಕು ಅಂದರೆ, 24,32,000 ಕೋಟಿ. ಅರ್ಥಾತ್ 24.3 ಲಕ್ಷ ಕೋಟಿ ರುಪಾಯಿ.
ಒಂದು ದಿನಕ್ಕೆ ಭಾರತದ ಜಿಡಿಪಿ ಅಂದಾಜು 800 ಕೋಟಿ ಅಮೆರಿಕನ್ ಡಾಲರ್ ನಷ್ಟವಾಗುತ್ತಿದೆ. ಭಾರತದ ರುಪಾಯಿ ಲೆಕ್ಕದಲ್ಲಿ 60,800 ಕೋಟಿ ರುಪಾಯಿಗೂ ಹೆಚ್ಚು. ಅತಿ ದೊಡ್ಡ ಹೊಡೆತ ಬಿದ್ದಿರುವುದು ಪ್ರವಾಸೋದ್ಯಮ ಹಾಗೂ ಸಾರಿಗೆ ವಲಯದ ಮೇಲೆ. ಓಯೋ, ಓಲಾ, ಮೇಕ್ ಮೈ ಟ್ರಿಪ್ ಇಂಥವಕ್ಕೆ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ.
MSMEಗಳಿಗೆ ಬಿದ್ದಿದೆ ಬಲುದೊಡ್ಡ ಪೆಟ್ಟು
ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳ ವಲಯಗಳನ್ನು (ಎಂಎಸ್ ಎಂಇ) ಭಾರತದ ಬೆನ್ನೆಲುಬು ಅಂತಲೇ ಕರೆಯಲಾಗುತ್ತದೆ. ಸಣ್ಣ ಕಾರ್ಖಾನೆಗಳನ್ನು ಮುಚ್ಚಿದ್ದು, ತುಂಬ ಕಡಿಮೆ ಸಂಖ್ಯೆಯ ಕಾರ್ಮಿಕರೊಂದಿಗೆ ಕಾರ್ಯ ನಿರ್ವಹಿಸಬೇಕಾಗಿದೆ. ಕೊರೊನಾದಿಂದ ಎಂಎಸ್ ಎಂಇ ಆದಾಯಕ್ಕೆ ಬಲುದೊಡ್ಡ ಪೆಟ್ಟು ಬಿದ್ದಿದೆ ಎಂದು ಮತ್ತೊಂದು ವರದಿಯಲ್ಲಿ ತಿಳಿಸಲಾಗಿದೆ.
ಕೆಲವು ವಲಯಗಳ ಪಾಲಿಗೆ ಮರಣ ಮೃದಂಗ
ಕೆಲವು ವಲಯಗಳ ಪಾಲಿಗಂತೂ ಕೊರೊನಾ ಮರಣಮೃದಂಗವಾಗಿದೆ. ಪೂರೈಕೆ ಜಾಲವೇ ಕಡಿದುಹೋಗಿರುವುದರಿಂದ ಎಲ್ಲ ಕಡೆಯೂ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಆದರೆ ಇಷ್ಟೆಲ್ಲ ಅಡೆ- ತಡೆಗಳ ಮಧ್ಯೆಯೂ ಗ್ರಾಹಕರ ಮನಸ್ಥಿತಿಯಲ್ಲಿ ಆದ ಬದಲಾವಣೆಗಳಿಂದ ಅವುಗಳು ಬೆಳವಣಿಗೆ ದಾಖಲಿಸಿವೆ.
ಟೆಕ್ ಅಪ್ಲಿಕೇಷನ್ ಸಂಸ್ಥೆಗಳಿಗೆ ಅನುಕೂಲ
ಸ್ಥಳೀಯವಾಗಿ ಡೆಲಿವರಿ ನೀಡುವ ಸೇವೆ, ಮಾಧ್ಯಮ ಹಾಗೂ ಮಾಹಿತಿ, ವಿಡಿಯೋ ಕಾನ್ಫರೆನ್ಸಿಂಗ್ ಸೇರಿದಂತೆ ಕೆಲವು ಟೆಕ್ ಅಪ್ಲಿಕೇಷನ್ ಗಳ ಆದಾಯದಲ್ಲಿ ಏರಿಕೆ ಕಂಡುಬರುವ ಎಲ್ಲ ಸಾಧ್ಯತೆ ಇದೆ. ಮುಂಬರುವ ಆರ್ಥಿಕ ವರ್ಷದಲ್ಲಿ ಭಾರತದ ಕೆಲವು ಸ್ಟಾರ್ಟ್ ಅಪ್ ಗಳು ಒಳ್ಳೆ ಸಾಧನೆ ಮಾಡಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ.


Click it and Unblock the Notifications