"ನಾವು ಮುಂಚಿತವಾಗಿಯೇ ಪ್ಲ್ಯಾನ್ ಮಾಡಿದರೂ ವರ್ಕ್ ಫ್ರಮ್ ಹೋಮ್ ಅವಕಾಶ ನೀಡುವುದಕ್ಕೆ ತಡವಾಯಿತು. ಇವತ್ತು ಕಂಪೆನಿಯ ಡೆಸ್ಕ್ ಟಾಪ್ ಗಳನ್ನೇ ಸಿಬ್ಬಂದಿಗೆ ಕೊಡ್ತಾ ಇದ್ದೀವಿ. ಇನ್ನು ಹದಿನೈದು ದಿನ ವರ್ಕ್ ಫ್ರಮ್ ಹೋಮ್ ಅಂತಲೇ ಕೆಲಸ ಮಾಡುವುದಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಒಪ್ಪಿಗೆ ಸಿಕ್ಕಿದೆ. ಮುಂದೆ ಏನಾಗುತ್ತದೋ ನೋಡಬೇಕು".
- ಹೀಗೆ ಹೇಳಿದವರು ಪ್ರತಿಷ್ಠಿತ ಬಿಪಿಒ ಕಂಪೆನಿಯೊಂದರ ಮ್ಯಾನೇಜರ್. ಕೊರೊನಾದ ಪರಿಣಾಮ ಬಗ್ಗೆ ಕನ್ನಡ ಗುಡ್ ರಿಟರ್ನ್ಸ್ ಜತೆಗೆ ಮಾತನಾಡಿದ ಅವರು, ತಮ್ಮ ಹೆಸರು ಹಾಗೂ ಕಂಪೆನಿ ಯಾವುದು ಎಂದು ಪ್ರಕಟಿಸಬಾರದು ಎಂಬ ಷರತ್ತಿನ ಮೇಲೆ ಮಾತನಾಡುವುದಕ್ಕೆ ಒಪ್ಪಿಕೊಂಡರು. ಆ ನಂತರವೇ ಅವರು ಸದ್ಯದ ಪರಿಸ್ಥಿತಿಯನ್ನು ಹೀಗೆ ವಿವರಿಸಿದರು.
.
ಡೆಸ್ಕ್ ಟಾಪ್ ಗಳನ್ನೇ ನೀಡಲಾಗಿದೆ
ನಮ್ಮ ಕಂಪೆನಿಯದು ಥರ್ಡ್ ಪಾರ್ಟಿ ಬಿಪಿಒ. ಹಾಗಂದರೆ ನಾವು ಬೇರೆ ಕಂಪೆನಿಗಳ ಕೆಲಸವನ್ನು ಮಾಡುತ್ತೇವೆ. ನಮಗೆ ಅವರು ಗ್ರಾಹಕರು. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮುಂಚೆ ಅವರ ಒಪ್ಪಿಗೆ ಪಡೆಯುವುದು ಅನಿವಾರ್ಯ. ಇನ್ನು ನಮಗೆ ಬರಬೇಕಿದ್ದ ಸಾವಿರಾರು ಲ್ಯಾಪ್ ಟಾಪ್ ಗಳು ಸಿಂಗಾಪೂರ್ ನಲ್ಲೇ ಉಳಿದುಕೊಂಡವು. ನಮ್ಮಲ್ಲಿ ಈಗಲೂ ಬಹುತೇಕರು ಡೆಸ್ಕ್ ಟಾಪ್ ಬಳಸುತ್ತಾರೆ. ಅವರಿಗೆ ಲ್ಯಾಪ್ ಟಾಪ್ ನೀಡುವ ಸಲುವಾಗಿ ಆರ್ಡರ್ ಮಾಡಿದ್ದೆವು. ಅವುಗಳು ಸಿಂಗಾಪೂರ್ ನಿಂದ ಭಾರತಕ್ಕೆ ಬರಬೇಕಿತ್ತು. ಆದರೆ ಕೊರೊನಾ ವೈರಸ್ ಪರಿಣಾಮ ಆಮದು- ರಫ್ಟಿನ ಮೇಲೂ ಆಗಿರುವುದರಿಂದ ಅವುಗಳನ್ನು ಭಾರತಕ್ಕೆ ರವಾನಿಸಲು ಆಗಲೇ ಇಲ್ಲ. ಕೊನೆ ಕ್ಷಣದ ತನಕ ಎಲ್ಲ ಪ್ರಯತ್ನವನ್ನೂ ಮಾಡಿದೆವು. ಇನ್ನು ಸಾಧ್ಯವಿಲ್ಲ ಎನಿಸಿದಾಗ ಡೆಸ್ಕ್ ಟಾಪ್ ಗಳನ್ನೇ ತೆಗೆದುಕೊಂಡು ಹೋಗಲು ತಿಳಿಸಿದ್ದೇವೆ.
ಗೋಪ್ಯತಾ ಒಪ್ಪಂದದ ಗತಿ ಏನು?
ಬಿಪಿಒಗಳಲ್ಲಿ ಕ್ಯಾಪ್ಟಿವ್ ಅಂತಲೂ ಇದೆ. ಅಂದರೆ ಆಯಾ ಕಂಪೆನಿಗಳಿಂದಲೇ ಸಿಬ್ಬಂದಿಯನ್ನು ನೇಮಿಸಿಕೊಂಡಿರುತ್ತಾರೆ. ಅವರಿಗೆ ನಿರ್ಧಾರ ಮಾಡುವುದು ಕಷ್ಟವೇನಲ್ಲ. ಥರ್ಡ್ ಪಾರ್ಟಿ ಬಿಪಿಒಗಳ ರೀತಿಯಲ್ಲಿ ಗ್ರಾಹಕರಿಂದ ಅನುಮತಿ ಪಡೆಯಬೇಕು ಎಂಬ ಒತ್ತಡ ಇರುವುದಿಲ್ಲ. ಇನ್ನು ಐಟಿ- ಬಿಪಿಒ ಕಂಪೆನಿಗಳಲ್ಲಿ ಡೇಟಾ ಗೋಪ್ಯತೆ ಕಾಯ್ದುಗೊಳ್ಳುವುದು ಬಹಳ ಮುಖ್ಯ. ಥರ್ಡ್ ಪಾರ್ಟಿ ಬಿಪಿಒಗಳಲ್ಲಿ ತಾವು ಯಾವ ಕಂಪೆನಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದನ್ನು ಯಾರಿಗೂ ಬಹಿರಂಗ ಮಾಡುವಂತಿಲ್ಲ. ಉದ್ಯೋಗಕ್ಕೆ ಸೇರುವಾಗಲೇ ಈ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿರಲಾಗಿರುತ್ತದೆ. ಈಗ ಮನೆಗಳಿಂದಲೇ ಕೆಲಸ ಮಾಡುವುದಕ್ಕೆ ಅವಕಾಶ ನೀಡುವುದರಿಂದ ಯಾವ ಕಂಪೆನಿಗಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ಹೇಳುವುದಿರಲಿ, ಕಣ್ಣೆದುರೇ ನೋಡಿದಂತಾಗುತ್ತದೆ. ಈ ಹಿಂದೆ ಮಾಡಿಕೊಂಡ ಒಪ್ಪಂದದ ಗತಿ ಏನು ಎಂಬ ಪ್ರಶ್ನೆಯೂ ಇದೆ.
ಹಾಟ್ ಸ್ಪಾಟ್ ಡಿವೈಸ್ ಗಳಿಗೂ ಬೇಡಿಕೆ
ನಮ್ಮ ಕಂಪೆನಿಯಿಂದಲೇ ಇಂಟರ್ ನೆಟ್ ಗೂ ವ್ಯವಸ್ಥೆ ಮಾಡಿಕೊಡಲಾಗಿದೆ. ಆದರೆ ಇದಕ್ಕಾಗಿಯೇ ಕೆಲವು ದಿನ ತಡಲಾಯಿತು. ಹಾಟ್ ಸ್ಪಾಟ್ ಡಿವೈಸ್ ಗಳಿಗೆ ಬಹಳ ಬೇಡಿಕೆ ಬಂದಿದೆ. ಅಷ್ಟೇ ಏಕೆ, ಇಂಟರ್ ನೆಟ್ ಕನೆಕ್ಷನ್ ಗೆ ಕೂಡ ಅಷ್ಟೇ ಡಿಮ್ಯಾಂಡ್ ಇದೆ. ಆರ್ಡರ್ ನೀಡುವ ಸಲುವಾಗಿ ತೆರಳಿದರೆ, ಮೊದಲ ಮಾತಿಗೆ ಯಾರೂ, ನಮ್ಮ ಬಳಿ ಇವೆ, ಕೊಡ್ತೀವಿ ಅನ್ನೋ ಮಾತನ್ನು ಹೇಳಲೇ ಇಲ್ಲ. ಡಿವೈಸ್ ನ ಫ್ರೀಯಾಗಿ ಕೊಡ್ತೀವಿ. ಆದರೆ ಇಂಟರ್ ನೆಟ್ ಸಂಪರ್ಕಕ್ಕೆ ನಮ್ಮ ಜತೆ ಆರು ತಿಂಗಳು ಕಂಪೆನಿಯವರು ಒಪ್ಪಂದ ಮಾಡಿಕೊಂಡರೆ ಮಾತ್ರ ಎಂಬುದು ಷರತ್ತು. ಆದರೆ ವರ್ಕ್ ಫ್ರಮ್ ಹೋಮ್ ಅನ್ನೋದು ಶಾಶ್ವತ ವ್ಯವಸ್ಥೆ ಅಲ್ಲ. ಜತೆಗೆ ಆರು ತಿಂಗಳು ಒಪ್ಪಂದ ಮಾಡಿಕೊಂಡು, ಸುಮ್ಮನೆ ಹಣ ಪಾವತಿಸುವುದಕ್ಕೆ ನಮ್ಮ ಕಂಪೆನಿ ತಯಾರಿರಲಿಲ್ಲ. ಅಂತೂ ಆ ರೀತಿ ಒಪ್ಪಂದ- ಷರತ್ತು ಇಲ್ಲದ ಕಡೆ ಡಿವೈಸ್, ಇಂಟರ್ ನೆಟ್ ಸಂಪರ್ಕ ಪಡೆದುಕೊಂಡಿದ್ದೀವಿ.
ಎಲ್ಲ ಟ್ರಿಪ್ ಗಳು ಕ್ಯಾನ್ಸಲ್
ಬಿಪಿಒ, ಐಟಿ ಕಂಪೆನಿಗಳಲ್ಲಿ ವರ್ಕ್ ಫ್ರಮ್ ಹೋಮ್ ನೀಡುವುದರಿಂದ ಅತಿ ದೊಡ್ಡ ಹೊಡೆತ ಬೀಳುವುದು ಕಾರು ಮಾಲೀಕರು, ಚಾಲಕರಿಗೆ. ಬೆಂಗಳೂರು ಒಂದಕ್ಕೇ ಅನ್ವಯಿಸಿ ಹೇಳುವುದಾದರೂ ಸಾವಿರಾರು ಮಂದಿ ಇದನ್ನೇ ಅವಲಂಬಿಸಿದ್ದಾರೆ. ಇತ್ತೀಚೆಗೆ ಆ ಸಂಖ್ಯೆಯಲ್ಲಿ ಕಡಿಮೆ ಆಗಿದ್ದರೂ ಈಗಲೂ ಬಿಪಿಒ- ಐಟಿ ಕಂಪೆನಿಗಳಿಗೆ ಕಾರು ಓಡಿಸಿಕೊಂಡು ಜೀವನ ನಡೆಸುತ್ತಿರುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಈ ವಾರವಿಡೀ ಎಷ್ಟು ಜನಕ್ಕೆ, ಯಾವ ಶಿಫ್ಟ್ ಗೆ ಬೇಕಾಗುತ್ತದೆ ಎಂಬ ಬಗ್ಗೆಯೂ ಟ್ರಾವೆಲ್ ಡೆಸ್ಕ್ ನವರಿಗೆ ಅಪ್ ಡೇಟ್ ನೀಡಲಾಗಿತ್ತು. ಆದರೆ ಈಗ ಏಕಾಏಕಿ ಎಲ್ಲರಿಗೂ ವರ್ಕ್ ಫ್ರಮ್ ಹೋಮ್ ನೀಡುತ್ತಿರುವುದರಿಂದ ಆ ಎಲ್ಲ ಟ್ರಿಪ್ ಗಳನ್ನೂ ಕ್ಯಾನ್ಸಲ್ ಮಾಡಬೇಕಾಗುತ್ತದೆ. ಇಂಥ ಸನ್ನಿವೇಶದಲ್ಲಿ ಹೊರಗಿನ ಟ್ರಿಪ್ ಗಳು ಸಹ ಇಲ್ಲದಿರುವುದರಿಂದ ವಾಹನ ಚಾಲಕರು- ಮಾಲೀಕರು ಏನು ಮಾಡುತ್ತಾರೋ ಏನೋ ಗೊತ್ತಿಲ್ಲ್ ಎಂದು ಮಾತು ಮುಗಿಸಿದರು ಬಿಪಿಒ ಕಂಪೆನಿ ಮ್ಯಾನೇಜರ್.


Click it and Unblock the Notifications