ಬ್ಯಾಂಕ್ ಗಳಿಗೆ ದೊಡ್ಡ ಮೊತ್ತದ ಬಾಕಿ ಉಳಿಸಿಕೊಂಡಿರುವ ದೇಶದ ಟಾಪ್ 50 ಮಂದಿ ಉದ್ದೇಶಪೂರ್ವಕ ಸುಸ್ತಿದಾರರಿಂದ ಬರಬೇಕಾದ ಮೊತ್ತ 68,607 ಕೋಟಿ ರುಪಾಯಿಯನ್ನು ತಾಂತ್ರಿಕವಾಗಿ ರೈಟ್ ಆಫ್ ಮಾಡಲಾಗಿದೆ. ಇದು ಸೆಪ್ಟೆಂಬರ್ 30, 2019ರ ತನಕದ ಮಾಹಿತಿ ಎಂದು ಆರ್ ಬಿಐ ತಿಳಿಸಿದೆ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಐ) ಅಡಿ ಪ್ರಶ್ನೆ ಕೇಳಲಾಗಿತ್ತು.
ತಲೆ ತಪ್ಪಿಸಿಕೊಂಡಿರುವ ಮೆಹುಲ್ ಚೋಕ್ಸಿಗೆ ಸೇರಿದ ಗೀತಾಂಜಲಿ ಜೆಮ್ಸ್ 5,492 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿತ್ತು. ಆ ನಂತರ REI ಆಗ್ರೋ 4314 ಕೋಟಿ ರುಪಾಯಿ, ವಿನ್ಸಮ್ ಡೈಮೆಂಡ್ಸ್ 4076 ಕೋಟಿ, ರೋಟೋಮ್ಯಾಕ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ 2850 ಕೋಟಿ, ಚೆಮಿ 2326 ಕೋಟಿ, ರುಚಿ ಸೋಯಾ (ಸದ್ಯಕ್ಕೆ ರಾಮ್ ದೇವ್ ಪತಂಜಲಿ ಮಾಲೀಕತ್ವದಲ್ಲಿದೆ) 2212 ಕೋಟಿ ಮತ್ತು ಝೂಮ್ ಡೆವೆಲಪರ್ಸ್ 2012 ಕೋಟಿ ಬಾಕಿ ಪಾವತಿಸಿಲ್ಲ.
ಈ ಪಟ್ಟಿಯಲ್ಲಿ ವಿಜಯ್ ಮಲ್ಯರ ಕಿಂಗ್ ಫಿಷರ್ ಏರ್ ಲೈನ್ಸ್ ಒಂಬತ್ತನೇ ಸ್ಥಾನದಲ್ಲಿದ್ದು, 1943 ಕೋಟಿ ರುಪಾಯಿ ರೈಟ್ ಆಫ್ ಮಾಡಲಾಗಿದೆ. ಫಾರೆವರ್ ಪ್ರಿಷಿಯಸ್ ಜ್ಯುವೆಲ್ಲರಿ ಅಂಡ್ ಡೈಮಂಡ್ಸ್ 1962 ಕೋಟಿ ಹಾಗೂ ಡೆಕನ್ ಕ್ರಾನಿಕಲ್ ನ 1915 ಕೋಟಿ ರುಪಾಯಿಯನ್ನು ಬ್ಯಾಂಕ್ ಗಳು ಖಾತೆಯಿಂದ ಅಳಿಸಿಹಾಕಿವೆ.

ಚೋಕ್ಸಿಗೆ ಸೇರಿದ ಮತ್ತೊಂದು ಕಂಪೆನಿ ಗಿಲಿ ಇಂಡಿಯಾ ಮತ್ತು ನಕ್ಷತ್ರ ಬ್ರ್ಯಾಂಡ್ಸ್ ಸಹ ಕ್ರಮವಾಗಿ 1447 ಕೋಟಿ ಹಾಗೂ 1109 ಕೋಟಿ ಸಾಲ ಉಳಿಸಿಕೊಂಡಿದ್ದವು. ಅವುಗಳನ್ನು ರೈಟ್ ಆಫ್ ಮಾಡಲಾಗಿದೆ. ಬ್ಯಾಂಕ್ ಗಳಿಗೆ ಸಾಲ ಬಾಕಿ ಉಳಿಸಿಕೊಂಡ ಟಾಪ್ 50 ಮಂದಿಯ ಹೆಸರನ್ನು ಬಹಿರಂಗಗೊಳಿಸುವಂತೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಕೇಳಿದ್ದರು.
"ಇದು ಬ್ಯಾಂಕ್ ಗಳಿಂದ ವರದಿ ಆಗಿರುವಂತೆ ಸಿಕ್ಕ ದತ್ಟಾಂಶ. ತಪ್ಪಾಗಿ ಅಥವಾ ದಾರಿ ತಪ್ಪಿಸುವಂತೆ ಯಾವುದಾದರೂ ಸಂಸ್ಥೆ ವರದಿ ಮಾಡಿದಲ್ಲಿ ಅದಕ್ಕೆ ಆರ್ ಬಿಐ ಹೊಣೆಯಲ್ಲ" ಎಂದು ಆರ್ ಟಿಐಗೆ ನೀಡಿದ ಪ್ರತ್ಯುತ್ತರದಲ್ಲಿ ಆರ್ ಬಿಐ ತಿಳಿಸಿದೆ.


Click it and Unblock the Notifications