ಪೆಟ್ರೋಲ್- ಡೀಸೆಲ್ ಬೆಲೆಯ ಪ್ರತಿ ದಿನದ ಏರಿಳಿತ ನಿರ್ಧಾರ ಆಗುವ ಅಂಶದಲ್ಲಿ ಅಂತರರಾಷ್ಟ್ರೀಯ ಕಚ್ಚಾ ತೈಲ ದರವೂ ಒಂದು. ತೈಲ ದರ ವು ಒಂದು ಬ್ಯಾರೆಲ್ ಗೆ $ 25ಗಿಂತ ಕೆಳಗೆ ಇಳಿದಿದೆ. ಒಂದು ಬ್ಯಾರೆಲ್ ಅಂದರೆ 159 ಲೀಟರ್ ಹಾಗೂ ಒಂದು ಡಾಲರ್ ಅಂದರೆ 74.88 ರುಪಾಯಿ. ಈ ಪರಿ ಬೆಲೆ ಇಳಿದುಹೋದರೂ ದೇಶದಲ್ಲಿ ಪೆಟ್ರೋಲ್- ಡೀಸೆಲ್ ದರವು ಸತತ 13ನೇ ದಿನವಾದ ಭಾನುವಾರ ಕೂಡ ಯಾವುದೇ ಬದಲಾವಣೆ ಆಗಿಲ್ಲ.
ಮೊದಲೇ ಹೇಳಿದ ಹಾಗೆ ಕಚ್ಚಾ ತೈಲ ದರವು ಈ ಬೆಲೆ ನಿಗದಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ, ಭಾರತದ ಅಗತ್ಯದ ಶೇಕಡಾ 80ಕ್ಕಿಂತ ಹೆಚ್ಚಿನ ಪ್ರಮಾಣವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಪ್ರಮುಖ ನಗರಗಳ ಪೆಟ್ರೋಲ್ ಡೀಸೆಲ್ ದರ ಪ್ರತಿ ಲೀಟರ್ ಗೆ ಹೀಗಿದೆ.
ಎಲ್ಲಿ, ಎಷ್ಟಿದೆ ಬೆಲೆ?
ನಗರ ಪೆಟ್ರೋಲ್ ಡೀಸೆಲ್
ದೆಹಲಿ 69.59 62.29
ಮುಂಬೈ 75.30 65.21
ಚೆನ್ನೈ 72.28 65.71
ಬೆಂಗಳೂರು 71.97 64.41
ಹೈದರಾಬಾದ್ 73.97 67.82
ಗುರುಗ್ರಾಮ 70.21 62.08
ಪೆಟ್ರೋಲ್- ಡೀಸೆಲ್ ದರ ಇಳಿಸಲು ಅವಕಾಶ
ಈ ತಿಂಗಳ ಆರಂಭದಲ್ಲಿ ಪೆಟ್ರೋಲ್- ಡೀಸೆಲ್ ಮೇಲೆ ಲೀಟರ್ ಗೆ ತಲಾ 3 ರುಪಾಯಿ ಅಬಕಾರಿ ಸುಂಕ ಹಾಕಲಾಯಿತು. ಇದೀಗ ಮತ್ತೊಂದು ಸುತ್ತು ಸುಂಕ ಹೇರಲು ಹಣಕಾಸು ಸಚಿವಾಲಯ ಚಿಂತಿಸುತ್ತಿದೆ. ಕಚ್ಚಾ ತೈಲ ಬೆಲೆ ದೊಡ್ಡ ಪ್ರಮಾಣದಲ್ಲಿ ಇಳಿದಾಗ, ಪೆಟ್ರೋಲ್- ಡೀಸೆಲ್ ಬೆಲೆಯನ್ನು ಇಳಿಸುವುದಕ್ಕೂ ತೈಲ ಮಾರ್ಕೆಟಿಂಗ್ ಕಂಪೆನಿಗಳಿಗೆ ಅವಕಾಶ ಇರುತ್ತದೆ. ಆದರೆ ಅಬಕಾರಿ ಸುಂಕವನ್ನೇ ಏರಿಸಿದಾಗ ಬೆಲೆ ಇಳಿಕೆ ಆಗುವುದು ಜನರಿಗೆ ಪ್ರಯೋಜನ ಆಗಲ್ಲ.
ಪೆಟ್ರೋಲ್- ಡೀಸೆಲ್ ಮಾರಾಟ 70-80 ಪರ್ಸೆಂಟ್ ಇಳಿಕೆ
ಎಮ್ಕೆ ಬ್ರೋಕರೇಜ್ ಸಂಸ್ಥೆ ಪ್ರಕಾರ, ಇಪ್ಪತ್ತೊಂದು ದಿನಗಳ ಲಾಕ್ ಡೌನ್ ಕಾರಣಕ್ಕೆ ವಾಹನಗಳಿಗೆ ಮಾರಾಟ ಆಗುವ ತೈಲದ ಪ್ರಮಾಣದಲ್ಲಿ 70-80 ಪರ್ಸೆಂಟ್ ಇಳಿಕೆ ಆಗುತ್ತದೆ. ಇನ್ನು ಈ ಅವಧಿಯಲ್ಲಿ ಎಷ್ಟೋ ಪೆಟ್ರೋಲ್ ಬಂಕ್ ಗಳು ಕಾರ್ಯ ನಿರ್ವಹಣೆಯ ಅವಧಿಯನ್ನು ಕಡಿತಗೊಳಿಸಿವೆ.
ಗರಿಷ್ಠ ಮಟ್ಟದಿಂದ 60 ಪರ್ಸೆಂಟ್ ಬೆಲೆ ಕುಸಿತ
ದೆಹಲಿಯಲ್ಲಿ ಸಿಎನ್ ಜಿ ಮಾರಾಟವು 70-80 ಪರ್ಸೆಂಟ್ ಇಳಿದಿದ್ದು, ತುರ್ತು ಸೇವೆ ವಾಹನಗಳು, ಕೆಲ ಬಸ್ ಗಳನ್ನು ಹೊರತುಪಡಿಸಿ ಯಾವ ವಾಹನವೂ ರಸ್ತೆಗೆ ಇಳಿಯುತ್ತಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಸತತ ಐದನೇ ವಾರ ಇಳಿಕೆ ದಾಖಲಿಸಿ, 8% ದರ ಕುಸಿದಿದೆ. ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್ ಗೆ $ 1.41 ಇಳಿದು, $ 24.93ರಲ್ಲಿ ವಹಿವಾಟು ನಡೆಸುತ್ತಿದೆ. ಜನವರಿಯಲ್ಲಿ ಇದ್ದ ಗರಿಷ್ಠ ಮಟ್ಟದಿಂದ 60 ಪರ್ಸೆಂಟ್ ಬೆಲೆ ಇಳಿದಿದೆ.


Click it and Unblock the Notifications