ಸೌದಿ ಅರೇಬಿಯಾ ಮತ್ತು ರಷ್ಯಾ ಮಧ್ಯದ ದರ ಸಮರದ ಕಾರಣಕ್ಕೆ ಕಚ್ಚಾ ತೈಲ ಬೆಲೆ 2016ರ ಫೆಬ್ರವರಿಯಲ್ಲಿ ಇದ್ದ ಬೆಲೆಗೆ ಕುಸಿದ ಹಿನ್ನೆಲೆಯಲ್ಲಿ ಮಂಗಳವಾರ (ಮಾರ್ಚ್ 10, 2020) ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಲೀಟರ್ ಗೆ 30 ಪೈಸೆ ಹಾಗೂ 25 ಪೈಸೆ ಇಳಿಕೆಯಾಗಿದೆ. ಸೋಮವಾರದಂದು ಕೂಡ ಬೆಲೆ ಇಳಿದಿತ್ತು. ಇದೇ ರೀತಿ ಈ ವಾರವಿಡೀ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.

ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ ಲೀಟರ್ ಗೆ ಹೀಗಿದೆ:
ದೆಹಲಿ 70.29 ರುಪಾಯಿ
ಮುಂಬೈ 75.99 ರುಪಾಯಿ
ಚೆನ್ನೈ 73.02 ರುಪಾಯಿ
ಬೆಂಗಳೂರು 72.70 ರುಪಾಯಿ
ಹೈದರಾಬಾದ್ 74.72 ರುಪಾಯಿ
ಪ್ರಮುಖ ನಗರಗಳಲ್ಲಿ ಡೀಸೆಲ್ ದರ ಲೀಟರ್ ಗೆ ಹೀಗಿದೆ:
ದೆಹಲಿ 63.01 ರುಪಾಯಿ
ಮುಂಬೈ 65.97 ರುಪಾಯಿ
ಚೆನ್ನೈ 66.48 ರುಪಾಯಿ
ಬೆಂಗಳೂರು 65.16 ರುಪಾಯಿ
ಹೈದರಾಬಾದ್ 68.60 ರುಪಾಯಿ
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಹಿನ್ನೆಲೆಯಲ್ಲಿ ಗೊತ್ತಿರಬೇಕಾದ ಪ್ರಮುಖ ಅಂಶಗಳು:
* ಫೆಬ್ರವರಿ 27ನೇ ತಾರೀಕಿನಿಂದ ಬೆಲೆ ಇಳಿಯುತ್ತಿದ್ದು, 2020ನೇ ಇಸವಿಯಲ್ಲಿ ಇಲ್ಲಿಯ ತನಕ ಪ್ರತಿ ಲೀಟರ್ ಗೆ 5 ರುಪಾಯಿ ದರ ಇಳಿದಿದೆ. ಪೆಟ್ರೋಲ್- ಡೀಸೆಲ್ ದರ 8-9 ತಿಂಗಳ ಕನಿಷ್ಠ ಮಟ್ಟದಲ್ಲಿದೆ.
* ಮಾರ್ಚ್ 9ನೇ ತಾರೀಕು ಕಚ್ಚಾ ತೈಲ ದರದಲ್ಲಿ ಇಳಿಕೆಯಾದ 30% ಅನ್ನು ತೈಲ ಮಾರ್ಕೆಟಿಂಗ್ ಕಂಪೆನಿಯವರು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಏಕೆಂದರೆ, ಕಂಪೆನಿಗಳು ಅಂತರರಾಷ್ಟ್ರೀಯ ಬೆಂಚ್ ಮಾರ್ಕ್ ದರದ ಹದಿನೈದು ದಿನದ ಸರಾಸರಿಯನ್ನು ತೆಗೆದುಕೊಳ್ಳುತ್ತವೆ. ತೈಲ ಮತ್ತು ವಿನಿಮಯ ದರದಲ್ಲಿ ವಿಪರೀತ ಏರಿಳಿತ ಇರುವುದರಿಂದ ಯಾವುದೇ ಏರಿಕೆ ಅಥವಾ ಇಳಿಕೆಯನ್ನು ನಿರ್ದಿಷ್ಟ ಕಾಲಾವಧಿಗೆ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
* ಕಚ್ಚಾ ತೈಲ ಬೆಲೆ 25% ಇಳಿಕೆಯಾಗಿದ್ದರೂ ಮಂಗಳವಾರದಂದು 6% ಚೇತರಿಕೆ ಕಂಡಿದೆ. ಈಗಾಗಲೇ ಕೊರೊನಾ ವೈರಾಣು ಆತಂಕ, ಸೌದಿ ಅರೇಬಿಯಾ- ರಷ್ಯಾ ಮಧ್ಯದ ದರ ಸಮರದ ಕಾರಣಕ್ಕೆ 1991ರ ಗಲ್ಫ್ ಯುದ್ಧದ ನಂತರದಲ್ಲಿ ಒಂದು ದಿನದಲ್ಲಿ ಇಳಿಕೆಯಾದ ಗರಿಷ್ಠ ಮಟ್ಟ ಇದಾಗಿದೆ.
* ಕಚ್ಚಾ ತೈಲ ಬೆಲೆಯ ಇಳಿಕೆ ಪ್ರಮಾಣಕ್ಕೆ ತಕ್ಕಂತೆ ಪೆಟ್ರೋಲ್- ಡೀಸೆಲ್ ದರವನ್ನು ಇಳಿಸದ ಕೇಂದ್ರ ಸರ್ಕಾರದ ವಿರುದ್ಧ ಪ್ರಮುಖ ವಿರೋಧ ಪಕ್ಷದ ನಾಯಕ- ಕಾಂಗ್ರೆಸ್ ವಕ್ತಾರ ರಣ್ ದೀಪ್ ಸಿಂಗ್ ಸುರ್ಜೇವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click it and Unblock the Notifications