ಕ್ರಿಪ್ಟೋ ಸ್ವತ್ತುಗಳಿಗೆ ಸಂಬಂಧಿತ ಸಮಸ್ಯೆಗಳ ಬಗ್ಗೆ ಕೂಡಲೇ ಗಮನಹರಿಸಬೇಕಾದ ಅವಶ್ಯಕತೆ ಇದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಹಾಗೆಯೇ ಆರ್ಥಿಕತೆಗೆ ಆಗುವ ಹಾನಿಯನ್ನು ತಪ್ಪಿಸುವ ಸಂದರ್ಭದಲ್ಲಿ ಜಿ 20 ಯಾವುದೇ ಸಂಭಾವ್ಯ ಪ್ರಯೋಜನಗಳನ್ನು ಕಳೆದುಕೊಳ್ಳದಂತೆಯೂ ನೋಡಿಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಹೇಳಿದ್ದಾರೆ.
ಜಿ20 ಸಚಿವರುಗಳು ಮತ್ತು ಕೇಂದ್ರ ಬ್ಯಾಂಕ್‌ನ ಗವರ್ನರ್‌ನ ಜೊತೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಖ್ಯ ಕಚೇರಿಯಲ್ಲಿ ಕ್ರಿಪ್ಟೋ ಸ್ವತ್ತುಗಳ ಬಗ್ಗೆ ಮಾತಾನಾಡುತ್ತಾ ನಿರ್ಮಲಾ ಸೀತಾರಾಮನ್ ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ. ಕ್ರಿಪ್ಟೋ ಸ್ವತ್ತುಗಳ ಹಣಕಾಸು ಪರಿಣಾಮಗಳು ("Macrofinancial Implications of Crypto Assets") ಎಂಬ ವಿಚಾರದಲ್ಲಿ ಸೆಷನ್ ನಡೆದಿದ್ದು, ಈ ಸಂದರ್ಧ ನಿರ್ಮಲಾ ಹೇಳಿಕೆ ನೀಡಿದ್ದಾರೆ.

ವಾರ್ಷಿಕವಾಗಿ ಒಂದೊಂದು ದೇಶಗಳು ಜಿ20 ಸಭೆಯನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಈ ಬಾರಿ ಭಾರತವು ಜಿ20 ಸಭೆಯನ್ನು ನಡೆಸುತ್ತಿದೆ. ಈ ಸೆಷನ್‌ನಲ್ಲಿ ಕ್ರಿಪ್ಟೋ ಸ್ವತ್ತುಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಜಿ20ಯಲ್ಲಿ ಕ್ರಿಪ್ಟೋಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ದೇಶಗಳ ನಡುವೆ ನಡೆಯುತ್ತಿರುವ ಚರ್ಚೆಯ ಪ್ರಮುಖ ಅಂಶವಾಗಿದೆ. ಈ ವಲಯವನ್ನು ನಿಯಂತ್ರಣ ಮಾಡುವ ತುರ್ತು ಕುರಿತು ಸದಸ್ಯ ರಾಷ್ಟ್ರಗಳಲ್ಲಿ ಸರ್ವಾನುಮತವಿದೆ. ಈ ವಿಚಾರ ಸಂಬಂಧಿತ ತಜ್ಞರು ಸಭೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀತಿ ಮತ್ತು ನಿಯಂತ್ರಕ ಚೌಕಟ್ಟಿನ ಪ್ರಮುಖ ಅಂಶಗಳನ್ನು ಹೊರತರುವಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ಹಣಕಾಸು ಸ್ಥಿರತೆ ಮಂಡಳಿ (ಎಫ್‌ಎಸ್‌ಬಿ) ಕಾರ್ಯವನ್ನು ಜಿ20 ಅಂಗೀಕಾರ ಮಾಡುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಕ್ರಿಪ್ಟೋ ನಿಯಂತ್ರಣಕ್ಕೆ ಕ್ರಮ ಅಗತ್ಯವಾಗಿದೆ ಎಂದು ಕೂಡಾ ತಿಳಿಸಿದ್ದಾರೆ.
ಈ ಹಿಂದೆಯೂ ಕ್ರಿಪ್ಟೋ ವಿರುದ್ಧ ಕ್ರಮ
ಕ್ರಿಪ್ಟೋ ಸ್ವತ್ತುಗಳ ಮೇಲೆ ಜಾಗತಿಕವಾಗಿ ಸಂಘಟಿತ ನೀತಿಯನ್ನು ಹೊಂದುವ ವಿಚಾರದಲ್ಲಿ ಜಿ20 ಸದಸ್ಯರಲ್ಲಿ ಒಮ್ಮತವಿದೆ ಎಂದು ಸಚಿವರು ಉಲ್ಲೇಖ ಮಾಡಿದ್ದಾರೆ. ಇನ್ನು ಈ ಹಿಂದೆಯೂ ಕ್ರಿಪ್ಟೊ ನಿಯಂತ್ರಣಕ್ಕೆ ಸಂಬಂಧಿಸಿದ ಕ್ರಮಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದ್ದಾರೆ.
ಈ ಹಿಂದೆ ಕೇಂದ್ರ ಸರ್ಕಾರವು ಕ್ರಿಪ್ಟೋಕರೆನ್ಸಿ ಸೇರಿದಂತೆ ವರ್ಚುವಲ್ ಡಿಜಿಟಲ್ ಅಸೆಟ್ (ವಿಡಿಎ) ವಹಿವಾಟನ್ನು ಮನಿ ಲಾಂಡರಿಂಗ್ ಕಾಯ್ದೆಯಡಿಯಲ್ಲಿ ತರಲು ನಿರ್ಧಾರ ಮಾಡಿದೆ. ಮನಿ ಲಾಂಡರಿಂಗ್ ಕಾಯ್ದೆ (ಪಿಎಂಎಲ್‌ಎ) 2002ರ ಅಡಿಯಲ್ಲಿ ಕ್ರಿಪ್ಟೋವನ್ನು ತರಲು ಕೇಂದ್ರ ತೀರ್ಮಾನಿಸಿದೆ. ವರ್ಚುವಲ್ ಡಿಜಿಟಲ್ ಅಸೆಟ್ ಎಂದರೆ ಕೋಡ್ ಅಥವಾ ನಂಬರ್ ಅಥವಾ ಟೋಕನ್ ಆಗಿದೆ.
ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿದ ಮಾಹಿತಿ ಪ್ರಕಾರ ಕ್ರಿಪ್ಟೋ ಟ್ರೇಡಿಂಗ್, ಸೇಫ್‌ಕೀಪಿಂಗ್ ಮತ್ತು ಸಂಬಂಧಿತ ಹಣಕಾಸು ಸೇವೆ ಮನಿ ಲಾಂಡರಿಂಗ್ ವಿರೋಧಿ ಕಾನೂನು ಅನ್ವಯವಾಗಲಿದೆ. ಹೊಸ ನಿಯಮಗಳ ಹೇರಿಕೆಯೊಂದಿಗೆ, ಭಾರತೀಯ ಕ್ರಿಪ್ಟೋ ವಿನಿಮಯ ಕೇಂದ್ರಗಳು ಅನುಮಾನಾಸ್ಪದ ಚಟುವಟಿಕೆಯನ್ನು ಫೈನಾನ್ಶಿಯಲ್ ಇಂಟೆಲಿಜೆನ್ಸ್ ಯುನಿಟ್ ಇಂಡಿಯಾ (FIU-IND) ಗೆ ವರದಿ ಮಾಡಬೇಕಾಗುತ್ತದೆ.
"ಎಕ್ಸ್‌ಚೇಂಜ್ ಮತ್ತು ವರ್ಚುವಲ್ ಡಿಜಿಟಲ್ ಅಸೆಟ್ ಮತ್ತು ಫಿಯೆಟ್ ಕರೆನ್ಸಿಗಳ ನಡುವಿನ ವಿನಿಮಯವು ಒಂದು ಅಥವಾ ಹೆಚ್ಚಿನ ರೀತಿಯ ವರ್ಚುವಲ್ ಡಿಜಿಟಲ್ ಸ್ವತ್ತುಗಳ ನಡುವೆ ವಿನಿಮಯ, ವರ್ಚುವಲ್ ಡಿಜಿಟಲ್ ಸ್ವತ್ತುಗಳ ವರ್ಗಾವಣೆ, ವರ್ಚುವಲ್ ಡಿಜಿಟಲ್ ಸ್ವತ್ತುಗಳ ಸುರಕ್ಷತೆ ಅಥವಾ ನಿರ್ವಹಣೆ ಅಥವಾ ವರ್ಚುವಲ್ ಡಿಜಿಟಲ್ ಸ್ವತ್ತುಗಳ ಮೇಲೆ ನಿಯಂತ್ರಣವನ್ನು ಸಕ್ರಿಯಗೊಳಿಸುವ ಸಾಧನಗಳು ಈ ಕಾನೂನಿನಡಿಯಲ್ಲಿ ಸೇರುತ್ತದೆ," ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.


Click it and Unblock the Notifications