ಕಾಂಗ್ರೆಸ್ ಚುನಾವಣೆಗೂ ಮುನ್ನ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಆ ಯೋಜನೆಗಳಲ್ಲಿ ಈಗ ಒಟ್ಟಾಗಿ ನಾಲ್ಕು ಯೋಜನೆಗಳನ್ನು ಅಧಿಕಾರಕ್ಕೆ ಬಂದ ಬಳಿಕ ಜಾರಿ ಮಾಡಿದೆ. ಆ ಪೈಕಿ ಗೃಹ ಲಕ್ಷ್ಮೀ ಯೋಜನೆ ಕೂಡಾ ಒಂದಾಗಿದ್ದು, ಈ ಯೋಜನೆ ಫಲಾನುಭವಿಗಳಿಗೆ ದಸರಾದ ಭರ್ಜರಿ ಉಡುಗೊರೆ ಲಭ್ಯವಾಗಲಿದೆ.
ಪ್ರತಿ ತಿಂಗಳ 2 ಸಾವಿರ ರೂಪಾಯಿಯಂತೆ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಒಟ್ಟು 4 ಸಾವಿರ ರೂಪಾಯಿಯನ್ನು ಜಮೆ ಮಾಡಲಾಗುತ್ತದೆ ಎಂದು ವರದಿಯು ಉಲ್ಲೇಖ ಮಾಡಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

4 ಸಾವಿರ ರೂಪಾಯಿ ಜಮೆಯಾಗುತ್ತಾ?
ಈಗಾಗಲೇ ಕೆಲವು ಮಹಿಳೆಯರಿಗೆ ಆಗಸ್ಟ್ ತಿಂಗಳ 2 ಸಾವಿರ ರೂಪಾಯಿ ಮೊತ್ತವನ್ನು ಜಮೆ ಮಾಡಲಾಗಿದೆ. ಆದರೆ ಇನ್ನೂ ಕೆಲವು ಮಂದಿಗೆ 2000 ರೂಪಾಯಿಯನ್ನು ಜಮೆ ಮಾಡಲಾಗಿಲ್ಲ. ಈ ಫಲಾನುಭವಿಗಳಿಗೆ ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ದಸರಾ ಉಡುಗೊರೆಯಾಗಿ ಒಂದೇ ಬಾರಿಗೆ 4 ಸಾವಿರ ರೂಪಾಯಿ ಜಮೆ ಮಾಡಲಿದೆ ಎಂದು ವರದಿಯು ಉಲ್ಲೇಖಿಸಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ. "ಕುಟುಂಬ ನಿರ್ವಹಣೆಯ ಹೊಣೆಹೊತ್ತ ಮನೆಯ ಯಜಮಾನಿಯರು ನಿತ್ಯ ಎದುರಿಸುವ ಸವಾಲುಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಉದ್ದೇಶದಿಂದ ನಮ್ಮ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2,000 ರೂಪಾಯಿ ಧನಸಹಾಯ ನೀಡಲಾಗುತ್ತಿದೆ," ಎಂದು ತಿಳಿಸಿದ್ದಾರೆ.
"ರಾಜ್ಯದ 1.08 ಕೋಟಿ ಮಹಿಳೆಯರಿಗೆ ಈಗಾಗಲೇ ಎರಡು ತಿಂಗಳ ಹಣ ಜಮೆಯಾಗಿದ್ದು, ಈ ಉದ್ದೇಶಕ್ಕಾಗಿ ಸರ್ಕಾರವು 4,449 ಕೋಟಿ ರೂಪಾಯಿ ಅನುದಾನ ಬಳಕೆ ಮಾಡಿದೆ. ಸ್ತ್ರೀಶಕ್ತಿ ಆರಾಧನೆಯ ಈ ನವರಾತ್ರಿ ಹಬ್ಬದ ಸಂದರ್ಭದಲ್ಲಿ ನಮ್ಮ ಸರ್ಕಾರವು ಸ್ತ್ರೀಸಬಲೀಕರಣಕ್ಕೆ ಬದ್ಧವಾಗಿ ಶ್ರಮಿಸುತ್ತಿದೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ," ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಉಲ್ಲೇಖಿಸಿದ್ದಾರೆ.
ಹಣ ಜಮೆಯಾಗಿಲ್ಲವೇ? ಕಾರಣ ತಿಳಿಯಿರಿ
ಈ ಯೋಜನೆಯಲ್ಲಿ 9,44,155 ಅರ್ಜಿದಾರರಿಗೆ ಹಣ ಜಮೆಯಾಗಿಲ್ಲ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರಣವನ್ನು ತಿಳಿಸಿದ್ದಾರೆ. 3082 ಅರ್ಜಿದಾರರು ಮರಣ ಹೊಂದಿದ್ದಾರೆ. ಆದ್ದರಿಂದಾಗಿ ಅನರ್ಹರಾಗಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಇನ್ನು 1,59,356 ಅರ್ಜಿದಾರರ ಡೆಮೋ ದೃಢೀಕರಣ ವಿಫಲವಾಗಿದೆ. ಫಲಾನುಭವಿಗಳ ಆಧಾರ್ ಹಾಗೂ ಬ್ಯಾಂಕ್ ಖಾತೆ ಹೆಸರಿನಲ್ಲಿ ವ್ಯತ್ಯಾಸವಿರುವ ಕಾರಣದಿಂದಾಗಿಯೂ ಹಣ ಜಮೆಯಾಗಿಲ್ಲ. ಈ ಖಾತೆಗಳನ್ನು ಸರಿಪಡಿಸುವ ಕಾರ್ಯ ನಡೆದಿದೆ. ಇನ್ನು 5,96,268 ಫಲಾನುಭವಿಗಳ ಖಾತೆಗೆ ಆಧಾರ್ ಲಿಂಕ್ ಆಗಿಲ್ಲ ಎಂದು ಹೇಳಿದರು.


Click it and Unblock the Notifications