ಕೊರೊನಾ ವೈರಾಣು ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ. ಈ ಕಾರಣಗಳಿಗೆ ಪ್ರವಾಸಕ್ಕೆ ನಿಷೇಧ ಹೇರಲಾಗಿದೆ. ವೀಸಾ ನಿರ್ಬಂಧ ಹಾಕಲಾಗಿದೆ ಹಾಗೂ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈಗಾಗಲೇ ಕೊರೊನಾ ವೈರಾಣು 60 ದೇಶಗಳಿಗೆ ವ್ಯಾಪಿಸಿದೆ. ಆದರೆ ಚೀನಾದಲ್ಲಿ ಸಂಭವಿಸಿದಂಥ ಸಾವಿನ ಸಂಖ್ಯೆಯು ಅಷ್ಟು ದೊಡ್ಡ ಮಟ್ಟದಲ್ಲಿ ಉಳಿದೆಲ್ಲೂ ಕಂಡುಬಂದಿಲ್ಲ.
ಜಾಗತಿಕ ಮಟ್ಟದಲ್ಲಿ ಸಾಂಕ್ರಾಮಿಕ ರೋಗವಾಗಿ ಹರಡಿ, ದೊಡ್ಡ ಮಟ್ಟದ ಆತಂಕ ಸೃಷ್ಟಿಸುತ್ತಿರುವ ಕೊರೊನಾಗೆ ಇತಿಹಾಸದಲ್ಲಿ ಭೀಕರ ಕಾಯಿಲೆಯಾಗಿ ಒಂದು ಸ್ಥಾನ ಸಿಗುತ್ತದೆ. ಈ ಹಿಂದೆ ಇತಿಹಾಸದಲ್ಲಿ ದಾಖಲಾಗಿ ಉಳಿದ ಅಂಥ ಭೀಕರ ಕಾಯಿಲೆಯ ವಿವರ ಇಂತಿದೆ.

* ಆರನೇ ಕಾಲರಾ (1910-11)
ಆರನೇ ಬಾರಿಯ ಕಾಲರಾ ಕಾಣಿಸಿಕೊಂಡಿದ್ದು ಭಾರತದಲ್ಲಿ. ಅದರ ಬೆನ್ನಿಗೆ ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ, ಪೂರ್ವ ಯುರೋಪ್, ರಷ್ಯಾಗಳಿಗೂ ವ್ಯಾಪಿಸಿತು. ಈ ಕಾಯಿಲೆಗೆ 8 ಲಕ್ಷ ಮಂದಿ ಸಾವನ್ನಪ್ಪಿದರು.
* ಮೂರನೇ ಕಾಲರಾ (1852)
ಮೂರನೇ ಬಾರಿಯ ಕಾಲರಾ ಕೂಡ ಭಾರತದಲ್ಲೇ ಆರಂಭವಾಯಿತು. ಇಲ್ಲಿಂದ ವಿವಿಧ ಖಂಡಗಳಿಗೆ ವ್ಯಾಪಿಸಿತು. ಇದರಿಂದ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟರು. 19ನೇ ಶತಮಾನದ ಅತ್ಯಂತ ಭೀಕರ ಕಾಯಿಲೆ ಎಂಬ ಕುಖ್ಯಾತಿ ಇದರದು.
* ಹಾಂಕಾಂಗ್ ಫ್ಲೂ (1968)
1968ರಲ್ಲಿ ಕಾಣಿಸಿಕೊಂಡ ಇನ್ ಫ್ಲುಯೆಂಜಾ ವೈರಸ್ ಮೂಲತಃ ಏಷ್ಯಾ ಖಂಡದಿಂದಲೇ ಉಗಮವಾಗಿದ್ದು, ಈ ವೈರಾಣುವಿಗೆ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾದರು.
* ಫ್ಲೂ (1889-90)
ಇದು ಇನ್ ಫ್ಲುಯೆಂಜಾ ವೈರಸ್. H3N8ನ ಉಪ ಬಗೆ. ರಷ್ಯನ್ ಸಾಮ್ರಾಜ್ಯದಲ್ಲಿ ಉದ್ಭವಿಸಿದ ಇದು, ಉತ್ತರಧ್ರುವದಾದ್ಯಂತ ಹಬ್ಬಿತು. ಈ ಕಾಯಿಲೆಗೆ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು.
* ಏಷ್ಯನ್ ಫ್ಲೂ (1957)
ಇದು ಏವಿಯನ್ ಇನ್ ಫ್ಲುಯೆಂಜಾದಿಂದ ಉದ್ಭವ ಆಯಿತು. ಆ ನಂತರ ಇದಕ್ಕೆ ಔಷಧ ಕಂಡುಹಿಡಿಯಲಾಯಿತು. ಆದರೆ ಈ ವೈರಾಣು ಇಪ್ಪತ್ತು ಲಕ್ಷ ಜನರನ್ನು ಕೊಂದಿತು.
* ಅಂಟೋನಿನೆ ಪ್ಲೇಗ್ (ಕ್ರಿಸ್ತಶಕ 165)
ಅಂಟೋನಿನೆ ಪ್ಲೇಗ್ ಅಥವಾ ಪ್ಲೇಗ್ ಆಫ್ ಗೇಲನ್ ಎಂದು ಕರೆಯಲಾಗುತ್ತದೆ. ರೋಮನ್ ಸಾಮ್ರಾಜ್ಯದಲ್ಲಿ ಕಾಣಿಸಿಕೊಂಡ ಇದು ಬಲಿ ಪಡೆದದ್ದು 50 ಲಕ್ಷ ಮಂದಿಯನ್ನು.
* ಪ್ಲೇಗ್ ಆಫ್ ಜಸ್ಟಿನಿಯನ್ (541-542)
ಬೈಜಂಟೈನ್ ಸಾಮ್ರಾಜ್ಯ ಮತ್ತು ಮೆಟರೇನಿಯನ್ ಸಮುದ್ರದ ಸುತ್ತಮುತ್ತ ಕಾಣಿಸಿಕೊಂಡ ಈ ಪ್ಲೇಗ್ ಮಾರಿಗೆ ಬಲಿಯಾದದ್ದು 2.50 ಕೋಟಿ ಮಂದಿ (ಅವತ್ತಿನ ಲೆಕ್ಕಕ್ಕೆ ಯುರೋಪ್ ಒಟ್ಟು ಜನಸಂಖ್ಯೆಯ ಅರ್ಧದಷ್ಟು).
* ಎಚ್ ಐವಿ/ಏಡ್ಸ್ (2005- 2012)
ಏಡ್ಸ್ ಅನ್ನು ಮೊದಲಿಗೆ ಗುರುತಿಸಿದ್ದು 1976ರಲ್ಲಿ, ರಿಪಬ್ಲಿಕ್ ಆಫ್ ಕಾಂಗೋದಲ್ಲಿ. ಆದರೆ 2005- 2012ರ ಮಧ್ಯೆ ಆಫ್ರಿಕಾ ಖಂಡದಲ್ಲಿ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿತು. ಲೈಂಗಿಕ ಸಂಪರ್ಕದ ಮೂಲಕ ಹಬ್ಬುವ ವೈರಾಣುವಿಗೆ 3.5 ಕೋಟಿಗೂ ಹೆಚ್ಚು ಮಂದಿ ಮೃತಪಟ್ಟರು.
* ಸ್ಪ್ಯಾನಿಷ್ ಫ್ಲೂ (1918)
ಅತ್ಯಂತ ಮಾರಣಾಂತಿಕ ಕಾಯಿಲೆ ಇದು. ಇದರ ಸೋಂಕಿಗೆ ಒಳಗಾದವರ ಸಂಖ್ಯೆ 50 ಕೋಟಿಗೆ ಹೆಚ್ಚು. ಇದಕ್ಕೆ ಮೃತಪಟ್ಟವರ ಸಂಖ್ಯೆ 5 ಕೋಟಿ.
* ದ ಬ್ಲ್ಯಾಕ್ ಡೆತ್ (1346-1353)
ದ ಬ್ಲ್ಯಾಕ್ ಡೆತ್ ಇತಿಹಾಸದಲ್ಲೇ ಅತ್ಯಂತ ಮಾರಣಾಂತಿಕ ಕಾಯಿಲೆ. 20 ಕೋಟಿಗೂ ಹೆಚ್ಚು ಮಂದಿಯನ್ನು ಬಲಿ ಪಡೆದ ಕಾಯಿಲೆ. ಇತಿಹಾಸ ತಜ್ಞರ ಪ್ರಕಾರ, ಈ ಕಾಯಿಲೆಯ ಮೂಲ ಏಷ್ಯಾ ಖಂಡ. ಹಡಗುಗಳ ಮೂಲಕ ಕಪ್ಪು ಇಲಿಗಳ ರೂಪದಲ್ಲಿ ವಿಶ್ವದಾದ್ಯಂತ ಹಬ್ಬಿತು.
ಆದರೆ, ಕೊರೊನಾ ವೈರಾಣು ಈ ವರೆಗೆ ಜಾಗತಿಕವಾಗಿ ಮೂರು ಸಾವಿರ ಜೀವಗಳನ್ನು ಬಲಿ ಪಡೆದಿದೆ. ಅದರಲ್ಲಿ ಬಹುಪಾಲು ಚೀನಾದಲ್ಲಿ. 60 ದೇಶದಲ್ಲಿ 90 ಸಾವಿರ ಮಂದಿ ಶಂಕಿತರಿದ್ದಾರೆ. ಸದ್ಯದ ಲೆಕ್ಕಾಚಾರ ಹೇಳುವುದಾದರೆ ಸಾವಿನ ಸರಾಸರಿ ಪ್ರಮಾಣ 3.4 ಪರ್ಸೆಂಟ್. ಎಬೋಲಾ ವೈರಾಣುವಿಗೆ ಹೋಲಿಸಿದರೆ (ಶೇಕಡಾ 40.4) ಅತ್ಯಂತ ಕಡಿಮೆ ಮಟ್ಟದಲ್ಲಿ ಇದೆ.
ಇಡೀ ವಿಶ್ವಕ್ಕೆ ನಾನಾ ಬಗೆಯ ಸರಕುಗಳನ್ನು ಚೀನಾ ಸರಬರಾಜು ಮಾಡುತ್ತದೆ. ವೈರಾಣು ಹಬ್ಬುತ್ತಿರುವುದರಿಂದ ವಿಶ್ವದಾದ್ಯಂತ ವಾಣಿಜ್ಯ ಚಟುವಟಿಕೆ ಮೇಲೆ ಪರಿಣಾಮ ಬೀರಿದೆ. ಇದಕ್ಕೆ ಚುಚ್ಚುಮದ್ದು ಕಂಡುಹಿಡಿಯುವ ಪ್ರಯತ್ನ ಜಾರಿಯಲ್ಲಿದೆ. ಆದರೆ ಎಷ್ಟು ಸಮಯ ಬೇಕಾಗಬಹುದು ಎಂಬುದು ಇನ್ನೂ ತಿಳಿದಿಲ್ಲ.


Click it and Unblock the Notifications