ಈಗಾಗಲೇ ಭಾರತದ ಹಲವು ನಗರಗಳಲ್ಲಿ ವಿಪರೀತ ಬಿಸಿಲಿನ ತಾಪ. ಆದರೆ ಕೊರೊನಾವನ್ನು ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ಗೃಹೋಪಯೋಗಿ ಮಾರಾಟ ಮಾಡುವ ಮಳಿಗೆಗಳಿಗೂ ಹಾಗೂ ಇ ಕಾಮರ್ಸ್ ವ್ಯವಹಾರಗಳಿಗೂ ಬೀಗ ಬಿದ್ದಿದ್ದೆ. ಈ ಕಾರಣಕ್ಕೆ ಬೇಸಿಗೆಯಲ್ಲಿ ಅಮೋಘವಾದ ಮಾರಾಟ ಕಾಣುತ್ತಿದ್ದ ಏರ್ ಕಂಡೀಷನರ್, ರೆಫ್ರಿಜರೇಟರ್ ಸೇರಿ ಬೇಸಿಗೆಯಲ್ಲಿ ಬೇಡಿಕೆಯಲ್ಲಿರುತ್ತಿದ್ದ ಉಪಕರಣಗಳ ಮಾರಾಟಕ್ಕೆ ಹೊಡೆತ ಬಿದ್ದಿದೆ.
ಈ ತಕ್ಷಣಕ್ಕೆ ಇರುವ ಮಾಹಿತಿಯಂತೆ, ಮೇ 3 ಕಳೆಯುವ ತನಕ ಪರಿಸ್ಥಿತಿಯಲ್ಲಿ ಯಾವ ಬದಲಾವಣೆ ನಿರೀಕ್ಷಿಸುವಂತಿಲ್ಲ. ಇನ್ನು ಚೀನಾದಿಂದ ಪೂರೈಕೆ ಆಗಬೇಕಾದ ಸಲಕರಣೆಗಳಂತೂ ದೊರೆಯುವುದು ದೂರದ ಮಾತಾಯಿತು. "ಭಾರತ ಆಮದು ಮಾಡಿಕೊಳ್ಳುವ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಗಳು ಬಹುತೇಕ ಚೀನಾದಿಂದ ಬರುವಂಥವು" ಎಂದು CARE ರೇಟಿಂಗ್ಸ್ ವರದಿಯಲ್ಲಿ ಬುಧವಾರ ತಿಳಿಸಲಾಗಿದೆ.
ಸಿದ್ಧ ವಸ್ತುಗಳು ಮಾತ್ರವಲ್ಲ, ಗ್ರಾಹಕ ಬಳಕೆ ವಸ್ತುಗಳ ತಯಾರಿಕೆಗೆ ಬಿಡಿ ಭಾಗಗಳನ್ನೂ ಚೀನಾದಿಂದಲೇ ಆಮದು ಮಾಡಿಕೊಳ್ಳಲಾಗುತ್ತದೆ. ಇವುಗಳ ಪೂರೈಕೆ ಕಡಿಮೆ ಆಗುತ್ತಿದ್ದಂತೆ ಸಹಜವಾಗಿಯೇ ಬೆಲೆ ಏರಿಕೆ ಆಗುತ್ತದೆ. ಆದರೂ ಒಂದು ಸಲ ಲಾಕ್ ಡೌನ್ ತೆರವು ಮಾಡುತ್ತಿದ್ದ ಹಾಗೇ ತಮ್ಮ ಬಳಿ ಇರುವ ಉತ್ಪನ್ನಗಳನ್ನು ಮಾರಿ, ಕೈ ತೊಳೆದುಕೊಳ್ಳುವ ಉಮ್ಮೇದಿಯೇ ಬಹುತೇಕರಲ್ಲಿ ಇರುತ್ತದೆ.

ಕೊರೊನಾ ವೈರಾಣು ವ್ಯಾಪಕವಾಗಿ ಹಬ್ಬಿರುವುದು ಭಾರತದ ರೀಟೇಲ್ ವಲಯದ ಮೇಲೆ ಅತಿ ದೊಡ್ಡ ಪರಿಣಾಮ ಬೀರುತ್ತದೆ. ಈ ವಲಯದಲ್ಲಿ ಜಾಗತಿಕ ಮಟ್ಟದಲ್ಲಿ ಯುಎಸ್ ಎ, ಚೀನಾ, ಜಪಾನ್ ನಂತರದ ಸ್ಥಾನ ಭಾರತದ್ದು. ಆದರೆ ಕಳೆದ ಕೆಲ ಸಮಯದಿಂದಲೇ ಆರ್ಥಿಕ ಹಿಂಜರಿತದ ಕಾರಣದಿಂದ ಬೇಡಿಕೆ ಕಡಿಮೆ ಆಗಿದ್ದ ರೀಟೇಲ್ ವಲಯಕ್ಕೆ ಕೊರೊನಾದಿಂದ ಇನ್ನೂ ದೊಡ್ಡ ಪೆಟ್ಟು ಬಿದ್ದಿದೆ.


Click it and Unblock the Notifications