ಮೊದಲ ಬಾರಿಗೆ ದೆಹಲಿಯಲ್ಲಿ ಪೆಟ್ರೋಲ್ ಗಿಂತ ಡೀಸೆಲ್ ದರ ಹೆಚ್ಚಾಗಿದೆ. ತೈಲ ಮಾರ್ಕೆಟಿಂಗ್ ಕಂಪೆನಿಗಳು ಸತತ ಹದಿನೆಂಟು ದಿನದಿಂದ ಡೀಸೆಲ್ ದರ ಏರಿಕೆ ಮಾಡುತ್ತಲೇ ಬಂದಿವೆ. ಬುಧವಾರದಂದು ಪೆಟ್ರೋಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಜೂನ್ 24, ಬುಧವಾರದಂದು ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 79.76 ರುಪಾಯಿ ಇದ್ದರೆ, ಡೀಸೆಲ್ 48 ಪೈಸೆ ಹೆಚ್ಚಳವಾಗಿ, 79.88 ರುಪಾಯಿ ಆಗಿದೆ.
ತೈಲ ದರ ಒಂದು ನಗರದಿಂದ ಮತ್ತೊಂದಕ್ಕೆ, ಅಷ್ಟೇ ಏಕೆ, ಪೆಟ್ರೋಲ್ ಬಂಕ್ ನಿಂದ ಮತ್ತೊಂದು ಪೆಟ್ರೋಲ್ ಬಂಕ್ ಗೆ ಬದಲಾಗುತ್ತದೆ. ಸಾಗಣೆ ವೆಚ್ಚ ಹಾಗೂ ಸ್ಥಳೀಯ ತೆರಿಗೆ ಮೇಲೆ ಅದು ನಿರ್ಧಾರ ಆಗುತ್ತದೆ. ಇದರ ಜತೆಗೆ ಒಂದು ತೈಲ ಮಾರ್ಕೆಟಿಂಗ್ ಕಂಪೆನಿಯಿಂದ ಮತ್ತೊಂದಕ್ಕೆ ಕೂಡ ಬೆಲೆ ಬದಲಾಗುತ್ತದೆ.
ದೆಹಲಿಯಲ್ಲಿ ಪೆಟ್ರೋಲ್ ಗಿಂತ ಡೀಸೆಲ್ ದರ ಹೆಚ್ಚಾಗಲು ಕಾರಣ ಆಗಿರುವುದು ಸರ್ಕಾರ ಹೆಚ್ಚಿಸಿರುವ ವ್ಯಾಟ್. ಡೀಸೆಲ್ ಮೇಲೆ ವ್ಯಾಟ್ ಅನ್ನು 16.75%ನಿಂದ 30&ಗೆ ಹೆಚ್ಚಿಸಿದ್ದರೆ, ಪೆಟ್ರೋಲ್ ಮೇಲೆ ವ್ಯಾಟ್ 27 ಪರ್ಸೆಂಟ್ ನಿಂದ 30ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಪೆಟ್ರೋಲ್ ಮೇಲೆ ದರ ಹೆಚ್ಚಳ 1.67 ರುಪಾಯಿಯಾದರೆ, ಡೀಸೆಲ್ ಮೇಲೆ 7.10 ರು. ಆಗುತ್ತದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಚ್ ಮಾರ್ಕ್ ದರ ಕೂಡ ಗಣನೆಗೆ ಬರುತ್ತದೆ. ಅಂದ ಹಾಗೆ ದೆಹಲಿಯಲ್ಲಿ ಪೆಟ್ರೋಲ್ ಮೂಲ ಬೆಲೆ ಲೀಟರ್ ಗೆ 22.11 ರುಪಾಯಿ ಇದ್ದರೆ, ಡೀಸೆಲ್ ಬೆಲೆ ಅದಕ್ಕಿಂತ ಸ್ವಲ್ಪ ಹೆಚ್ಚು, ಅಂದರೆ 22.93 ರುಪಾಯಿ ಇದೆ.


Click it and Unblock the Notifications