ಗೂಗಲ್, ಮೆಟಾ, ಮೈಕ್ರೋಸಾಫ್ಟ್ ಮತ್ತು ಇತರೆ ದೊಡ್ಡ ಸಂಸ್ಥೆಗಳು ಕಳೆದ ವರ್ಷ ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಉದ್ಯೋಗ ಕಡಿತವನ್ನು ಆರಂಭಿಸಿದೆ. ಆ ಪ್ರಕ್ರಿಯೆ ಈ ವರ್ಷವೂ ಕೂಡಾ ಮುಂದುವರಿದಿದೆ. ಹಲವಾರು ಸಂಸ್ಥೆಗಳು ಎರಡನೇ ಹಂತದ ಉದ್ಯೋಗ ಕಡಿತವನ್ನು ಘೋಷಣೆ ಮಾಡಿದೆ. ಕಳೆದ ವರ್ಷ ಆರಂಭವಾದ ಉದ್ಯೋಗ ಕಡಿತವನ್ನು ಈ ವರ್ಷವೂ ಅಂತರರಾಷ್ಟ್ರೀಯ ಕಂಪನಿಗಳು ಅನುಸರಿಸುತ್ತಲೇ ಇವೆ.
ಏಪ್ರಿಲ್ 24 ರಂದು, ಮನರಂಜನಾ ಸಂಸ್ಥೆಯಾದ ಡಿಸ್ನಿ ತನ್ನ ಎರಡನೇ ಹಂತದ ಉದ್ಯೋಗ ಕಡಿತವನ್ನು ಆರಂಭ ಮಾಡಿದೆ. ಈ ಎರಡನೇ ಹಂತದ ಉದ್ಯೋಗ ಕಡಿತವು 4,000 ಉದ್ಯೋಗಿಗಳ ಮೇಲೆ ಪ್ರಭಾವ ಉಂಟು ಮಾಡಿದೆ. ಫೆಬ್ರವರಿ ಸುಮಾರು 7000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದ್ದ ಡಿಸ್ನಿ ಸಂಸ್ಥೆಯು ಏಪ್ರಿಲ್‌ನಲ್ಲಿ 4000 ಮಂದಿಯನ್ನು ವಜಾಗೊಳಿಸಲಿದೆ ಎಂದು ಮಾರ್ಚ್‌ನಲ್ಲಿಯೇ ವರದಿಯಾಗಿದೆ.

ನೂತನ ಉದ್ಯೋಗ ಕಡಿತ ಯಾರ ಮೇಲೆ ಪ್ರಭಾವ?
ಮಾಧ್ಯಮಗಳ ವರದಿಯ ಪ್ರಕಾರ ಈ ಮನರಂಜನಾ ಪ್ಲಾಟ್‌ಫಾರ್ಮ್ ಸಂಸ್ಥೆಯಲ್ಲಿ ಪುನರ್ ರಚನೆ ಮಾಡುವ ಉದ್ದೇಶದಿಂದ ಏಳು ಸಾವಿರ ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಲು ಸಜ್ಜಾಗುತ್ತಿದೆ. ಸುಮಾರು 5.5 ಬಿಲಿಯನ್ ಡಾಲರ್ ಮೊತ್ತವನ್ನು ಉಳಿತಾಯ ಮಾಡುವ ನಿಟ್ಟಿನಲ್ಲಿ ಈ ಉದ್ಯೋಗ ಕಡಿತವನ್ನು ಸಂಸ್ಥೆಯು ಮಾಡುತ್ತಿದೆ ಎಂದು ಕೂಡಾ ವರದಿಯು ಉಲ್ಲೇಖಿಸಿದೆ.
ಈಗಾಗಲೇ ಹಲವಾರು ಸಂಸ್ಥೆಗಳು ಎರಡನೇ, ಮೂರನೇ ಹಂತದ ಉದ್ಯೋಗ ಕಡಿತವನ್ನು ಮಾಡುತ್ತಿದೆ. ಈ ಸಂಸ್ಥೆಗಳ ಪಟ್ಟಿಯಲ್ಲಿ ಡಿಸ್ನಿ ಕೂಡಾ ಕಂಡು ಬರುತ್ತದೆ. ಈ ಉದ್ಯೋಗ ಕಡಿತವು ಡಿಸ್ನಿ ಎಂಟರ್‌ಟೈನ್‌ಮೆಂಟ್, ಇಎಸ್‌ಪಿಎನ್, ಡಿಸ್ನಿ ಪಾರ್ಕ್ಸ್, ಪ್ರೊಡೆಕ್ಟ್ಸ್ ಮೇಲೆ ಪ್ರಭಾವ ಉಂಟು ಮಾಡಲಿದೆ. ಅಂದರೆ ಇಲ್ಲಿ ಅಧಿಕವಾಗಿ ಉದ್ಯೋಗ ಕಡಿತ ನಡೆಯಲಿದೆ.
ಮುಂದಿನ ಹಂತದ ಉದ್ಯೋಗ ಕಡಿತ ಯಾವಾಗ?
ಲಭ್ಯವಿರುವ ಮಾಹಿತಿ ಪ್ರಕಾರ ಬೇಸಿಗೆ ಸೀಸನ್‌ಗೂ ಮುನ್ನವೇ ಮುಂದಿನ ಹಂತದ ಉದ್ಯೋಗ ಕಡಿತವನ್ನು ಡಿಸ್ನಿಯಲ್ಲಿ ನಡೆಸಲಾಗುತ್ತದೆ. ಈ ಉದ್ಯೋಗ ಕಡಿತವು ಪ್ರಮುಖವಾಗಿ ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್ ಮೇಲೆ ಹೆಚ್ಚಿನ ಪ್ರಭಾವವನ್ನು ಉಂಟು ಮಾಡಲಿದೆ. ಈ ಬಗ್ಗೆ ತಮ್ಮ ಉದ್ಯೋಗಿಗಳಿಗೆ ಇಎಸ್‌ಪಿನ್ ಸಿಇಒ ಜಿಮ್ಮಿ ಪಿಟಾರೊ ಪತ್ರ ಬರೆದಿದ್ದಾರೆ.
"ನಾವು ಕಾರ್ಯಾಚರಣೆಯ ನಿಯಂತ್ರಣ ಮಾಡಿಕೊಂಡು ಮತ್ತು ಆರ್ಥಿಕವಾಗಿ ಹೊಣೆಗಾರಿಕೆಯನ್ನು ಹೊತ್ತುಕೊಂಡು ಡಿಸ್ನಿಯ ಪ್ರಮುಖ ವಿಭಾವನ್ನು ಮುನ್ನಡೆಸುತ್ತಿದ್ದೇವೆ. ಈ ಸಂದರ್ಭದಲ್ಲಿ ದಕ್ಷ ಮತ್ತು ವೇಗಯುತ ಮಾರ್ಗಗಳನ್ನು ನಾವು ಕಂಡುಕೊಳ್ಳುವುದು ಅತೀ ಮುಖ್ಯವಾಗಿದೆ," ಎಂದು ಇಎಸ್‌ಪಿಎನ್‌ನ ಸಿಇಒ ಜಿಮ್ಮಿ ಪಿಟಾರೊ ತಮ್ಮ ಸಿಬ್ಬಂದಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
"ಈ ಅವಧಿಯು ಡಿಸ್ನಿಗೆ ಪರಿವರ್ತನೆಯ ಅವಧಿ. ಈ ಬದಲಾವಣೆಗಳು ನಿಮ್ಮ ಪಾತ್ರದ ಮೇಲೆ ಹೇಗೆ ಪರಿಣಾಮ ಬೀರಬಹುದು ಅಥವಾ ಪರಿಣಾಮ ಬೀರದಿರಬಹುದು ಎಂಬುವುದು ಲೆಕ್ಕವಲ್ಲ, ಇದು ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ನಿಮಗೆ ಸಹಾಯ ಮಾಡಲು ನಾವು ಬದ್ಧರಾಗಿದ್ದೇವೆ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಅಥವಾ ನಿಮಗೆ ಯಾವುದೇ ಸಹಾಯದ ಅಗತ್ಯವಿದ್ದರೆ ಎಚ್‌ಆರ್‌ಗಳನ್ನು ಸಂಪರ್ಕ ಮಾಡಿ," ಎಂದು ಕೂಡಾ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಫೆಬ್ರವರಿಯಲ್ಲಿ ಡಿಸ್ನಿಯು ಸುಮಾರು 7000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದೆ. ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಸಂಸ್ಥೆಯು ಈ ನಿರ್ಧಾರವನ್ನು ಕೈಗೊಂಡಿದೆ. ಈ ಬಗ್ಗೆ ಮಾಹಿತಿ ನೀಡಿದ ಸಿಇಒ ಬಾಬ್ ಈಗರ್, "ನಾವು ಈಗ ಎದುರಿಸುತ್ತಿರುವ ಸವಾಲನ್ನು ನಿರ್ವಹಣೆ ಮಾಡುವುದು ಮುಖ್ಯವಾಗುತ್ತದೆ. ನಾನು ಈ ನಿರ್ಧಾರವನ್ನು ಅತೀ ಸರಳವೆಂದು ಪರಿಗಣಿಸುವುದಿಲ್ಲ," ಎಂದು ತಿಳಿಸಿದ್ದಾರೆ.


Click it and Unblock the Notifications