ಕೊರೊನಾ ಲಾಕ್ ಡೌನ್ ನಿಂದಾಗಿ ವಾಹನ ಉದ್ಯಮ ಪಾತಾಳ ಕಂಡಿದೆ. 45 ದಿನಗಳ ಕಾಲ ಫ್ಯಾಕ್ಟರಿ ಮುಚ್ಚುವುದರ ಫಲಿತಾಂಶವಾಗಿ ಭಾರತದ ವಾಹನ ವಲಯಕ್ಕೆ ಆಗುವ ನಷ್ಟ 1 ಲಕ್ಷ ಕೋಟಿ ರುಪಾಯಿ. ಅದನ್ನು ಜಿಡಿಪಿಯ 0.5% ಎಂದು ಲೆಕ್ಕ ಹಾಕಲಾಗಿದೆ. ಮಾರ್ಚ್ 25ರಿಂದ ಮೇ 3ರ ತನಕ ಲಾಕ್ ಡೌನ್ ಅವಧಿಯಲ್ಲಿ ಯಾವ ಫ್ಯಾಕ್ಟರಿಯೂ ತೆರೆದಿಲ್ಲ.
ಕೊರೊನಾ ಹಬ್ಬದಿರಲಿ ಎಂಬ ಮುಂಜಾಗ್ರತೆಯಿಂದ ಎಷ್ಟೋ ಘಟಕಗಳು ಮಾರ್ಚ್ 20ರಿಂದಲೇ ಬಾಗಿಲು ಮುಚ್ಚಿವೆ. ಎಲ್ಲೂ ಉತ್ಪಾದನೆ ಇಲ್ಲ. ಇದರಿಂದಾಗಿ ಸರ್ಕಾರಕ್ಕೆ ಬರಬಹುದಾಗಿದ್ದ ಜಿಎಸ್ ಟಿ 28 ಸಾವಿರ ಕೋಟಿ ಮತ್ತು ಇತರ ರಾಜ್ಯ ಸರ್ಕಾರದ ಆದಾಯ 14 ಸಾವಿರ ಕೋಟಿ ರುಪಾಯಿಗೆ ಹೊಡೆತ ಬಿದ್ದಿದೆ. ಇದು ತಜ್ಞರು ಮುಂದಿಟ್ಟಿರುವ ಒಂದು ಅಂದಾಜು ಪಟ್ಟಿ.
ಮೂರನೇ ಎರಡು ಭಾಗದಷ್ಟು ಜಿಎಸ್ ಟಿ ಆದಾಯ ಖೋತಾ
ಆದರೂ ಕೆಲ ಘಟಕಗಳು ಕಾರ್ಯ ನಿರ್ವಹಿಸಲು ಸರ್ಕಾರ ಅನುಮತಿಸಿದೆ. ಪೂರೈಕೆದಾರರಿಂದ ಅಗತ್ಯ ವಸ್ತುಗಳ ಪೂರೈಕೆ ಅನಿಶ್ಚಿತವಾಗಿದೆ. ಶೋರೂಮ್ ಗಳು ಮುಚ್ಚಿವೆ. ದಾಸ್ತಾನು ಹಾಗೆ ಬಿದ್ದಿದೆ. ಸದ್ಯಕ್ಕಂತೂ ಯಾರೂ ಕಾರು ಖರೀದಿ ಮಾಡುತ್ತಿಲ್ಲ. ಮೇ 3ರ ನಂತರ ಏನಾಗಬಹುದು ಎಂಬ ಸ್ಪಷ್ಟತೆಯೂ ಇಲ್ಲ. ಆ ಕಾರಣಕ್ಕೆ ಲಾಕ್ ಡೌನ್ ಮುಗಿದ ಮೇಲೆ ಎಲ್ಲವೂ ಕಾರ್ಯಾರಂಭ ಮಾಡಲಿ ಎಂದು ಕಾಯುತ್ತಿವೆ. ಈಗ ಆಗಿರುವ ನಷ್ಟವನ್ನು ತುಂಬಿಕೊಳ್ಳುವುದು ಬಹಳ ಕಷ್ಟ. ಕೊರೊನಾ ಬಾಧಿಸುವ ಮೊದಲಿಗೂ ಇಡೀ ವರ್ಷ ವಾಹನ ವಲಯ ಸಂಕಷ್ಟದಲ್ಲಿತ್ತು. ಈಗ ವಾಹನ ಕ್ಷೇತ್ರದಿಂದ ಆಗಿರುವ ಒಟ್ಟು ನಷ್ಟದ ಪೈಕಿ ಮೂರನೇ ಎರಡು ಭಾಗದಷ್ಟು ಜಿಎಸ್ ಟಿಯಿಂದ ಬರಬೇಕಿದ್ದ ಆದಾಯದಲ್ಲಿನ ಖೋತಾ. ನಂತರ ನೋಂದಣಿ ತೆರಿಗೆ, ಇನ್ಷೂರೆನ್ಸ್ ಮೇಲಿನ ಜಿಎಸ್ ಟಿ ನಷ್ಟ. ಇದರ ಜತೆಗೆ ಪೆಟ್ರೋಲ್- ಡೀಸೆಲ್ ಮೇಲಿನ ಅಬಕಾರಿ ಸುಂಕದ ಆದಾಯವೂ ಹೋಗಿದೆ. ಇನ್ನು ಪ್ರಯಾಣದ ಮೇಲೆ ನಿರ್ಬಂಧ ಹೇರಿರುವುದರಿಂದ ಕೂಡ ರಾಜ್ಯ ಸರ್ಕಾರದ ಆದಾಯಗಳಿಗೆ ಕತ್ರಿ ಬಿದ್ದಿದೆ.
2020ರಲ್ಲಿ ಭಾರತೀಯ ಮಾರ್ಕೆಟ್ ನಲ್ಲಿ 25-30 ಪರ್ಸೆಂಟ್ ಇಳಿಕೆ
ಕೇಂದ್ರ ಸರ್ಕಾರಕ್ಕೆ ಜಿಎಸ್ ಟಿಯ ಒಟ್ಟು ಆದಾಯದಲ್ಲಿ ಶೇಕಡಾ 15ರಷ್ಟು ವಾಹನ ವಲಯದಿಂದಲೇ ಬರುತ್ತಿತ್ತು. ಹೊಸ ವಾಹನಗಳ ನೋಂದಣಿಯಿಂದ ರಾಜ್ಯಗಳಿಗೆ ಒಂದು ವರ್ಷಕ್ಕೆ ತೆರಿಗೆ ಸಂಗ್ರಹ 5ರಿಂದ 7 ಪರ್ಸೆಂಟ್ ಆಗುತ್ತಿತ್ತು. ಒಂದೊಂದು ವಾರ ಲಾಕ್ ಡೌನ್ ವಿಸ್ತರಣೆ ಆಗುತ್ತಾ ಸಾಗಿದಂತೆಯೂ ಚೇತರಿಕೆ ಮತ್ತೂ ಕಷ್ಟವಾಗುತ್ತದೆ. ಅದೇ ರೀತಿ ಏಪ್ರಿಲ್- ಮೇ- ಜೂನ್ ತ್ರೈ ಮಾಸಿಕದ ಕಳೆದ ವರ್ಷದ ಫಲಿತಾಂಶಕ್ಕಿಂತ ಅರ್ಧಕ್ಕಿಂತ ಕಡಿಮೆ ಆಗುತ್ತದೆ. 2020ನೇ ಇಸವಿಯಲ್ಲಿ ಭಾರತೀಯ ಮಾರ್ಕೆಟ್ ನಲ್ಲಿ 25-30 ಪರ್ಸೆಂಟ್ ಇಳಿಕೆ ಆಗಬಹುದು ಎಂಬ ನಿರೀಕ್ಷೆ ಇದೆ. ಈಗ ಜಾಗತಿಕ ಮಟ್ಟದಲ್ಲಿ ಐದನೇ ಸ್ಥಾನದಲ್ಲಿ ಇರುವ ಭಾರತವು ಆರು ಅಥವಾ ಏಳನೇ ಸ್ಥಾನಕ್ಕೆ ಕುಸಿಯಬಹುದು ಎಂದು ಕೂಡ ಹೇಳಲಾಗುತ್ತಿದೆ. 2010ನೇ ಇಸವಿಯಲ್ಲಿ ಕಾರು ಮಾರಾಟ ಪ್ರಮಾಣ ಯಾವ ಮಟ್ಟಿಗೆ ಇತ್ತು, ಅಲ್ಲಿಗೆ ಬಂದು ನಿಂತುಬಿಡಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಉದ್ಯೋಗ- ವೇತನ ಕಡಿತ ಅನಿವಾರ್ಯ
ಯಾವಾಗ ನಗದು ಹರಿವು ಕಡಿಮೆ ಆಗುತ್ತದೋ ಆಗ ಉದ್ಯೋಗ- ವೇತನ ಕಡಿತ ಅನಿವಾರ್ಯ ಆಗಲಿದೆ ಎಂದು ಆ ವಲಯದಲ್ಲಿ ಇರುವವರು ಹೇಳುತ್ತಾರೆ. "ಈಗಿನ ಲಾಕ್ ಡೌನ್ ನಿಂದ ಆಚೆಗೆ ತರುವುದಕ್ಕೆ ಸರ್ಕಾರದ ಮುಂದೆ ಸಂಕೀರ್ಣವಾದ ಸವಾಲಿದೆ. 49 ದಿನಗಳ ಲಾಕ್ ಡೌನ್ ಸಾಕು ಎಂಬ ಅಭಿಪ್ರಾಯ ನಿಜವಾದರೆ, ಒಟ್ಟಿಗೆ ಲಾಕ್ ಡೌನ್ ತೆರವು ಮಾಡಬೇಕು" ಎಂದು ಉದ್ಯಮಿ ಆನಂದ್ ಮಹೀಂದ್ರಾ ಹೇಳಿದ್ದಾರೆ. ದೇಶದ ವಿವಿಧ ಭಾಗದಲ್ಲಿ ಒಂದಾದ ಮೇಲೆ ಒಂದು ಕಡೆ ಆರಂಭ ಮಾಡಿದರೆ ಚೇತರಿಕೆ ಬಹಳ ಕಷ್ಟವಾಗುತ್ತದೆ. ಉತ್ಪಾದನಾ ವಲಯದಲ್ಲಿ ಒಂದು ಕಾರ್ಖಾನೆ ಮುಚ್ಚಿದ್ದರೂ ಅಂತಿಮವಾಗಿ ಅಸೆಂಬಲ್ ಮಾಡುವ ಹೊತ್ತಿಗೆ ಕೆಲಸ ನಿಂತುಹೋಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಮಾರುತಿ ಸುಜುಕಿ, ಹೀರೋ ಮೊಟೋಕಾರ್ಪ್, ಹುಂಡೈ ಮೊಟಾರ್ಸ್ ಇಂಡಿಯಾ ಇತರ ಕಂಪೆನಿಗಳು ಉತ್ಪಾದನೆ ಆರಂಭಿಸಲು ಅನುಮತಿ ಸಿಕ್ಕಿದೆ. ಆದರೆ ಸಾಗಾಟದ ಜತೆಗೆ ಬಿಡಿ ಭಾಗಗಳ ತಯಾರಿಕೆ ಘಟಕಗಳೂ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂಬ ಖಾತ್ರಿ ಬೇಕು ಎಂದು ಕಂಪೆನಿಗಳು ತಿಳಿಸಿವೆ.
ದಿನಕ್ಕೆ 2300 ಕೋಟಿ ರುಪಾಯಿ ನಷ್ಟ
ಆಟೋಮೊಬೈಲ್ ಕಂಪೆನಿಗಳನ್ನು ವಿಶೇಷ ವಲಯ ಎಂದು ನೋಡಬೇಕು. ಪೂರೈಕೆ ಜಾಲವು ಇಲ್ಲಿ ಬಹಳ ಸಂಕೀರ್ಣ ಹಾಗೂ ಒಂದರ ಮೇಲೆ ಮತ್ತೊಂದು ಅವಲಂಬಿತವಾಗಿದೆ. ಈ ವಲಯವೊಂದರಿಂದ ಉದ್ಯೋಗ, ವೇತನ ಸೇರಿದಂತೆ ಒಟ್ಟಾರೆ ಆರ್ಥಿಕತೆ ಮೇಲೆ ಪರಿಣಾಮ ಆಗಿದೆ. ಈಗಲೂ ಎಷ್ಟೋ ಉತ್ಪಾದನಾ ಘಟಕಗಳು ರೆಡ್ ಜೋನ್ ನಲ್ಲೇ ಇವೆ. ಅಗತ್ಯ ಸುರಕ್ಷತಾ ಕ್ರಮಗಳು ತೆಗೆದುಕೊಂಡು, ಪ್ರತಿಯೊಬ್ಬರ ಸುರಕ್ಷೆಗೆ ಆದ್ಯತೆ ನೀಡಿದ ಮೇಲೆ ಕಾರ್ಯ ನಿರ್ವಹಣೆಗೆ ಅವಕಾಶ ನೀಡಬೇಕು ಎಂಬುದು ಸರ್ಕಾರಕ್ಕೆ ನಮ್ಮ ಮನವಿ ಎಂದು ಉತ್ಪಾದಕರ ಒಕ್ಕೂಟದ ಮನವಿ ಆಗಿದೆ. ಕೊರೊನಾ ಲಾಕ್ ಡೌನ್ ಹಾಗೂ ಆ ಕಾರಣಕ್ಕೆ ಫ್ಯಾಕ್ಟರಿ ಮುಚ್ಚಿರುವುದರಿಂದ ದಿನಕ್ಕೆ 2300 ಕೋಟಿ ರುಪಾಯಿ ನಷ್ಟವಾಗುತ್ತಿದೆ ಎಂದು ಅಂದಾಜು ಮಾಡಲಾಗಿದೆ.


Click it and Unblock the Notifications