ಲಾಕ್ ಡೌನ್ ಅವಧಿ ಮೇ 3ನೇ ತಾರೀಕಿನ ತನಕ ವಿಸ್ತರಣೆ ಮಾಡಲಾಗಿದೆ. ಆದರೆ ಏಪ್ರಿಲ್ 20ರಿಂದ ಇ ಕಾಮರ್ಸ್ ಪ್ಲಾಟ್ ಫಾರ್ಮ್ ಗಳಾದ ಅಮೆಜಾನ್, ಫ್ಲಿಪ್ ಕಾರ್ಟ್ ಮತ್ತು ಸ್ನ್ಯಾಪ್ ಡೀಲ್ ಗಳಲ್ಲಿ ಮೊಬೈಲ್ ಫೋನ್, ಟೀವಿ, ರೆಫ್ರಿಜರೇಟರ್, ಲ್ಯಾಪ್ ಟಾಪ್ ಹಾಗೂ ಸ್ಟೇಷನರಿ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಲಾಕ್ ಡೌನ್ ಅವಧಿಯನ್ನು ಮೇ 3ರ ತನಕ ವಿಸ್ತರಣೆ ಮಾಡಿದ ನಂತರ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳನ್ನು ನೀಡಿದ್ದಾರೆ. ಅದಾದ ಒಂದು ದಿನಕ್ಕೆ ಗೃಹ ಸಚಿವಾಲಯದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಎಲೆಕ್ಟ್ರಾನಿಕ್ ವಸ್ತುಗಳಾದ ಮೊಬೈಲ್ ಫೋನ್ ಗಳು, ಟೀವಿ, ಲ್ಯಾಪ್ ಟಾಪ್ ಏಪ್ರಿಲ್ 20ರಿಂದ ಇ ಕಾಮರ್ಸ್ ಪೋರ್ಟಲ್ ಗಳಲ್ಲಿ ಖರೀದಿಗೆ ದೊರೆಯುತ್ತವೆ.
ಆದರೆ, ಇ ಕಾಮರ್ಸ್ ಡೆಲಿವರಿ ವ್ಯಾನ್ ಗಳು ಸಂಚರಿಸುವುದಕ್ಕೆ ಅಧಿಕಾರಿಗಳ ಅನುಮತಿ ಬೇಕಾಗುತ್ತದೆ. ಬುಧವಾರ ನೀಡಿದ ಮಾರ್ಗದರ್ಶಿ ಸೂತ್ರದ ಪ್ರಕಾರ, ವಾಣಿಜ್ಯ ಹಾಗೂ ಖಾಸಗಿ ಸಂಸ್ಥೆಗಳು ಲಾಕ್ ಡೌನ್ ವಿಸ್ತರಣೆ ವೇಳೆ ಕಾರ್ಯ ನಿರ್ವಹಿಸುವುದಕ್ಕೆ ಅನುಮತಿ ನೀಡಲಾಗಿದೆ. ಇನ್ನು ಬುಧವಾರದ ಆದೇಶದಲ್ಲಿ ತುರ್ತು ಹಾಗೂ ತುರ್ತು ಅಲ್ಲದ ವಸ್ತುಗಳು ಯಾವುವು ಎಂಬ ವರ್ಗೀಕರಣ ಮಾಡಿಲ್ಲ.

ಟ್ರಕ್ ರಿಪೇರಿ, ಹೈವೇಗಳಲ್ಲಿ ಡಾಬಾಗಳನ್ನು ನಿರ್ದಿಷ್ಟ ಕನಿಷ್ಠ ಅಂತರದಲ್ಲಿ ಆರಂಭಿಸಲು ಆಯಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅವಕಾಶ ಮಾಡಿಕೊಟ್ಟಿವೆ.


Click it and Unblock the Notifications