ನವದೆಹಲಿ, ನ. 2: ಭಾರತದಲ್ಲಿ ಹಣದುಬ್ಬರ ಬಹಳಷ್ಟು ಕಾಟ ನೀಡುತ್ತಿದೆ. ಸತತ ಮೂರು ತ್ರೈಮಾಸಿಕ ಅವಧಿಯಲ್ಲಿ ತಾಳಿಕೆಯ ಮಟ್ಟವಾದ ಶೇ. 6ಕ್ಕಿಂತ ಹೆಚ್ಚೇ ಇದೆ. ಹಣದುಬ್ಬರ ಇಳಿಸಲು ಯಾಕೆ ವೈಫಲ್ಯವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಆರ್‌ಬಿಐ ವಿವರಣೆ ನೀಡಬೇಕಿದೆ. ಇದರ ಮಧ್ಯೆ ಇಂದು ಬುಧವಾರ ಬ್ಯಾಂಕರ್‌ಗಳ ವಾರ್ಷಿಕ ಸಮಾವೇಶ ನಡೆಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಹಣದುಬ್ಬರ, ರೂಪಾಯಿ ಮೌಲ್ಯ, ಬೆಲೆ ಏರಿಕೆ ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡಿದರು.
ಹಣದುಬ್ಬರ ನಿಯಂತ್ರಣಕ್ಕೆ ವಿಫಲವಾಗಿದ್ದೇಕೆ ಎಂದು ಕಾರಣಗಳನ್ನು ನೀಡಿ ಆರ್‌ಬಿಐ ಕೇಂದ್ರಕ್ಕೆ ಬರೆಯುವ ಪತ್ರವನ್ನು ಬಹಿರಂಗಪಡಿಸದಿರಲು ನಿರ್ಧರಿಸಲಾಗಿದೆ. ಈ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಆರ್‌ಬಿಐ ಗವರ್ನರ್, ಸರ್ಕಾರಕ್ಕೆ ಬರೆಯುವ ಪತ್ರವನ್ನು ಬಿಡುಗಡೆ ಮಾಡದೇ ಇದ್ದರೆ ಪಾರದರ್ಶಕತೆಗೆ ಧಕ್ಕೆಯಾಗುತ್ತದೆ ಎನ್ನಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಭಾರತದಲ್ಲಿ ಹಣದುಬ್ಬರ ಶೇ. 4ರಷ್ಟು ಇರಬೇಕು ಎಂಬುದು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಮಾಡಿರುವ ಗುರಿ. ಶೇ. 2ರ ಆಸುಪಾಸು ತಾಳಿಕೆಯ ಮಟ್ಟ ಎಂದು ನಿಶ್ಚಯಿಸಲಾಗಿತ್ತು. ಅಂದರೆ ಹಣದುಬ್ಬರ ಶೇ. 2-6ರ ಶ್ರೇಣಿಯಲ್ಲಿ ಇರಬೇಕು ಎಂಬುದು ಗುರಿಯಾಗಿತ್ತು. ಆದರೆ, ಸತತ ಮೂರು ತ್ರೈಮಾಸಿಕದಲ್ಲಿ ಈ ಗುರಿ ತಲುಪಲು ಸಾಧ್ಯವಾಗಿಲ್ಲ. ಸದ್ಯ ಹಣದುಬ್ಬರ ಶೇ. 7.41 ಇದೆ.
ಆರ್ಥಿಕತೆ ಅಧಃಪತನವಾಗುತ್ತಿತ್ತು
ಹಣದುಬ್ಬರ ದರ ತಾಳಿಕೆಯ ಮಟ್ಟ ಮೀರಿದಾಕ್ಷಣವೇ ಯಾಕೆ ಬಡ್ಡಿ ದರ ಹೆಚ್ಚಿಸಲಿಲ್ಲ. ಬಹಳ ತಡವಾಗಿ ಬಡ್ಡಿ ದರ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಎಂಬಿತ್ಯಾದಿ ಪ್ರಶ್ನೆಗಳು ಆರ್‌ಬಿಐ ಮುಂದಿವೆ. ಆದರೆ, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಪ್ರಶ್ನೆಗಳಿಗೆ ಉತ್ತರ ನೀಡಿದ್ದು, ಒಂದು ವೇಳೆ ಆರ್‌ಬಿಐ ಬಹಳ ಮುಂಚಿತವಾಗಿಯೇ ಬಡ್ಡಿ ಏರಿಕೆ ಮಾಡಿದ್ದರೆ ಆರ್ಥಿಕತೆಗೆ ಕಷ್ಟವಾಗುತ್ತಿತ್ತು ಎಂದು ಸಮರ್ಥಿಸಿಕೊಂಡರು.
"ಹಣದುಬ್ಬರ ಹೆಚ್ಚಾದಾಗ ಬಡ್ಡಿ ದರ ಹೆಚ್ಚಿಸದೇ ಆರ್ಥಿಕತೆಗೆ ಬಲ ಕೊಡಲು ಆರ್‌ಬಿಐ ನಿರ್ಧರಿಸಿತು. ಬಡ್ಡಿ ದರ ಕಡಿಮೆ ಇರಿಸುವ ಮೂಲಕ ಆರ್ಥಿಕತೆ ಪೂರ್ಣವಾಗಿ ಕುಸಿಯುವುದನ್ನು ತಡೆದೆವು" ಎಂದರು.
ಅರ್ಜುನನ ಗಮನ
ಹಣದುಬ್ಬರ ಎತ್ತ ಸಾಗುತ್ತಿದೆ ಎಂದು ಗಮನಿಸುತ್ತಿದ್ದೇವೆ. ಹಣದುಬ್ಬರದ ಮೇಲೆ ಅರ್ಜುನನ ಕಣ್ಣಿಟ್ಟೇ ಇರುತ್ತೇವೆ ಎಂದು ಆರ್‌ಬಿಐ ಗವರ್ನರ್ ಹೇಳಿದರು.
"ಭಾರತದ ಆರ್ಥಿಕತೆ ಬಹಳ ಸ್ಥಿರ ರೀತಿಯಲ್ಲಿ ಬೆಳೆಯುತ್ತಿದೆ. ಐಎಂಎಫ್ ಪ್ರಕಾರ ಅತಿ ವೇಗವಾಗಿ ಪ್ರಗತಿ ಸಾಧಿಸುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಿರಲಿದೆ. ಹಣದುಬ್ಬರದ ಟ್ರೆಂಡ್ ಹೇಗಿದೆ ಎಂದು ನಿರಂತರವಾಗಿ ಗಮನಿಸುತ್ತಿದ್ದೇವೆ. ಅದರತ್ತ ಅರ್ಜುನನ ಕಣ್ಣಿಟ್ಟಿರುತ್ತೇವೆ" ಎಂದು ಅವರು ಎಪ್‌ಐಬಿಎಸಿ ಕಾನ್ಫೆರೆನ್ಸ್‌ನಲ್ಲಿ ತಿಳಿಸಿದರು.
ಆರ್‌ಬಿಐ ಗವರ್ನರ್ ಅವರು ಇಲ್ಲಿ ಮಹಾಭಾರತದ ಅರ್ಜುನನ ಏಕಾಗ್ರಚಿತ್ತತೆಯನ್ನು ಉಲ್ಲೇಖಿಸಿದ್ದಾರೆ.
ಹಣದುಬ್ಬರ ತಹಬದಿಗೆ ಬರುವ ವಿಶ್ವಾಸ
ಇದೇ ವೇಳೆ ಶಕ್ತಿಕಾಂತ ದಾಸ್ ಅವರು ಹಣದುಬ್ಬರ ಏರಿಕೆ ನಿಯಂತ್ರಣಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಣದುಬ್ಬರ ನಿಯಂತ್ರಿಸಲು ಆರ್‌ಬಿಐ ಕಳೆದ ಮೂರು ಬಾರಿ ಸತತವಾಗಿ ಬಡ್ಡಿ ದರ ಏರಿಕೆ ಮಾಡಿದೆ. ಮೇ ತಿಂಗಳಿನಿಂದೀಚೆ 190 ಬೇಸಿಸ್ ಪಾಯಿಂಟ್‌ಗಳಷ್ಟು ದರ ಏರಿಕೆ ಆಗಿದೆ. ಮೇ ತಿಂಗಳಲ್ಲಿ ಶೇ. 4ರಷ್ಟಿದ್ದ ರೆಪೋ ದರ ಈಗ ಶೇ. 5.9 ಆಗಿದೆ.
ಅಮೆರಿಕದಲ್ಲಿ ಬಡ್ಡಿ ದರ ಏರಿಕೆ ಆರಂಭಿಸಿದ ಬಳಿಕ ಭಾರತದಲ್ಲಿ ಆರ್‌ಬಿಐ ಬಡ್ಡಿ ದರ ಏರಿಸತೊಡಗಿದ್ದು. ಈಗ ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರ ಏರಿಕೆ ನಿಲ್ಲಿಸುವ ಸಾಧ್ಯತೆ ಇದೆ. ಹೀಗಾಗಿ, ಆರ್‌ಬಿಐನಿಂದ ಈ ಬಾರಿ ಬಡ್ಡಿ ದರ ಯಥಾಸ್ಥಿತಿಯಲ್ಲೇ ಇರುವ ಸಾಧ್ಯತೆ ಇದೆ.
ನವೆಂಬರ್ 3ರಂದು ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ನಡೆಸುತ್ತಿದ್ದು, ಹಣದುಬ್ಬರ ನಿಯಂತ್ರಣ ವೈಫಲ್ಯ ಯಾಕಾಯಿತು ಎಂದು ಸರ್ಕಾರಕ್ಕೆ ಉತ್ತರ ಸಲ್ಲಿಸಲು ಕಾರಣಗಳನ್ನು ಚರ್ಚಿಸಲಿದೆ. ಆದರೆ, ಆರ್‌ಬಿಐ ಸಲ್ಲಿಸಿರುವ ವರದಿಯನ್ನು ಸಾರ್ವತ್ರಿಕಗೊಳಿಸಲಾಗುವುದಿಲ್ಲ.


Click it and Unblock the Notifications