ಟ್ವಿಟ್ಟರ್ ಅನ್ನು ಖರೀದಿ ಮಾಡಿದ ಕೆಲವೇ ತಿಂಗಳುಗಳಲ್ಲಿ ತನ್ನ ವಿಶ್ವದ ಶ್ರೀಮಂತ ವ್ಯಕ್ತಿ ಎಂಬ ಪಟ್ಟವನ್ನು ಕಳೆದುಕೊಂಡಿದ್ದ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಈಗ ಮತ್ತೆ ಆ ಪಟ್ಟಕ್ಕೆ ಏರಿದ್ದಾರೆ. ಹೌದು, ಹಲವಾರು ವಿವಾದಗಳ ಮೂಲಕವೇ ಸುದ್ದಿಯಾಗುತ್ತಾ ಬರುತ್ತಿರುವ ಎಲಾನ್ ಮಸ್ಕ್ ಈಗ ಮತ್ತೆ ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಈ ಹಿಂದೆ ಎಲಾನ್ ಮಸ್ಕ್‌ರನ್ನು ಹಿಂದಿಕ್ಕಿ ವಿಶ್ವದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದ ಎಲ್‌ವಿಎಂಎಚ್ ಸಿಇಒ ಬರ್ನಾರ್ಡ್ ಅರ್ನೌಲ್ಟ್ ಭಾರೀ ನಷ್ಟವನ್ನು ಕಂಡ ಬಳಿಕ ಎಲಾನ್ ಮಸ್ಕ್ ಮೊದಲ ಸ್ಥಾನಕ್ಕೆ ಏರಿದ್ದಾರೆ. ನಿರಂತರವಾಗಿ ಎಲ್‌ವಿಎಂಎಚ್ ಸಂಸ್ಥೆಯ ಷೇರುಗಳು ಇಳಿಕೆ ಕಾಣುತ್ತಿದ್ದು, ಬರ್ನಾರ್ಡ್ ಭಾರೀ ನಷ್ಟವನ್ನು ಅನುಭವಿಸಿದ್ದಾರೆ.

ಡಿಸೆಂಬರ್‌ನಲ್ಲಿ ವಿಶ್ವದ ಶ್ರೀಮಂತ ಪಟ್ಟ ಕಳೆದುಕೊಂಡಿದ್ದ ಮಸ್ಕ್
ಎಲ್‌ವಿಎಂಎಚ್ ಷೇರು ಪ್ಯಾರಿಸ್ ಟ್ರೆಡಿಂಗ್‌ನಲ್ಲಿ ಶೇಕಡ 2.6ರಷ್ಟು ಕುಸಿತ ಕಂಡಿದೆ. ಕಳೆದ ಹಲವಾರು ತಿಂಗಳುಗಳಿಂದ 74 ವರ್ಷದ ಬರ್ನಾರ್ಡ್ ಅರ್ನೌಲ್ಟ್ ಹಾಗೂ 51 ವರ್ಷದ ಎಲಾನ್ ಮಸ್ಕ್ ನಡುವೆ ಆದಾಯದ ಸಮರ ನಡೆಯುತ್ತಿದೆ. ಒಮ್ಮೆ ಬರ್ನಾರ್ಡ್ ಮೇಲಕ್ಕೇರಿದರೆ, ಮತ್ತೊಮ್ಮೆ ಎಲಾನ್ ಮಸ್ಕ್ ಮೇಲಕ್ಕೇರುತ್ತಿದ್ದಾರೆ.
ಕಳೆದ ಬಾರಿ ಡಿಸೆಂಬರ್ ತಿಂಗಳಿನಲ್ಲಿ ಬರ್ನಾರ್ಡ್ ಅರ್ನೌಲ್ಟ್, ಎಲಾನ್ ಮಸ್ಕ್‌ರನ್ನು ಹಿಂದಿಕ್ಕಿ ವಿಶ್ವದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರು. ಲೂಯಿ ವಿಟಾನ್, ಗಿವೆಂಚಿ ಮತ್ತು ಕೆಂಜೊ ಸೇರಿದಂತೆ ಹಲವಾರು ಬ್ರಾಂಡ್‌ಗಳ ಮೂಲ ಕಂಪನಿ ಆಗಿರುವ ಎಲ್‌ವಿಎಂಎಚ್‌ನ ಸಿಇಒ ಮತ್ತು ಚೇರ್‌ಮನ್ ಬರ್ನಾರ್ಡ್ ಅರ್ನೌಲ್ಟ್ ಆಗಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ಮತ್ತೆ ಎಲಾನ್ ಮಸ್ಕ್ ವಿಶ್ವದ ಶ್ರೀಮಂತ ವ್ಯಕ್ತಿ ಎನಿಸಿಕೊಂಡು ಮೊದಲ ಸ್ಥಾನಕ್ಕೆ ಏರಿದ್ದರೂ ಆದರೆ ಅದಾದ ಎರಡೇ ದಿನಗಳಲ್ಲಿ ಭಾರೀ ನಷ್ಟವನ್ನು ಕಂಡು ಮತ್ತೆ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಅಷ್ಟು ಮಾತ್ರವಲ್ಲದೆ ಇತಿಹಾಸದಲ್ಲೇ ಮೊದಲ ಬಾರಿಗೆ ಸುಮಾರು 200 ಬಿಲಿಯನ್ ಡಾಲರ್ ಕಳೆದುಕೊಂಡ ಓರ್ವ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.
ನಷ್ಟ ಕಾಣುತ್ತಿರುವ ಬರ್ನಾರ್ಡ್ ಅರ್ನೌಲ್ಟ್ ಕೆಲವು ದಿನಗಳ ಹಿಂದೆ ಒಂದು ದಿನದಲ್ಲೇ ಭಾರೀ ನಷ್ಟವನ್ನು ಕಂಡಿದ್ದಾರೆ. ಸ್ಟಾಕ್ ಮಾರುಕಟ್ಟೆಯಲ್ಲಿ ನಷ್ಟ ಉಂಟಾದ ಬಳಿಕ ಬರ್ನಾರ್ಡ್ ಅರ್ನಾಲ್ಟ್ 11.2 ಬಿಲಿಯನ್ ಡಾಲರ್ ನಷ್ಟವನ್ನು ಕಂಡಿದ್ದಾರೆ. ಎಲ್‌ವಿಎಂಎಚ್ ಸ್ಟಾಕ್ ಸುಮಾರು ಶೇಕಡ 10ರಷ್ಟು ಇಳಿಕೆಯಾದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.
ಈ ನಡುವೆ ಎಲಾನ್ ಮಸ್ಕ್ ಈ ವರ್ಷದಲ್ಲಿ ಒಟ್ಟಾಗಿ ಸುಮಾರು 55.3 ಬಿಲಿಯನ್ ಡಾಲರ್‌ನಷ್ಟು ಗಳಿಸಿದ್ದಾರೆ. ಪ್ರಮುಖವಾಗಿ ಟೆಸ್ಲಾದಿಂದ ಎಲಾನ್ ಮಸ್ಕ್‌ಗೆ ಈ ಆದಾಯ ಲಭ್ಯವಾಗಿದೆ. ಪ್ರಸ್ತುತ ಎಲಾನ್ ಮಸ್ಕ್ ಆದಾಯವು 192.3 ಬಿಲಿಯನ್ ಡಾಲರ್ ಆಗಿದೆ. ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಬರ್ನಾರ್ಡ್ ಅರ್ನಾಲ್ಟ್ ಆದಾಯವು 186.6 ಬಿಲಿಯನ್ ಡಾಲರ್ ಆಗಿದೆ.
ಎಲ್‌ವಿಎಂಎಚ್ ಷೇರು ಈ ವರ್ಷದಲ್ಲಿ ಸುಮಾರು ಶೇಕಡ 19.7ರಷ್ಟು ಏರಿಕೆಯಾಗಿದೆ. ಈ ಸಂದರ್ಭದಲ್ಲೆ ಟೆಸ್ಲಾ ಷೇರು ಸುಮಾರು ಈ ವರ್ಷದಲ್ಲೇ ಸುಮಾರು ಶೇಕಡ 65.6ರಷ್ಟು ಏರಿಕೆಯನ್ನು ಕಂಡಿದೆ. ಆಟೋ ಸೆಕ್ಟರ್‌ಗೂ ಹೊರಗೆ ಎಲಾನ್ ಮಸ್ಕ್ ತನ್ನ ಉದ್ಯಮದ ವಿಸ್ತಾರವನ್ನು ಮಾಡಿಕೊಳ್ಳುತ್ತಾ ಮುಂದುವರಿದಿದ್ದಾರೆ.
ಎಲಾನ್ ಮಸ್ಕ್ ಯಾರು?
ಎಲಾನ್ ರೀವ್ ಮಸ್ಕ್ ಒಬ್ಬ ಖ್ಯಾತ ಇಂಜಿನಿಯರ್, ಕೈಗಾರಿಕಾ ತಜ್ಞ ಹಾಗು ಉದ್ದಿಮೆದಾರರಾಗಿದ್ದಾರೆ. ಖಾಸಗಿ ಬಾಹ್ಯಾಕಾಶ ನೌಕೆ 'ಸ್ಪೇಸ್-ಎಕ್ಸ್'ನ ಸಂಸ್ಥಾಪಕ ಕೂಡಾ ಹೌದು. ಖ್ಯಾತ ಕಾರು ಕಂಪನಿ 'ಟೆಸ್ಲಾ'ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಹೂಡಿಕೆದಾರ ಹಾಗು ವಿನ್ಯಾಸಗಾರ ಎಲಾನ್ ಮಸ್ಕ್, ಕಳೆದ ವರ್ಷವಷ್ಟೇ ಟ್ವಿಟ್ಟರ್ ಅನ್ನು ಖರೀದಿ ಮಾಡಿದ್ದಾರೆ.


Click it and Unblock the Notifications