ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗೆ ಪ್ರತಿ ವರ್ಷವೂ ಬಡ್ಡಿದರವನ್ನು ಇಪಿಎಫ್ ಬೋರ್ಡ್ ನಿಗದಿಪಡಿಸುತ್ತದೆ. ಈ ಹಿಂದೆ ಇಪಿಎಫ್ ಬಡ್ಡಿದರವನ್ನು ಇಳಿಕೆ ಮಾಡಲಾಗಿದ್ದು ಈ ವರ್ಷದಲ್ಲಿ ನಡೆದ ಸಭೆಯ ಬಳಿಕ ಹಣಕಾಸು ವರ್ಷ 2022-23ಕ್ಕೆ ಪಿಎಫ್ ಬಡ್ಡಿದರವನ್ನು ನಿಗದಿಪಡಿಸಲಾಗಿದೆ. ಇಪಿಎಫ್‌ಒ ಬೋರ್ಡ್ ಸಭೆ ಮಾರ್ಚ್ 27 ಮತ್ತು 28ರಂದು ನಡೆದಿದ್ದು ಸಭೆಯಲ್ಲಿ ಬಡ್ಡಿದರವನ್ನು ಪರಿಷ್ಕರಣೆ ಮಾಡಲಾಗಿದೆ.
ಇನ್ನು ಈ ಸಭೆಯಲ್ಲಿ ಅಧಿಕ ವೇತನ ಆಧಾರಿತ ಪಿಂಚಣಿ ವ್ಯವಸ್ಥೆಯ ಬಗ್ಗೆಯೂ ಚರ್ಚೆ ನಡೆಸಲಾಗಿದ್ದು, ಹಣಕಾಸು ವರ್ಷ 2023ರ ಬಡ್ಡಿದರ, ವಾರ್ಷಿಕ ಹಣಕಾಸನ್ನು ಅಂದಾಜು ಮಾಡಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಟ್ರಿಸ್ಟೀಸ್‌ಗಳ (ಟ್ರಸ್ಟಿಗಳ ಕೇಂದ್ರ ಮಂಡಳಿ ಅಥವಾ ಸಿಬಿಟಿ) ಸಭೆಯು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಬೂಪೇಂದರ್ ಯಾದವ್ ಅಧ್ಯಕ್ಷತೆಯಲ್ಲಿ ಮಾರ್ಚ್ 25-26ರಂದು ನಿಗದಿಪಡಿಸಿದ್ದು ಬಳಿಕ ಮುಂದೂಡಿಕೆ ಮಾಡಲಾಗಿದೆ.

ಇನ್ನು ಈ ಸಿಬಿಟಿಯ ನಿರ್ಧಾರವು ಸುಮಾರು ಆರು ಕೋಟಿ ಸಕ್ರಿಯ ಇಪಿಎಫ್‌ಒ ಚಂದಾದಾರರ ಮೇಲೆ ಪ್ರಭಾವ ಉಂಟು ಮಾಡಲಿದೆ. ಹಾಗೆಯೇ ಹಣಕಾಸು ವರ್ಷ 2022ರ 72.73 ಲಕ್ಷ ಪಿಂಚಣಿದಾರರ ಮೇಲೆಯೂ ಪ್ರಭಾವ ಬೀರಲಿದೆ. ಹಣಕಾಸು ವರ್ಷ 2021-22ರಲ್ಲಿ ಇಪಿಎಫ್‌ಒ ಶೇಕಡ 8.1ರಷ್ಟು ಬಡ್ಡಿದರವನ್ನು ಘೋಷಣೆ ಮಾಡಿತ್ತು, ಇದು ಸುಮಾರು ನಾಲ್ಕು ದಶಕಗಳಲ್ಲೇ ಅತೀ ಕಡಿಮೆ ಬಡ್ಡಿದರವಾಗಿದೆ. 1977-78ರಲ್ಲಿ ಇಪಿಎಫ್‌ಒ ಬಡ್ಡಿದರ ಶೇಕಡ 8 ಆಗಿತ್ತು.
ಕೇಂದ್ರ ಸರ್ಕಾರದ ಅನುಮೋದನೆಗೆ ಕಾತರ
ಇನ್ನು ಹಣಕಾಸು ವರ್ಷ 2023ರ ಇಪಿಎಫ್‌ಬಡ್ಡಿದರ ಶೇಕಡ 8ಕ್ಕೆ ಇಳಿಕೆ ಮಾಡುವ ಸಾಧ್ಯತೆಯ ಬಗ್ಗೆ ಈ ಹಿಂದೆ ವರದಿಯಾಗಿದೆ. ಹಣಕಾಸು ವರ್ಷ 2022ಕ್ಕೆ ಕಳೆದ ಮಾರ್ಚ್ ತಿಂಗಳಿನಲ್ಲಿ ಸಿಬಿಟಿ ಶೇಕಡ 8.1ರಷ್ಟು ಬಡ್ಡಿದವನ್ನು ಸೂಚಿಸಿತ್ತು, ಈ ಬಡ್ಡಿದರವನ್ನು ಜೂನ್ 2022ರಲ್ಲಿ ಕೇಂದ್ರ ಹಣಕಾಸು ಸಚಿವಾಲಯವು ಅನುಮೋದನೆ ಮಾಡಿದೆ. ಈಗ ಹಣಕಾಸು ವರ್ಷ 2023ರಲ್ಲಿ ಸಿಬಿಟಿ ನಿಗದಿಪಡಿಸಿದ ಬಡ್ಡಿದರವು ಕೇಂದ್ರ ಸರ್ಕಾರ ಅನುಮೋದಿಸಿದ ಬಳಿಕ ಜಾರಿಗೆ ಬರಲಿದೆ.
ಇಪಿಎಫ್‌ಒ 450 ಕೋಟಿ ಲಾಭದ ಅಂದಾಜಿನಲ್ಲಿ 2022-23ನೇ ಸಾಲಿನ ಬಡ್ಡಿದರವನ್ನು ನಿಗದಿ ಪಡಿಸಿದೆ. ಇನ್ನು 2022 ಹಲವಾರು ಇಪಿಎಫ್ ಚಂದಾದಾರಿಗೆ ಬಡ್ಡಿದರ ಜಮೆಯಾಗುವುದು ವಿಳಂಬವಾಗಿರುವುದನ್ನು ನಾವು ಗಮನಿಸಿಬಹುದು. ಇನ್ನು ಈ ವರ್ಷವೇ ಕೇಂದ್ರ ಬಜೆಟ್‌ನಲ್ಲಿ ಅಧಿಕ ಇಪಿಎಫ್ ಕೊಡುಗೆಗೆ ಲಭ್ಯವಾಗುವ ಬಡ್ಡಿದರದ ಮೇಲೆ ತೆರಿಗೆ ವಿಧಿಸುವ ಪ್ರಸ್ತಾವನ್ನು ಕೂಡಾ ಮಾಡಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನೆಗಳ ಕಾಯ್ದೆ 1952ರ ಅಡಿಯಲ್ಲಿ ಇಪಿಎಫ್ ಉದ್ಯೋಗಿಗಳಿಗೆ ಇರುವ ಕಡ್ಡಾಯವಾದ ಉಳಿತಾಯ ಯೋಜನೆಯಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಈ ಪಿಎಫ್ ಖಾತೆಗಳ ನಿರ್ವಹಣೆಯನ್ನು ಮಾಡುತ್ತದೆ. 20 ಅಥವಾ ಅದಕ್ಕಿಂತ ಅಧಿಕ ಉದ್ಯೋಗಿಗಳನ್ನು ಹೊಂದಿರುವ ಎಲ್ಲ ಸಂಸ್ಥೆಗಳು ಇಪಿಎಫ್ ಅಡಿಯಲ್ಲಿ ಬರುತ್ತದೆ. ಉದ್ಯೋಗಿಯು ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಪಿಎಫ್ ಖಾತೆಗೆ ಹೂಡಿಕೆ ಮಾಡಿದರೆ, ಉದ್ಯೋಗ ನೀಡಿದ ಸಂಸ್ಥೆ ಕೂಡಾ ಅಷ್ಟೇ ಮೊತ್ತವನ್ನು ಹೂಡಿಕೆ ಮಾಡುತ್ತದೆ.
ಅದಾನಿ ಸಂಸ್ಥೆಗಳಿಗೆ ಹೂಡಿಕೆ ಮುಂದುವರಿಕೆ
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಅಥವಾ ಇಪಿಎಫ್‌ಒ ಅದಾನಿ ಗ್ರೂಪ್‌ನ ಸಂಸ್ಥೆಗಳಾದ ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಪೋರ್ಟ್ಸ್ ಮೇಲೆ ಹೂಡಿಕೆ ಮಾಡುವುದನ್ನು ಮುಂದುವರಿಸುವ ನಿರ್ಧಾರವನ್ನು ಮಾಡಿದೆ. ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ಹಲವಾರು ವಂಚನೆಯನ್ನು ಮಾಡಿದೆ ಎಂದು ಹಿಂಡನ್‌ಬರ್ಗ್ ಜನವರಿ 24ರಂದು ವರದಿ ಮಾಡಿದೆ. ಇದಾದ ಬಳಿಕ ಅದಾನಿ ಗ್ರೂಪ್‌ನ ಸ್ಟಾಕ್‌ಗಳು ನಿರಂತರವಾಗಿ ಇಳಿಕೆಯಾಗಿದೆ. ಅದರ ಹೊರತಾಗಿಯೂ, ಹೂಡಿಕೆ ಮುಂದುವರಿಸಿಲಿದೆ ಎಂದು ವರದಿಯಾಗಿದೆ.


Click it and Unblock the Notifications