ಈ ವರ್ಷ ಐತಿಹಾಸಿಕ ಪ್ರಮಾಣದ ಆರ್ಥಿಕ ಕುಸಿತ ಸಂಭವಿಸಲಿದೆ ಎಂದು ಬುಧವಾರ ಯುರೋಪಿಯನ್ ಒಕ್ಕೂಟ ತಿಳಿಸಿದೆ. ಕೊರೊನಾ ಪರಿಣಾಮದಿಂದ ಉತ್ಪಾದನೆ 7 ಪರ್ಸೆಂಟ್ ಗಿಂತಲೂ ಹೆಚ್ಚು ಇಳಿಕೆಯಾಗಿದೆ ಎಂದು ಹೇಳುವ ಮೂಲಕ ಇದೇ ಮೊದಲ ಬಾರಿಗೆ ಜಾಗತಿಕ ಪಿಡುಗಿನ ಆರ್ಥಿಕ ಪರಿಣಾಮದ ಬಗ್ಗೆ ತಿಳಿಸಲಾಗಿದೆ.
ಯುರೋಪಿಯನ್ ಒಕ್ಕೂಟದಲ್ಲಿ ಒಟ್ಟು 27 ದೇಶಗಳಿವೆ. 2021ರಲ್ಲಿ 6 ಪರ್ಸೆಂಟ್ ನಷ್ಟು ಬೆಳವಣಿಗೆ ಸಾಧಿಸಬಹುದು ಎಂದಿದ್ದು, ಅದಕ್ಕೂ ಮುನ್ನ ಈ ವರ್ಷ 7.5 ಪರ್ಸೆಂಟ್ ಇಳಿಕೆ ಆಗಲಿದೆ ಎನ್ನಲಾಗಿದೆ. ಒಟ್ಟು 19 ದೇಶಗಳು ಅಲ್ಲಿನ ಕರೆನ್ಸಿಯಾಗಿ ಯುರೋವನ್ನೇ ಚಲಾವಣೆಗೆ ಬಳಸುತ್ತವೆ. ಅವು ಈ ವರ್ಷ 7.75 ದಾಖಲೆಯ ಕುಸಿತ ಕಾಣಬಹುದು. 2021ರಲ್ಲಿ 6.25 ಪರ್ಸೆಂಟ್ ಏರಿಕೆ ದಾಖಲಿಸಬಹುದು ಎಂದು ಆರ್ಥಿಕ ಸ್ಥಿತಿಯನ್ನು ಅಂದಾಜು ಮಾಡಲಾಗಿದೆ.
ಆರ್ಥಿಕ ಮಹಾಕುಸಿತದ ನಂತರ ಈಗಿನಂಥ ಸಮಸ್ಯೆಯನ್ನು ಯುರೋಪ್ ಎಂದೂ ಎದುರಿಸಿರಲಿಲ್ಲ ಎಂದು ಯುರೋಪಿಯನ್ ಒಕ್ಕೂಟದ ಆರ್ಥಿಕತೆ ಕಮಿಷನರ್ ಪಾಲೋ ಜೆಂಟಿಲೊನಿ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಂದ ಹಾಗೆ ಯುರೋಪ್ ನಲ್ಲಿ 11 ಲಕ್ಷ ಮಂದಿಗೆ ಕೊರೊನಾ ಹಬ್ಬಿದ್ದು, 1,37,000 ಮಂದಿ ಸಾವನ್ನಪ್ಪಿದ್ದಾರೆ.

ಕೊರೊನಾದಿಂದ ಗ್ರಾಹಕರ ಖರ್ಚಿನ ಸ್ವಭಾವ, ಕೈಗಾರಿಕೆ ಉತ್ಪಾದನೆ, ಹೂಡಿಕೆ, ವ್ಯಾಪಾರ, ಬಂಡವಾಳದ ಹರಿವು, ಸಾಗಾಟ- ಪೂರೈಕೆ ಜಾಲ ಹಾಗೂ ಉದ್ಯೋಗದ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ. 2019ರಲ್ಲಿ 6.7 ಪರ್ಸೆಂಟ್ ನಷ್ಟಿದ್ದ ನಿರುದ್ಯೋಗ ಪ್ರಮಾಣ 2020ರಲ್ಲಿ 9 ಪರ್ಸೆಂಟ್ ಗೆ ಏರಿಕೆ ಆಗುವ ಅಂದಾಜಿದೆ. ಇನ್ನು 2021ರ ಹೊತ್ತಿಗೆ 8 ಪರ್ಸೆಂಟ್ ತಲುಪಬಹುದು ಎನ್ನಲಾಗಿದೆ.


Click it and Unblock the Notifications