ರಿಲಯನ್ಸ್ ಜಿಯೋದಲ್ಲಿ 9.9 ಪರ್ಸೆಂಟ್ ಪಾಲನ್ನು ಫೇಸ್ ಬುಕ್ ಖರೀದಿ ಮಾಡುವ ಬಗ್ಗೆ ಸೋಮವಾರ (ಏಪ್ರಿಲ್ 22, 2020) ಘೋಷಣೆ ಮಾಡಿದಾಗಿನಿಂದ ಕಾರ್ಪೊರೇಟ್ ಜಗತ್ತಿನಲ್ಲಿ ನಿರೀಕ್ಷೆಗಳು ಆಕಾಶಕ್ಕೆ ಏರಿದೆ. ಸೋಷಿಯಲ್ ಮೀಡಿಯಾ ದೈತ್ಯ ಕಂಪೆನಿ ಫೇಸ್ ಬುಕ್ ಗೆ ಭಾರತದಲ್ಲಿ ಬಳಕೆದಾರರನ್ನು ಹೆಚ್ಚಿಸಿಕೊಳ್ಳಲು ಈ ವ್ಯವಹಾರದಿಂದ ಅನುಕೂಲ ಆಗಲಿದೆ. ಈ ವ್ಯವಹಾರದ ಪ್ರಮುಖಾಂಶಗಳು ಹೀಗಿವೆ.
* ತಂತ್ರಜ್ಞಾನ ಕಂಪೆನಿಯೊಂದು ಸಂಸ್ಥೆಯೊಂದರಲ್ಲಿನ ಅಲ್ಪ ಪ್ರಮಾಣದ ಪಾಲಿಗೆ ಇಡೀ ವಿಶ್ವದಲ್ಲಿ ಮಾಡಿರುವ ದೊಡ್ಡ ಹೂಡಿಕೆ ಇದು. ಭಾರತದ ತಂತ್ರಜ್ಞಾನ ವಲಯದಲ್ಲಿ ಮಾಡಿರುವ ಅತಿ ದೊಡ್ಡ ವಿದೇಶೀ ನೇರ ಹೂಡಿಕೆ ಇದಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಹೇಳಿದೆ.
* ಈ ಹೂಡಿಕೆ ಮೂಲಕ ಭಾರತದ ಮಾರ್ಕೆಟ್ ಬಂಡವಾಳ ಮೌಲ್ಯದಲ್ಲಿ ಟಾಪ್ 5 ಲಿಸ್ಟೆಡ್ ಕಂಪೆನಿಗಳಲ್ಲಿ ಜಿಯೋ ಒಂದಾಗುತ್ತದೆ. ಜಿಯೋ ತನ್ನ ವಾಣಿಜ್ಯ ಸೇವೆ ಆರಂಭಿಸಿ ಕೇವಲ ಮೂರೂವರೆ ವರ್ಷಗಳಾಗಿದೆ.
* ಎಲ್ಲ ಬಗೆಯ ವ್ಯಾಪಾರಗಳಿಗೆ ಹೊಸ ಅವಕಾಶ ಒದಗಿಸುವುದು ನಮ್ಮ ಉದ್ದೇಶ. ಅದರಲ್ಲೂ ಭಾರತದಾದ್ಯಂತ ಇರುವ ಆರು ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಸಣ್ಣ ವರ್ತಕರಿಗೆ ಅವಕಾಶ ಒದಗಿಸುವುದು ಉದ್ದೇಶ ಎಂದು ಫೇಸ್ ಬುಕ್ ಹೇಳಿದೆ.

* ಈ ಹೂಡಿಕೆ ಮೂಲಕ ಜಿಯೋ- ರಿಲಯನ್ಸ್ ರೀಟೇಲ್ ಹಾಗೂ ಫೇಸ್ ಬುಕ್ ನ ವಾಟ್ಸಾಪ್ ಸರ್ವೀಸ್ ಕೂಡ ವಾಣಿಜ್ಯ ಒಪ್ಪಂದಕ್ಕೆ ಬರುತ್ತವೆ. ಆ ಮೂಲಕ ಜಿಯೋಮಾರ್ಟ್ ನಲ್ಲಿ ವಾಟ್ಸಾಪ್ ಬಳಸಿಕೊಂಡು ರಿಲಯನ್ಸ್ ರೀಟೇಲ್ ವಾಣಿಜ್ಯ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಬಹುದು.
* ಈ ವ್ಯವಹಾರವು ಫೇಸ್ ಬುಕ್ ಹಾಗೂ ಜಿಯೋ ಎರಡಕ್ಕೂ ಲಾಭದಾಯಕವೇ. ಈ ಮೂಲಕ ಭಾರತದಲ್ಲಿ ಫೇಸ್ ಬುಕ್ ನ ಹೆಜ್ಜೆ ಮತ್ತಷ್ಟು ಆಳಕ್ಕೆ ಇಳಿಯುತ್ತದೆ. ನೆನಪಿರಲಿ, ಚೀನಾ ಬಿಟ್ಟರೆ ಅತಿ ದೊಡ್ಡ ಇಂಟರ್ ನೆಟ್ ಮಾರ್ಕೆಟ್ ಇರುವುದು ಭಾರತದಲ್ಲಿ.
* ಫೇಸ್ ಬುಕ್ ನ ಹೂಡಿಕೆ ಮೂಲಕ ರಿಲಯನ್ಸ್ ನ ಸಾಲದ ಹೊರೆ ಇಳಿಯುತ್ತದೆ. ಜಿಯೋ ಸೇರಿದಂತೆ ಮತ್ತಿತರ ವ್ಯವಹಾರ ವಿಸ್ತರಣೆಗೆ ಮಾಡಿರುವ ಹೂಡಿಕೆ ಭಾರ ತಗ್ಗುತ್ತದೆ.


Click it and Unblock the Notifications