ಉದ್ಘಾಟನೆ ಆದಾಗಿಲಿಂದಲೂ ಒಂದಲ್ಲಾ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುವ ಬೆಂಗಳೂರು - ಮೈಸೂರು ದಶಪಥ ರಸ್ತೆ ಈಗ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ, ಹೆದ್ದಾರಿಗಾಗಿ ಭೂಮಿಯನ್ನು ನೀಡಿದ ರೈತರ ಎಚ್ಚರಿಕೆಯಿಂದಾಗಿ..
ಬೆಂಗಳೂರು - ಮೈಸೂರು ನಡುವಿನ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡಿರುವ ನಮ್ಮ ಭೂಮಿಗಳಿಗೆ ಇನ್ನೊಂದು ವಾರದಲ್ಲಿ ಪರಿಹಾರ ನೀಡದಿದ್ದರೆ ನಮ್ಮ ಭೂಮಿಯನ್ನು ನಾವು ವಾಪಸ್ ನಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳುತ್ತೇವೆ ಎಂದು ಹೆದ್ದಾರಿ ನಿರ್ಮಾಣಕ್ಕೆ ಭೂಮಿ ನೀಡಿರುವ ರೈತರು ಎಚ್ಚರಿಕೆ ನೀಡಿದ್ದಾರೆ. ಆ ಮೂಲಕ, ಹೆದ್ದಾರಿ ಪ್ರಾಧಿಕಾರ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ.

ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೇರಿದಂತೆ ಹಲವರ ಮನವಿಯ ಮೇರೆಗೆ ಹಾಗೂ ಈ ಭಾಗದ ಸಾರ್ವಜನಿಕರ ಅನೂಕೂಲದ ಉದ್ದೇಶದಿಂದ ತಮ್ಮ ಭೂಮಿಯಲ್ಲಿ ಅಂಡರ್ಪಾಸ್ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ನಡೆಯಲು ಅವಕಾಶ ನೀಡಿದ್ದೆವು.
ಆದರೆ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದರು ಪರಿಹಾರ ನೀಡಲು ವಿಳಂಬವಾದ ಹಿನ್ನೆಲೆಯಲ್ಲಿ ತಮ್ಮ ಜಮೀನನ್ನು ನಮ್ಮ ಸುಪರ್ದಿಗೆ ಪಡೆಯಲು ನಿರ್ಧರಿಸಿದ್ದೆವು. ನಮ್ಮ ನಿರ್ಧಾರದಿಂದ ಹೆದ್ದಾರಿ ಉದ್ಘಾಟನೆಗೆ ತೊಂದರೆಯಾಗುವುದನ್ನು ಮನಗಂಡ ಪೊಲೀಸ್ ಇಲಾಖೆ ಮಧ್ಯಪ್ರವೇಶ ಮಾಡಿ ಹೆದ್ದಾರಿ ಪ್ರಾಧಿಕಾರಕ್ಕೆ ಪರಿಹಾರದ ಹಣ ನೀಡಲು ಮೂರು ತಿಂಗಳ ಕಾಲಾವಕಾಶ ಕೊಡಿಸಲಾಗಿತ್ತು.
ಆದರೆ, ಈ ಭರವಸೆ ಕೊಟ್ಟು ವರ್ಷ ಸಮೀಪಿಸುತ್ತಿದ್ದರೂ ಇದುವರೆಗೂ ಯಾವುದೇ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ಹಾಗಾಗಿ ನಮ್ಮ ಭೂಮಿಯನ್ನು ವಶಕ್ಕೆ ಪಡೆಯಲು ತಿರ್ಮಾನ ಮಾಡಿದ್ದೇವೆ ಎಂದು ಭೂಮಿ ನೀಡಿದ ರೈತರು ಆಕ್ರೋಶ ಹೊರಹಾಕಿದ್ದಾರೆ.
ಪರಿಹಾರದ ಹಣ ಬಿಡುಗಡೆಗೆ ರೈತರನ್ನು ಅಲೆದಾಡಿಸುತ್ತಿರುವ ಅಧಿಕಾರಿಗಳ ನಡೆಯಿಂದ ಬೇಸತ್ತಿರುವ ಭೂಮಿ ಕಳೆದುಕೊಂಡ ರೈತರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಇನ್ನೊಂದು ವಾರದ ಗಡುವು ನೀಡಿದ್ದಾರೆ.
ಅಷ್ಟರಲ್ಲಿ ನಾವು ಕಳೆದುಕೊಂಡಿರುವ ಭೂಮಿಗೆ ಸೂಕ್ತ ಪರಿಹಾರದ ಹಣ ಬಿಡುಗಡೆಯಾಗದಿದ್ದರೆ, ತಮ್ಮ ತಮ್ಮ ಭೂಮಿಯನ್ನು ಪುನಃ ನಾವುಗಳೇ ಸ್ವಾಧೀನ ಪಡಿಸಿಕೊಳ್ಳುವುದಾಗಿ ಹೆದ್ದಾರಿ ಪ್ರಾಧಿಕಾರಕ್ಕೆ ರೈತರು ಎಚ್ಚರಿಕೆ ನೀಡಿದ್ದಾರೆ. ರೈತರ ಎಚ್ಚರಿಕೆಯಿಂದ ಹೈವೇ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆಯಿಲ್ಲದಿಲ್ಲ.


Click it and Unblock the Notifications