ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಆರು ಸಾವಿರ ಎಕರೆ ಪ್ರದೇಶವನ್ನು ಗುರುತಿಸಿದ್ದು, ಏಪ್ರಿಲ್ ನಲ್ಲಿ ನಡೆಯುವ ಹೂಡಿಕೆದಾರರ ಜಾಗತಿಕ ಸಮಾವೇಶದಲ್ಲಿ ಪಾಲ್ಗೊಳ್ಳುವವರಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಭೂಮಿ ಒದಗಿಸುವ ನಿಟ್ಟಿನಲ್ಲಿ ಈ ಹೆಜ್ಜೆ ಇಡಲಾಗಿದೆ. ಇನ್ನು ಆರು ಸಾವಿರ ಎಕರೆ ಪ್ರದೇಶದ ಪೈಕಿ ಬಹುಪಾಲು ಜಮ್ಮು ಭಾಗದಲ್ಲೇ ಇದ್ದು, ಕಾಶ್ಮೀರ ಕಣಿವೆಯಲ್ಲಿ ಕಡಿಮೆ ಪ್ರದೇಶ ಗುರುತಿಸಲಾಗಿದೆ.
ಜಮ್ಮು ಭಾಗದ ಸಾಂಬಾ, ಕತುವಾದಲ್ಲಿ ಹಾಗೂ ಕಾಶ್ಮೀರದ ಪುಲ್ವಾಮಾ ಮತ್ತು ಅನಂತನಾಗ್ ಜಿಲ್ಲೆಗಳಲ್ಲಿ ಭೂಮಿ ಇದೆ. ಜಮ್ಮು ಮತ್ತು ಕಾಶ್ಮೀರದ ಮೊದಲ ಜಾಗತಿಕ ಹೂಡಿಕೆದಾರರ ಸಮಾವೇಶ ಏಪ್ರಿಲ್ ನಲ್ಲಿ ನಡೆಯಲಿದೆ ಎಂದು ಲೆ. ಗವರ್ನರ್ ಗಿರೀಶ್ ಚಂದ್ರ ಮುರ್ಮು ತಿಳಿಸಿದ್ದಾರೆ.
ಸಮಾವೇಶದ ಪೂರ್ವಭಾವಿಯಾಗಿ ದೆಹಲಿಯಲ್ಲಿ ಮಾತನಾಡಿದ ಅವರು, ಕ್ಷೇತ್ರವಾರು ಸೆಮಿನಾರ್ ಗಳನ್ನು ಆಯೋಜಿಸಲಾಗುವುದು. ಮುಖ್ಯ ಕಾರ್ಯಕ್ರಮ ಶ್ರೀನಗರ್ ನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.

ದೇಶದ ಕೈಗಾರಿಕೆ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ತರಲು ಈಗಾಗಲೇ ಸರ್ಕಾರದಿಂದ ಅಭಿಯಾನ ಶುರುವಾಗಿದೆ. ವಿವಿಧ ರಾಜ್ಯಗಳಲ್ಲಿ ರೋಡ್ ಶೋ, ಸಮಾವೇಶಗಳನ್ನು ಆಯೋಜಿಸಿ, ಜಮ್ಮು- ಕಾಶ್ಮೀರಕ್ಕೆ ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ.
ಶ್ರೀನಗರ್ ಮತ್ತು ಜಮ್ಮು ಎರಡೂ ಕಡೆ ಮೂರು ದಿನಗಳ ಕಾಲ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲೇ ಹೂಡಿಕೆದಾರರ ಸಮಾವೇಶ ಆಯೋಜಿಸಲು ಸರ್ಕಾರ ಯೋಜನೆ ರೂಪಿಸಿತ್ತು. ಆದರೆ ನಂತರ ಮುಂದೂಡಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಳೆದ ಆಗಸ್ಟ್ ನಲ್ಲಿ ಹಿಂಪಡೆದ ನಂತರ ನಡೆಯುತ್ತಿರುವ ಮೊದಲ ಪ್ರಮುಖ ಕೈಗಾರಿಕಾ ಚಟುವಟಿಕೆ ಇದಾಗಿದೆ.
ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ ಹೂಡಿಕೆದಾರರು ಇಲ್ಲಿ ಭೂಮಿ ಖರೀದಿ ಮಾಡುವುದು ಸಾಧ್ಯವಾಗಿದೆ. "ಜಮ್ಮು ಮತ್ತು ಕಾಶ್ಮೀರದ ವಿವಿಧ ಭಾಗದಲ್ಲಿ ಸ್ಥಳ ಗುರುತಿಸಿದ್ದೇವೆ. ಇವೆಲ್ಲ ಸರ್ಕಾರದ ಜಾಗ. ಖಾಸಗಿಯವರಿಂದಲೂ ಮುಂದೆ ಜಾಗ ಪಡೆಯಬಹುದು" ಎಂದು ತಿಳಿಸಲಾಗಿದೆ.
ಈ ಬಾರಿ ನಡೆಯಲಿರುವ ಜಾಗತಿಕ ಸಮಾವೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಪ್ರಮುಖ ವಲಯಗಳ ಬಗ್ಗೆ ಹೆಚ್ಚು ಗಮನ ಹರಿಸುವುದನ್ನು ನಿರೀಕ್ಷೆ ಮಾಡಲಾಗಿದೆ.


Click it and Unblock the Notifications