2020ರ ಹೊಸ ವರ್ಷಕ್ಕೆ ಎಂಟ್ರಿ ಕೊಡುವ ಮುನ್ನ 2019ರಲ್ಲಿ ಅತಿ ಹೆಚ್ಚು ಆದಾಯಗಳಿಸಿದ ಭಾರತದ ಸೆಲೆಬ್ರೆಟಿಗಳ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದೆ. ಪ್ರತಿ ವರ್ಷದ ಕೊನೆಯಲ್ಲಿ ಆಯಾ ವರ್ಷದಲ್ಲಿ ಅತಿ ಹೆಚ್ಚು ಆದಾಯ ಸಂಪಾದಿಸಿದ ಭಾರತದ ಸೆಲೆಬ್ರೆಟಿಗಳ ಪಟ್ಟಿ ಬಿಡುಗಡೆಗೊಳಿಸುತ್ತಾ ಬಂದಿದೆ. ಈ ವರ್ಷ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ.
ಸೆಲೆಬ್ರೆಟಿಗಳ ಒಟ್ಟು ಗಳಿಕೆಯ ಅಂದಾಜು ಮೌಲ್ಯ, ಸಾಮಾಜಿಕ ಜಾಲತಾಣಗಳಲ್ಲಿ ಅವರ ಖ್ಯಾತಿಯ ಲೆಕ್ಕಚಾರ ಹಾಗೂ ಆದಾಯವನ್ನೆಲ್ಲ ತೂಗಿ ಫೋರ್ಬ್ಸ್ ಭಾರತದ ಅಗ್ರ 100 ಸೆಲೆಬ್ರೆಟಿಗಳ ಪಟ್ಟಿ ಮಾಡಿದೆ. ಹೆಚ್ಚು ಆದಾಯ ಗಳಿಸಿದರೂ ಖ್ಯಾತಿಯಲ್ಲಿ ಹಿಂದೆ ಬಿದ್ದ ಪರಿಣಾಮ ಕೆಲ ಸೆಲೆಬ್ರೆಟಿಗಳು ರ್ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದಾರೆ. ಹಾಗಿದ್ದರೆ 2019ರ ಟಾಪ್ ಸೆಲೆಬ್ರೆಟಿಗಳು ಯಾರು ಅವರ ಆದಾಯ ಎಷ್ಟು ಎಂಬುದನ್ನು ತಿಳಿಯಲು ಈ ಕೆಳಗಿನ ವಿವರ ಓದಿ
1. ವಿರಾಟ್ ಕೊಹ್ಲಿ
ಆದಾಯ ಗಳಿಕೆ : 252.72 ಕೋಟಿ
2018 Rank : 02
ಅತಿ ಹೆಚ್ಚು ಆದಾಯಗಳಿಸುವುದರ ಜೊತೆಗೆ 2019ರಲ್ಲಿ ಹೆಚ್ಚು ಖ್ಯಾತಿಗೆ ಒಳಗಾದ ಭಾರತದ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂಬರ್ 1 ಸ್ಥಾನ ಗಿಟ್ಟಿಸಿದ್ದಾರೆ. ವಿರಾಟ್ ಕೊಹ್ಲಿಯ 2019ರ ಆದಾಯಗಳಿಕೆಯು 252.72 ಕೋಟಿ ರುಪಾಯಿ ಆಗಿದೆ. 2018ರಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದ ಕೊಹ್ಲಿ, 2017ರಲ್ಲಿ ಮೂರನೇ ಸ್ಥಾನದಲ್ಲಿದ್ದರು. ಆದರೆ ಇದೀಗ ಮೊದಲ ಬಾರಿಗೆ ಭಾರತದ ನಂಬರ್ 1 ಸೆಲೆಬ್ರೆಟಿಯಾಗಿ ಗುರುತಿಸಿಕೊಂಡಿದ್ದಾರೆ.
ಐಸಿಸಿ ಟೆಸ್ಟ್ ಹಾಗೂ ಏಕದಿನ ರ್ಯಾಂಕಿಂಗ್‌ನಲ್ಲಿ ನಂಬರ್ 1 ಬ್ಯಾಟ್ಸ್‌ಮನ್ ಆಗಿರುವ ಕೊಹ್ಲಿ ಬಿಜಿನೆಸ್‌ನಲ್ಲೂ ಹಿಂದೆ ಬಿದ್ದಿಲ್ಲ. ಊಬರ್, ಆಡಿ, ಎಂಆರ್‌ಎಫ್, ಮಾನ್ಯವರ್, ಟಿಸೋಟ್ ಸೇರಿದಂತೆ ಅನೇಕ ಕಂಪನಿಗಳ ಉತ್ಪನ್ನಗಳ ರಾಯಭಾರಿಯಾಗಿದ್ದಾರೆ. ಜೊತೆಗೆ ಪೂಮಾ ಕಂಪನಿ ಜೊತೆಗೂಡಿ ಒನ್8 ಎಂಬ ತನ್ನದೇ ಬ್ರ್ಯಾಂಡ್ ಶುರುಮಾಡಿದ್ದಾರೆ. ಈ ಮೂಲಕವೇ 100 ಕೋಟಿಗೂ ಹೆಚ್ಚು ಆದಾಯಗಳಿಸಿದ್ದಾರೆ. 2019ರಲ್ಲಿ ಸುಮಾರು 253 ಕೋಟಿ ರುಪಾಯಿ ಆದಾಯಗಳಿಸಿದ್ದಾರೆ ಎಂದು ಅಂದಾಜಿಸಲಾಗಿದೆ.
ಫೋರ್ಬ್ಸ್ ನಿಯತಕಾಲಿಕೆಯು ಕಳೆದ 8 ವರ್ಷಗಳಿಂದ ಭಾರತದ ಅಗ್ರ 100 ಸೆಲೆಬ್ರೆಟಿಗಳ ಪಟ್ಟಿ ಬಿಡುಗಡೆ ಮಾಡುತ್ತಾ ಬಂದಿದೆ. ಇದೇ ಮೊದಲ ಬಾರಿಗೆ ಕ್ರೀಡಾ ತಾರೆಯೊಬ್ಬರು ನಂಬರ್ 1 ಸ್ಥಾನ ಪಡೆದಿದ್ದಾರೆ.
2. ಅಕ್ಷಯ್ ಕುಮಾರ್
ಆದಾಯ ಗಳಿಕೆ : 252.72 ಕೋಟಿ
2018 Rank : 03
ಬಾಲಿವುಡ್ ಖ್ಯಾತ ನಟ ಅಕ್ಷರ್ ಕುಮಾರ್ 2019ರ ಸೆಲೆಬ್ರೆಟಿಗಳ ಲಿಸ್ಟ್‌ನಲ್ಲಿ 2ನೇ ಸ್ಥಾನ ಪಡೆದಿದ್ದಾರೆ. 2018ರಲ್ಲಿ ಮೂರನೇ ಸ್ಥಾನ ಪಡೆದಿದ್ದ ಅಕ್ಷಯ್ ಕುಮಾರ್ ಬಡ್ತಿ ಪಡೆದು 2ನೇ ಸ್ಥಾನಗಿಟ್ಟಿಸಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ಹಲವು ಸಿನಿಮಾಗಳು ಈ ವರ್ಷ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದವು. ಅಕ್ಟೋಬರ್ 25ರಂದು ಬಿಡುಗಡೆಗೊಂಡ ಹೌಸ್‌ಫುಲ್ 4 ಚಿತ್ರವು 2019ರಲ್ಲಿ ಅತಿ ಹೆಚ್ಚು ಹಣಗಳಿಸಿದ 6ನೇ ಚಿತ್ರವಾಗಿದೆ. ವಿಶ್ವದಾದ್ಯಂತ ಈ ಚಿತ್ರವು 278.78 ಕೋಟಿ ರುಪಾಯಿ ಆದಾಯ ಪಡೆದಿದೆ. ಇದಕ್ಕೂ ಮುನ್ನ ಬಿಡುಗಡೆಯಾದ ಕೇಸರಿ, ಮಿಷನ್ ಮಂಗಲ್ ಸಿಸಿಮಾ ಕೂಡ ಭರ್ಜರಿ ಹಿಟ್ ಆಗಿದೆ.
ಅಕ್ಷಯ್ ಕುಮಾರ್ ಸಿನಿಮಾ ಆದಾಯ ಅಷ್ಟೇ ಅಲ್ಲದೆ 20ಕ್ಕೂ ಹೆಚ್ಚು ಬ್ರ್ಯಾಂಡ್‌ಗಳ ರಾಯಭಾರಿಯಾಗಿದ್ದಾರೆ. ಈ ಮೂಲಕವೂ ಕೋಟಿಗಟ್ಟಲೆ ಆದಾಯ ಸಂಪಾದಿಸುತ್ತಿದ್ದಾರೆ.
2019ರಲ್ಲಿ ಫೋಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರೆಟಿಗಳಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಅಕ್ಷರ್ ಕುಮಾರ್ ಆಗಿದ್ದಾರೆ. ಅಗ್ರ 100ರ ಪಟ್ಟಿಯಲ್ಲಿ 33ನೇ ಸ್ಥಾನ ಪಡೆದಿದ್ದರು.
3. ಸಲ್ಮಾನ್ ಖಾನ್
ಆದಾಯ ಗಳಿಕೆ : 229.25 ಕೋಟಿ
2018 Rank : 01
ಕಳೆದ ಮೂರು ವರ್ಷ ನಂಬರ್ 1 ಸ್ಥಾನದಲ್ಲಿ ಕಂಗೊಳಿಸಿದ್ದ ಬಾಲಿವುಡ್ ಸೂಪರ್‌ಸ್ಟಾರ್ ಬ್ಯಾಡ್ ಬಾಯ್ ಖ್ಯಾತಿಯ ಸಲ್ಮಾನ್ ಖಾನ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ವರ್ಷ ಸಲ್ಮಾನ್ ನಟನೆಯ 'ಭಾರತ್' ಸಿನಿಮಾ ರಿಲೀಸ್ ಆಗಿದ್ದು, ಇವರ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡು 200ಕೋಟಿಗೂ ಅಧಿಕ ಗಳಿಸಿದ 6ನೇ ಸಿನಿಮಾ ಆಗಿದೆ. ಬಾಕ್ಸ್ ಆಫೀಸ್‌ನಲ್ಲಿ 325 ಕೋಟಿ ರುಪಾಯಿ ಸಂಪಾದಿಸಿದ ಈ ಸಿನಿಮಾ 2019ರಲ್ಲಿ ಇವರ ನಟನೆಯ ಏಕೈಕ ಸಿನಿಮಾ (ದಬಾಂಗ್ 3 ಸಿನಿಮಾ ಡಿಸೆಂಬರ್ 20ಕ್ಕೆ ರಿಲೀಸ್).
ಅನೇಕ ಬ್ರ್ಯಾಂಡ್‌ಗಳ ರಾಯಭಾರಿ ಆಗಿರುವ ಸಲ್ಮಾನ್ ಖಾನ್ 2019ರ ಆದಾಯ ಗಳಿಕೆ 229.25 ಕೋಟಿ ರುಪಾಯಿ ಆಗಿದೆ.
4. ಅಮಿತಾಭ್ ಬಚ್ಚನ್
ಆದಾಯ ಗಳಿಕೆ : 239.25 ಕೋಟಿ
2018 Rank : 07
ತನ್ನ 77ನೇ ವಯಸ್ಸಿನಲ್ಲಿ ಬಾಲಿವುಡ್ ಸೂಪರ್ ಸ್ಟಾರ್, ಬಿಗ್ ಬಿ ಅಮಿತಾಭ್ ಬಚ್ಚನ್ 2019ರ ಫೊರ್ಬ್ಸ್ ಸೆಲೆಬ್ರೆಟಿ ಲಿಸ್ಟ್‌ನಲ್ಲಿ 4ನೇ ಸ್ಥಾನ ಪಡೆದಿದ್ದಾರೆ. 2017ರಲ್ಲಿ 20ನೇ ಸ್ಥಾನ ಪಡೆದಿದ್ದ ಅಮಿತಾಭ್ ಬಚ್ಚನ್ 2018ರಲ್ಲಿ 7ನೇ ಸ್ಥಾನ ಪಡೆದಿದ್ದರು ಇದೀಗ 3 ಸ್ಥಾನ ಬಡ್ತಿ ಪಡೆದು 4ನೇ ಸ್ಥಾನ ಪಡೆದಿದ್ದಾರೆ.
ಬಾಲಿವುಡ್ ಆ್ಯಂಗ್ರಿ ಯಂಗ್ ಮ್ಯಾನ್ ಎಂದೇ ಕರೆಸಿಕೊಳ್ಳುವ ಅಮಿತಾಭ್ ಬಚ್ಚನ್ ಕೌನ್ ಬನೇಗಾ ಕರೋಡ್‌ಪತಿ ಸೀನಸ್ 11 ನಡೆಸಿಕೊಟ್ಟಿದ್ದಾರೆ. ಅಲ್ಲದೆ ಅನೇಕ ಬ್ರ್ಯಾಂಡ್‌ಗಳ ರಾಯಭಾರಿ ಆಗಿದ್ದಾರೆ. ಇವರ 2019ರ ಆದಾಯ ಗಳಿಕೆ 239.25 ಕೋಟಿ ರುಪಾಯಿ
5. ಎಂ.ಎಸ್. ಧೋನಿ
ಆದಾಯ ಗಳಿಕೆ : 135.93 ಕೋಟಿ
2018 Rank : 05
ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ 2019ರ ಫೋರ್ಬ್ಸ ಸೆಲೆಬ್ರೆಟಿ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. 2018ರಲ್ಲೂ ಧೋನಿ 5ನೇ ಸ್ಥಾನ ಪಡೆದಿದ್ದರು. ಕಳೆದ ವರ್ಷ 101.77 ಕೋಟಿ ರುಪಾಯಿ ಆದಾಯ ಗಳಿಸಿದ್ದ ಮಾಹಿ ಈ ವರ್ಷ ಆದಾಯ ಗಳಿಕೆ ಹೆಚ್ಚಿಸಿಕೊಂಡಿದ್ದು, 135.93 ಕೋಟಿ ರುಪಾಯಿಗೆ ತಲುಪಿದೆ. ಕಳೆದ 6 ತಿಂಗಳಿನಿಂದ ಕ್ರಿಕೆಟ್‌ನಿಂದ ಹೊರಗುಳಿದಿದ್ದರು ಧೋನಿಯ ಖ್ಯಾತಿ ಮಾತ್ರ ಕಮ್ಮಿ ಆಗಿಲ್ಲ.
6. ಶಾರೂಖ್ ಖಾನ್
ಆದಾಯ ಗಳಿಕೆ : 124.38 ಕೋಟಿ
2018 Rank : 13
ಬಾಲಿವುಡ್ ಬಾದ್‌ಷಾ ಶಾರೂಖ್ ಖಾನ್ ಫೋರ್ಬ್ಸ್ ಸೆಲೆಬ್ರೆಟಿ ಪಟ್ಟಯಲ್ಲಿ ಬಡ್ತಿ ಪಡೆದಿದ್ದಾರೆ. 2018ರಲ್ಲಿ 13ನೇ ಸ್ಥಾನದಲ್ಲಿ ಶಾರೂಖ್ ಖಾನ್ 2019ರಲ್ಲಿ 6ನೇ ಸ್ಥಾನ ಗಿಟ್ಟಿಸಿದ್ದಾರೆ. ಇವರ ಆದಾಯ 124.38 ಕೋಟಿ ರುಪಾಯಿ.
2019ರಲ್ಲಿ ಶಾರೂಖ್‌ರ ಒಂದೇ ಒಂದು ಸಿನಿಮಾ ಕೂಡ ರಿಲೀಸ್ ಆಗಿಲ್ಲ. 2018ರ ಡಿಸೆಂಬರ್‌ನಲ್ಲಿ ರಿಲೀಸ್ ಆದ ಜಿರೋ ಸಿನಿಮಾ ಶಾರೂಖ್ ನಟನೆಯ ಕೊನೆಯ ಸಿನಿಮಾವಾಗಿದೆ. 200 ಕೋಟಿ ಬಜೆಟ್‌ನ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಮಾಡಿದ್ದು 185 ಕೋಟಿ ರುಪಾಯಿ ಮಾತ್ರ.
ಶಾರೂಖ್ ಖಾನ್ ಐಸಿಐಸಿಐ ಬ್ಯಾಂಕ್,ಬೈಜೂಸ್, ಬಿಗ್ ಬಾಸ್ಕೆಟ್, ಲಕ್ಸ್,ಹ್ಯೂಂಡೈ ಸೇರಿದಂತೆ 14 ಕಂಪನಿಗಳ ಉತ್ಪನ್ನಗಳ ರಾಯಭಾರಿ ಆಗಿದ್ದಾರೆ. ಇದಲ್ಲದೆ ಸ್ವಂತ ಪ್ರೊಡಕ್ಷನ್ ಹೌಸ್ ಸೇರಿದಂತೆ ಹಲವ ಉದ್ಯಮ ಕ್ಷೇತ್ರದಲ್ಲಿ ಹಣ ಹೂಡಿ ಆದಾಯ ಗಳಿಸುತ್ತಿದ್ದಾರೆ.
7. ರಣ್‌ವೀರ್ ಸಿಂಗ್
ಆದಾಯ ಗಳಿಕೆ : 118.2 ಕೋಟಿ
2018 Rank : 08
ಬಾಲಿವುಡ್‌ನ ನಟ ರಣವೀರ್ ಸಿಂಗ್ ಫೋರ್ಬ್ಸ ಪಟ್ಟಿಯಲ್ಲಿ 7ನೇ ಸ್ಥಾನ ಗಿಟ್ಟಿಸಿದ್ದಾರೆ. ಇವರ ಆದಾಯ ಗಳಿಕೆಯು 118.2 ಕೋಟಿ ರುಪಾಯಿಗಳಾಗಿದ್ದು, ಕಳೆದ ವರ್ಷಕ್ಕಿಂತ ಒಂದು ಸ್ಥಾನ ಬಡ್ತಿ ಪಡೆದಿದ್ದಾರೆ. ೨೦೧೯ರಲ್ಲಿ ಇವರ ಆದಾಯ 118.2 ಕೋಟಿ. ಬಾಲಿವುಡ್‌ನಲ್ಲಿ ತನ್ನದೇ ಹವಾ ಸೃಷ್ಠಿಸಿರುವ ರಣವೀರ್ ಭರ್ಜರಿ 30 ಕಂಪನಿಗಳ ಉತ್ಪನ್ನಗಳ ರಾಯಭಾರಿ ಆಗಿದ್ದಾರೆ.
8. ಆಲಿಯಾ ಭಟ್
ಆದಾಯ ಗಳಿಕೆ : 59.2 ಕೋಟಿ
2018 Rank : 12
ಬಾಲಿವುಡ್ ಸಿನಿಮಾ ರಂಗದಲ್ಲಿ ತನ್ನ ಪ್ರಬುದ್ಧ ನಟನೆಯ ಮೂಲಕ ಮನೆ ಮಾತಾಗಿರುವ ಆಲಿಯಾ ಭಟ್ ಕಳೆದ ವರ್ಷಕ್ಕಿಂತ ನಾಲ್ಕು ಸ್ಥಾನ ಬಡ್ತಿ ಪಡೆದಿದ್ದಿದ್ಆರೆ. 2019ರಲ್ಲಿ ಇವರ ಒಟ್ಟು ಆದಾಯ ಗಳಿಕೆ 59.2 ಕೋಟಿ ರುಪಾಯಿ ಆಗಿದೆ. ಈ ವರ್ಷ 'ಗಲ್ಲಿ ಬಾಯ್' ಚಿತ್ರದಲ್ಲಿ ತಮ್ಮ ನಟನೆಯ ಮೂಲಕ ಎಲ್ಲರ ಮನ ಗೆದ್ದಿದ್ದರು. 26 ವರ್ಷದ ನಟಿ ಫ್ರೂಟಿ, ಊಬರ್ ಈಟ್ಸ್, ಫ್ಲಿಪ್‌ಕಾರ್ಟ್ ಸೇರಿದಂತೆ ಹತ್ತಾರು ಉತ್ಪನ್ನಗಳ ರಾಯಭಾರಿ ಆಗಿದ್ದಾರೆ.
9. ಸಚಿನ್ ತೆಂಡೂಲ್ಕರ್
ಆದಾಯ ಗಳಿಕೆ : 76.96 ಕೋಟಿ
2018 Rank : 09
ಕ್ರಿಕೆಟ್ ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ ಆದಾಯ ಕಳೆದ ವರ್ಷಕ್ಕೆ ಹೋಲಿಸಿದರೆ ಇಳಿಕೆಯಾಗಿದೆ. 2018ರಲ್ಲಿ 80 ಕೋಟಿ ಆದಾಯಗಳಿಕೆಯಲ್ಲಿ ೯ನೇ ಸ್ಥಾನದಲ್ಲಿದ್ದ ಸಚಿನ್ 2019ರಲ್ಲೂ ಅದೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. 100 ಅಂತರಾಷ್ಟ್ರೀಯ ಶತಕಗಳ ಏಕೈಕ ಸರದಾರ ಸಚಿನ್ 17 ಕಂಪನಿಗಳ ಉತ್ಪನ್ನಗಳ ರಾಯಭಾರಿ ಆಗಿದ್ದಾರೆ. 2019ರಲ್ಲಿ ಇವರ ಆದಾಯ 76.96 ಕೋಟಿ ರುಪಾಯಿ
10. ದೀಪಿಕಾ ಪಡುಕೋಣೆ
ಆದಾಯ ಗಳಿಕೆ : 48 ಕೋಟಿ
2018 Rank : 04
ಕನ್ನಡತಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಫೋರ್ಬ್ಸ್ ಭಾರತದ ಸೆಲೆಬ್ರೆಟಿ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ೨೦೧೮ರಲ್ಲಿ ಟಾಪ್ ೫ನಲ್ಲಿ ಕಾಣಿಸಿಕೊಂಡಿದ್ದ ಏಕೈಕ ನಟಿಯಾಗಿದ್ದ ದೀಪಿಕಾ ಆದಾಯ 112.8 ಕೋಟಿಯಿಂದ 48 ಕೋಟಿಗೆ ಇಳಿದಿದೆ. ಈ ವರ್ಷದ ದೀಪಿಕಾ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ.
ದೀಪಿಕಾ ಪಡುಕೋಣೆ ತನಿಶ್ಕ್, ಟೆಟ್ಲಿ ಗ್ರೀನ್ ಟೀ, ಲೋರೆಲ್ ಪ್ಯಾರಿಸ್ ಸೇರಿದಂತೆ ಆಕೆಯ ಸ್ವಂತ ಫ್ಯಾಶನ್ ಬ್ರ್ಯಾಂಡ್ ಮೂಲಕ ಆದಾಯ ಗಳಿಸುತ್ತಿದ್ದಾರೆ. ದೀಪಿಕಾ ನಂತರದ ಸ್ಥಾನದಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಸ್ಥಾನ ಪಡೆದಿದ್ದು ಇವರ ಆದಾಯ 54.29 ಕೋಟಿ ರುಪಾಯಿ


Click it and Unblock the Notifications