ಬೆಂಗಳೂರು, ಜೂನ್ 3: ಚೀನಾದಲ್ಲಿರುವ ಆದರೆ, ಭಾರತ ದೇಶದಲ್ಲಿ ಇದುವರೆಗೂ ಹೂಡಿಕೆ ಮಾಡದೇ ಇರುವಂತಹ ಕಂಪನಿಗಳನ್ನು ಪಟ್ಟಿ ಮಾಡಿ ಸಂಪರ್ಕಿಸಿ ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿಯನ್ನು ನೀಡುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಅವರು ಬುಧವಾರ ಸ್ಪೆಷಲ್ ಇನ್‌ವೆಸ್ಟ್‌ಮೆಂಟ್ ಟಾಸ್ಕ್ ಫೋರ್ಸ್ ಗೆ ಸೂಚನೆ ನೀಡಿದ್ದಾರೆ.
ಕರೋನಾ ಲಾಕ್‌ಡೌನ್ ಪರಿಣಾಮದ ಹಿನ್ನಲೆಯಲ್ಲಿ ಚೈನಾ ದೇಶದಿಂದ ತಮ್ಮ ಕೈಗಾರಿಕಾ ಘಟಕಗಳನ್ನು ಬೇರೆ ದೇಶಗಳಿಗೆ ವರ್ಗಾಯಿಸಲು ಚಿಂತನೆ ನಡೆಸುತ್ತಿರುವ ಕಂಪನಿಗಳನ್ನು ರಾಜ್ಯದಲ್ಲಿ ಹೂಡಿಕೆಗೆ ಸೆಳೆಯುವ ಉದ್ದೇಶದಿಂದ ರಚಿಸಲಾಗಿರುವ ಸ್ಪೆಷಲ್ ಇನ್‌ವೆಸ್ಟ್‌ಮೆಂಟ್ ಟಾಸ್ಕ್ ಫೋರ್ಸ್ ನ ಮೊದಲ ಸಭೆಯನ್ನು ಉದ್ದೇಶಿಸಿ ಟಿ ಎಂ ವಿಜಯಭಾಸ್ಕರ್ ಮಾತನಾಡಿದರು.
ರಾಜ್ಯದಲ್ಲಿ ಹೂಡಿಕೆಗೆ ಉತ್ತಮ ಪರಿಸರವಿದೆ
ರಾಜ್ಯ ಸರಕಾರ ಕೊರೊನಾ ಮಹಾಮಾರಿಯ ಸಂಧರ್ಭವನ್ನು ನಿರ್ವಹಿಸಿದ ರೀತಿಯನ್ನು ಗಮನಿಸಿದಾಗ ರಾಜ್ಯ ಸರಕಾರದ ಆಡಳಿತ ಯಂತ್ರದ ದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂಬುದು ಸಾಬೀತಾಗುತ್ತದೆ. ನಮ್ಮ ರಾಜ್ಯದಲ್ಲಿ ಹೂಡಿಕೆಗೆ ಉತ್ತಮ ಪರಿಸರವಿದೆ. ಕೈಗಾರಿಕಾ ಸ್ಥಾಪನೆಗೆ ಅಗತ್ಯವಾಗಿರುವ ಭೂಮಿ ಹಾಗೂ ಕಾರ್ಮಿಕರ ಸಂಖ್ಯೆ ರಾಜ್ಯದಲ್ಲಿ ವಿಫಲವಾಗಿವೆ ಎಂದರು.
ರಾಜ್ಯ ಸರಕಾರದ ವತಿಯಿಂದ ಸಂಪರ್ಕ
ರಾಜ್ಯದಲ್ಲಿ ಹೊಸದಾಗಿ ಸ್ಥಾಪನೆ ಮಾಡಬಹುದಾದ ಕೈಗಾರಿಕೆಗಳ ಪಟ್ಟಿಯನ್ನು ಮಾಡಲು ವಿಜಯಭಾಸ್ಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಈಗಾಗಲೇ ನಿರ್ಧರಿಸಿದಂತೆ ಟಾಪ್ 100 ಕಂಪನಿಗಳನ್ನು ಪಟ್ಟಿ ಮಾಡಿ ರಾಜ್ಯ ಸರಕಾರದ ವತಿಯಿಂದ ಸಂಪರ್ಕ ಮಾಡುವಂತೆ ತಿಳಿಸಿದರು.
ಯಾವುದೇ ಪರವಾನಗಿಯನ್ನು ಪಡೆಯದೆ ಉದ್ಯಮ ಸ್ಥಾಪಿಸಿ
ರಾಜ್ಯ ಸರಕಾರ ಈಗಾಗಲೇ ಈ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಹಲವಾರು ಸುಧಾರಣೆಗಳನ್ನು ಕೈಗೊಂಡಿದೆ. ಯಾವುದೇ ಪರವಾನಗಿಯನ್ನು ಪಡೆಯದೆ ಉದ್ಯಮ ಸ್ಥಾಪಿಸಿ ಮೂರು ವರ್ಷಗಳ ನಂತರ ಅಗತ್ಯ ಪರವಾನಗಿಗಳನ್ನು ಪಡೆಯುಲು ಅವಕಾಶ ಮಾಡಿ ಕೊಡುವ ಹೊಸ ಕಾಯ್ದೆಯನ್ನು ಜಾರಿಗೊಳಿಸಲು ಕ್ರಮ ವಹಿಸಲಾಗಿದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಸಭೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಹಾಜರಿದ್ದವರು
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಜಪಾನ್ ಎಕ್ಟ್ರನಲ್ ಟ್ರೇಡ್ ಆರ್ಗನೈಸೇನ್‌ನ ಡೈರೆಕ್ಟರ್ ಜನರಲ್ ತಾಕಾಶಿ ಸುಜುಕಿ, ಕೊರಿಯಾ ಟ್ರೇಡ್ ಇನ್‌ವೆಸ್ಟ್‌ಮೆಂಟ್ ಪ್ರಮೋಷನ್ ಏಜೆನ್ಸಿಯ ಡೈರೆಕ್ಟರ್ ಜನರಲ್ ಪಾರ್ಕ್ ಕೆನ್ಹೂಂಗ್, ಅಮೇರಿಕನ್ ಛೆಂಬರ್ ಆಫ್ ಕಾಮರ್ಸ್ ಇನ್ ಇಂಡಿಯಾದ ಸಂಜಯ್ ಕೌಲ್, ಇಂಡೋಫ್ರೆಂಚ್ ಛೆಂಬರ್ ಆಫ್ ಕಾಮರ್ಸಿನ ಡೈರೆಕ್ಟರ್ ಜನರಲ್ ಪಾಯಲ್ ಕನ್ವರ್ ಸೇರಿದಂತೆ ಜಪಾನ್, ಕೊರಿಯಾ, ಟೈವಾನ್, ಸಿಂಗಾಪೂರ್, ಯುಎಸ್, ಫ್ರಾನ್ಸ್, ಜರ್ಮನಿ ಹಾಗೂ ಟಾಸ್ಕ್ ಫೋರ್ಸ್‌ನ ಸದಸ್ಯರುಗಳು ಹಲವಾರು ಸಲಹೆಗಳನ್ನು ನೀಡಿದರು.


Click it and Unblock the Notifications