ಫಾಕ್ಸ್‌ಕಾನ್ ಎಂದೇ ಪ್ರಸಿದ್ಧವಾದ ತೈವಾನ್ ಮೂಲದ ಹೊನ್ ಹೈ ಟೆಕ್ನಾಲಜಿ ಗ್ರೂಪ್ ಜುಲೈ 10 ರಂದು ವೇದಾಂತ ಗ್ರೂಪ್‌ನೊಂದಿಗಿನ ತನ್ನ ಜಂಟಿ ಉದ್ಯಮದಿಂದ ಹಿಂದೆ ಸರಿದಿದೆ ಎಂದು ಸಂಸ್ಥೆಯು ಹೇಳಿಕೆಯಲ್ಲಿ ಮಾಹಿತಿ ನೀಡಿದೆ. "ಅಧಿಕ ವೈವಿಧ್ಯಮಯ ಅಭಿವೃದ್ಧಿ ಅವಕಾಶಗಳನ್ನು ಹುಡುಕುವ ನಿಟ್ಟಿನಲ್ಲಿ ವೇದಾಂತದೊಂದಿಗೆ ಜಂಟಿ ಉದ್ಯಮದಲ್ಲಿ ಮುಂದುವರಿಯುವುದಿಲ್ಲ ಎಂದು ಫಾಕ್ಸ್‌ಕಾನ್ ನಿರ್ಧಾರ ಮಾಡಿದೆ," ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಈ ಬಗ್ಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಫಾಕ್ಸ್‌ಕಾನ್ ಮತ್ತು ವೇದಾಂತ ಎರಡೂ ಕಂಪನಿಗಳು ಭಾರತದ ಸೆಮಿಕಂಡಕ್ಟರ್ ಮಿಷನ್ ಮತ್ತು ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಬದ್ಧವಾಗಿವೆ," ಎಂದು ಹೆಳಿಕೊಂಡಿದ್ದಾರೆ. ಸೆಮಿಕಂಡಕ್ಟರ್ ತಯಾರಿಕೆಗಾಗಿ ವೇದಾಂತ ಗ್ರೂಪ್‌ನೊಂದಿಗೆ ಫಾಕ್ಸ್‌ಕಾನ್ ಮಾಡಿಕೊಂಡಿದ್ದ ಒಪ್ಪಂದ ಇದಾಗಿದ್ದು ಈ ಒಪ್ಪಂದದಿಂದ ಫಾಕ್ಸ್‌ಕಾನ್ ಹೊರನಡೆದಿದೆ.

ಸೆಮಿಕಂಡಕ್ಟರ್ ಯೋಜನೆಯ ಬಗ್ಗೆ ತಿಳಿಯಿರಿ
ಫಾಕ್ಸ್‌ಕಾನ್ ವೇದಾಂತ ಜೊತೆಗೆ ಮಾಡಿಕೊಂಡಿದ್ದ ಸುಮಾರು 19.5 ಬಿಲಿಯನ್ ಡಾಲರ್ ಹೂಡಿಕೆಯ ಸೆಮಿಕಂಡಕ್ಟರ್ ಡೀಲ್ ಇದಾಗಿತ್ತು. ಈ ಡೀಲ್ ಅಡಿಯಲ್ಲಿ ಎರಡು ಸಂಸ್ಥೆಗಳು ಗುಜರಾತ್‌ನಲ್ಲಿ 28-ನ್ಯಾನೊಮೀಟರ್ ಸೆಮಿಕಂಡಕ್ಟರ್‌ಗಳನ್ನು ತಯಾರಿಸುವ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಪ್ಲಾಂಟ್‌ಗೆ ಜಂಟಿಯಾಗಿ ಹೂಡಿಕೆ ಮಾಡಲು ಸಿದ್ಧವಾಗಿತ್ತು. ಆದರೆ ಈ ಡೀಲ್‌ನಿಂದ ಈ ಫಾಕ್ಸ್‌ಕಾನ್ ಹಿಂದೆ ಸರಿದಿದೆ.
ಈ ಹಿಂದೆ ಯುರೋಪ್ ಮೂಲದ ಎಸ್‌ಟಿ ಮೈಕ್ರೋಎಲೆಕ್ಟ್ರಾನಿಕ್ಸ್ ಸಂಸ್ಥೆಯನ್ನು ತಂತ್ರಜ್ಞಾನ ಪಾಲುದಾರ ಆಗಿಸುವ ಪ್ರಯತ್ನವನ್ನು ಮಾಡಲಾಗಿತ್ತು. ಆದರೆ ಈ ಮಾತುಕತೆ ಸರಿಯಾಗಿ ನಡೆದಿಲ್ಲ. ಇನ್ನು ವಿಶ್ವದಲ್ಲಿ ಬಳಕೆ ಮಾಡಲಾಗುವ ಸೆಮಿಕಂಡಕ್ಟರ್‌ಗಳಲ್ಲಿ ಅಧಿಕ ಪಾಲನ್ನು ಕೆಲವೇ ಕೆಲವು ದೇಶಗಳಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಈ ನಡುವೆ ಭಾರತದಲ್ಲಿ 2026ರ ವೇಳೆಗೆ ಸೆಮಿಕಂಡಕ್ಟರ್ ಮಾರುಕಟ್ಟೆಯು 5.20 ಲಕ್ಷ ಕೋಟಿ ರೂಪಾಯಿ ಗಾತ್ರಕ್ಕೆ ಬೆಳೆವಣಿಗೆ ಕಾಣುವ ನಿರೀಕ್ಷೆಯಿದೆ.
ಈ ನಡುವೆ ಫಾಕ್ಸ್‌ಕಾನ್ ಭಾರತ ಸರ್ಕಾರದ ದೇಶೀಯ ಚಿಪ್ ತಯಾರಿಕೆಯ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ಈ ಸಂದರ್ಭದಲ್ಲೇ ಸ್ಪಷ್ಟಪಡಿಸಿರುವ ಫಾಕ್ಸ್‌ಕಾನ್ ಭಾರತೀಯ ಸೆಮಿಕಂಡಕ್ಟರ್ ಉತ್ಪಾದನಾ ವಲಯದಿಂದ ನಾವು ಸಂಪೂರ್ಣವಾಗಿ ಹೊರಗುಳಿಯುತ್ತಿಲ್ಲ ಎಂದು ಹೇಳಿದೆ. ಸ್ಥಳೀಯ ಪಾಲುದಾರಿಕೆಯನ್ನು ಬೆಳೆಸಲಾಗುತ್ತದೆ. ಈಗಾಗಲೇ ಕಂಪನಿ ಮೋಡಿಫೈಡ್ ಪ್ರೊಡೆಕ್ಷನ್ -ಲಿಂಕ್ಡ್ ಇನಿಷಿಯೇಟಿವ್ ಸ್ಕೀಮ್ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದೆ ಎಂದು ಸ್ಪಷ್ಟಪಡಿಸಿದೆ.
ಇತರ ಪಾಲುದಾರರು ಸಾಲು ನಿಂತಿದ್ದಾರೆ ಎಂದ ವೇದಾಂತ
ಫಾಕ್ಸ್‌ಕಾನ್ ತನ್ನ ಜೊತೆಗಿನ ಸೆಮಿಕಂಡಕ್ಟರ್ ಡೀಲ್‌ನಿಂದ ಹೊರನಡೆಯುತ್ತಿದ್ದಂತೆ ವೇದಾಂತ ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದೆ. ನಮ್ಮೊಂದಿಗೆ ಈ ಯೋಜನೆಯಲ್ಲಿ ಪಾಲುದಾರಿಗೆ ಮಾಡಿಕೊಳ್ಳಲು ಇತರ ಪಾಲುದಾರರು ಸಾಲು ನಿಂತಿದ್ದಾರೆ ಎಂದು ವೇದಾಂತ ಹೇಳಿಕೊಂಡಿದೆ. "ನಾವು ನಮ್ಮ ಸೆಮಿಕಂಡಕ್ಟರ್ ತಂಡವನ್ನು ಬೆಳೆಸುವ ಪ್ರಯತ್ನವನ್ನು ಮಾಡುತ್ತೇವೆ. ಈಗಾಗಲೇ ಐಡಿಎಂನಿಂದ 40nm (ಚಿಪ್‌ಗಳು) ತಯಾರಿಕೆಗಾಗಿ ನಾವು ಪರವಾನಗಿಯನ್ನು ಪಡೆದುಕೊಂಡಿದ್ದೇವೆ," ಎಂದು ತಿಳಿಸಿದೆ.


Click it and Unblock the Notifications