ಸೈಬರ್ ಅಪರಾಧಿಗಳ ಗುಂಪು ಪ್ರತಿ ದಿನವೂ ಜನರನ್ನು ವಂಚಿಸಲು ಬೇರೆ ಬೇರೆ ಮಾರ್ಗಗಳನ್ನು ಬಳಸುತ್ತಿದೆ. 31 ವರ್ಷದ ಖಾಸಗಿ ಸಂಸ್ಥೆಯ ಉದ್ಯೋಗಿಗೆ ಅರೆಕಾಲಿಕ ಉದ್ಯೋಗವನ್ನು ನೀಡುವ ಆಮಿಷವನ್ನು ಒಡ್ಡಿ ಮತ್ತು ಹೂಡಿಕೆ ಮಾಡಿದರೆ ಅದರ ಮೇಲೆ ಶೇಕಡ 30 ರಷ್ಟು ಆದಾಯ ನೀಡುವುದಾಗಿ ಭರವಸೆ ನೀಡಿ ವಂಚನೆ ಮಾಡಿದೆ.
ಈ ಶೇಕಡ 30 ರಷ್ಟು ಆದಾಯದ ಭರವಸೆಯನ್ನು ನಂಬಿದ ಈ ವ್ಯಕ್ತಿಯು ಚಿನ್ನಾಭರಣಗಳನ್ನು ಒತ್ತೆ ಇಟ್ಟು ಸ್ನೇಹಿತರ ಬಳಿ ಸಾಲ ಪಡೆದು 28.2 ಲಕ್ಷ ರೂಪಾಯಿ ಈ ವಂಚಕರಿಗೆ ನೀಡಿದ್ದಾರೆ. ಪೂರ್ವ ಬೆಂಗಳೂರಿನಿಂದ ವರುಣ್ (ಹೆಸರು ಬದಲಾಯಿಸಲಾಗಿದೆ) ಎಂಬಾತನಿಗೆ ಜನವರಿ 23 ರಂದು ಟೆಲಿಗ್ರಾಮ್‌ನಲ್ಲಿ ಅರೆಕಾಲಿಕ ಉದ್ಯೋಗ ನೀಡುವುದಾಗಿ ಸಂದೇಶ ಬಂದಿದೆ.

ವರುಣ್ ಅರೆಕಾಲಿಕ ಉದ್ಯೋಗಕ್ಕೆ ಆಸಕ್ತಿ ತೋರಿಸಿದಾಗ ಅವರನ್ನು '5009 ಮಹೀಂದ್ರ ಪ್ರೀಮಿಯಂ ಗ್ರೂಪ್' ಹೆಸರಿನ ಟೆಲಿಗ್ರಾಮ್ ಗುಂಪಿನಲ್ಲಿ ಸೇರಿಸಲಾಯಿತು. ರಿಯಲ್ ಎಸ್ಟೇಟ್ ಸಂಸ್ಥೆಯ ಆಸ್ತಿಗಳನ್ನು ಹುಡುಕಲು ಮತ್ತು ಅವರಿಗೆ ರೇಟಿಂಗ್ ನೀಡುವುದು ಈ ವರುಣ್ ಕೆಲಸವಾಗಿತ್ತು.
ಅದಾದ ಬಳಿಕ ಹೂಡಿಕೆ ಮಾಡಿ ಕೆಲವೇ ನಿಮಿಷಗಳಲ್ಲಿ ಲಾಭ ಪಡೆಯುವ ಆಫರ್ ಅನ್ನು ಕೂಡಾ ನೀಡಿದರು. ದುಷ್ಕರ್ಮಿಗಳು ವರುಣ್ ಅವರ ಸಂಖ್ಯೆಯನ್ನು ಬಳಸಿಕೊಂಡು ಬೇರೆಯೇ ಐಡಿಯನ್ನು ರಚಿಸಿದ್ದಾರೆ ಮತ್ತು 'https://www.mahindraa.net/login' ಗೆ ಲಾಗ್ ಇನ್ ಮಾಡಲು ಹೇಳಿದ್ದಾರೆ. ಆರಂಭದಲ್ಲಿ ವರುಣ್ 1,000 ರೂಪಾಯಿ ಹೂಡಿಕೆ ಮಾಡಿ, ಪ್ರತಿಯಾಗಿ 1,045 ರೂಪಾಯಿ ಪಡೆದಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ವರುಣ್ ಅವರು ಕಾರ್ಯವನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಆದರೆ ದೀಪಾಲಿ ಎಂಬ ಮಹಿಳೆ ಮತ್ತು ಇತರ ಕೆಲವು ಸದಸ್ಯರು ಹೆಚ್ಚಿನ ಮೊತ್ತದ ಹೂಡಿಕೆ ಮಾಡುವ ಹೆಚ್ಚಿನ ಹಣವನ್ನು ಗಳಿಸುವ ವಿವರಗಳ ಸಂದೇಶ ಕಳುಹಿಸಿದ್ದಾರೆ.
"ಇದು ನನ್ನ ಮನಸ್ಸನ್ನು ಬದಲಾಯಿಸಿತು ಮತ್ತು ನಾನು ಜನವರಿ 24 ರಂದು 10,000 ರೂಪಾಯಿ ಟಾಸ್ಕ್ ಅನ್ನು ಖರೀದಿಸಿದೆ. ಇದರಿಂದಾಗಿ 18,000 ರೂಪಾಯಿ ಪಡೆದೆ," ಎಂದು ತಿಳಿಸಿದ್ದಾರೆ. ಜನವರಿ 25 ರಂದು, ವರುಣ್ ಮತ್ತೆ 10,000 ರೂಪಾಯಿ ಹೂಡಿಕೆ ಮಾಡಿದ್ದು, ಖಾತೆಯಲ್ಲಿ ಮಾತ್ರ 18,000 ರೂಪಾಯಿ ನೆಗೆಟಿವ್ ಬ್ಯಾಲೆನ್ಸ್ ಕಾಣಿಸಿಕೊಂಡಿದೆ.
ಆದರೆ ಬಳಿಕ ವರುಣ್‌ಗೆ 18,000 ರೂಪಾಯಿ ನೀಡಿ ಮತ್ತೆ ಟಾಸ್ಕ್ ಖರೀದಿ ಮಾಡುವಂತೆ ತಿಳಿಸಲಾಗಿದೆ. ಆತನಿಗೆ 36,000 ರೂಪಾಯಿ ನೀಡಲಾಗಿದೆ. ಮರುದಿನ, ಗುಂಪಿನ ಸದಸ್ಯರಿಗೆ 'ಈಸ್ಟರ್ ಎಗ್ ಆಫರ್' ನೀಡಲಾಗಿದೆ. ಇದರಲ್ಲಿ 30 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ 40,000 ರೂಪಾಯಿ ರಿಟರ್ನ್ ನೀಡುವ ಭರವಸೆ ನೀಡಲಾಗಿತ್ತು.
40,000 ರೂಪಾಯಿ ಗಳಿಸುವ ಬಗ್ಗೆ ದೀಪಾಲಿ ಗ್ರೂಪ್‌ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. ವರುಣ್ ಕೂಡ 30,000 ರೂಪಾಯಿ ಹೂಡಿಕೆ ಮಾಡಿದರು. ಆದರೆ ಅವರ ಖಾತೆಯಲ್ಲಿ 60,000 ರೂಪಾಯಿ ನೆಗೆಟಿವ್ ಬ್ಯಾಲೆನ್ಸ್ ತೋರಿಸಿದೆ. ದುಷ್ಕರ್ಮಿಗಳ ಪ್ರಚೋದನೆಯ ಮೇರೆಗೆ ವರುಣ್ ತನ್ನ ಅಕ್ಕನ ಮದುವೆಗೆಂದು ಮನೆಯವರು ಖರೀದಿಸಿದ್ದ ಚಿನ್ನವನ್ನು ಒತ್ತೆ ಇಟ್ಟು 60,000 ರೂಪಾಯಿ ಹೂಡಿಕೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅವರ ಖಾತೆಯಲ್ಲಿ 1.5 ಲಕ್ಷ ರೂಪಾಯಿ ನೆಗೆಟಿವ್ ಬ್ಯಾಲೆನ್ಸ್ ತೋರಿಸಿದೆ. ವರುಣ್ ತನ್ನ ತಂಗಿಯ ಮದುವೆ ವೆಚ್ಚಕ್ಕಾಗಿ ತನ್ನ ಕುಟುಂಬ ಇಟ್ಟುಕೊಂಡಿದ್ದ ಫಿಕ್ಸಿಡ್ ಡೆಪಾಸಿಟ್ ಅನ್ನು ಹಿಂಪಡೆದು 1.5 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾನೆ.
19ನೇ ಟಾಸ್ಕ್‌ನಲ್ಲಿದ್ದಾಗ 25 ಲಕ್ಷ ಗಳಿಸಿರುವುದಾಗಿ ತೋರಿಸಿದ್ದರು. ಹಣ ಹಿಂಪಡೆಯಲು ಮುಂಗಡವಾಗಿ 12 ಲಕ್ಷ ರೂಪಾಯಿ ಪಾವತಿಸುವಂತೆ ತಿಳಿಸಿದರು. ಆ ಸಂದರ್ಭದಲ್ಲಿ ದೀಪಾಲಿ ಮತ್ತು ಪಂಕಜ್ ಎಂಬ ವ್ಯಕ್ತಿ ವರುಣ್ ಪರವಾಗಿ 6 ಲಕ್ಷ ರೂಪಾಯಿ ಪಾವತಿ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ವರುಣ್ ತನ್ನ ಸ್ನೇಹಿತರ ಬಳಿ ಸಾಲ ಪಡೆದು ಸುಮಾರು 7.5 ಲಕ್ಷ ರೂಪಾಯಿ ಪಾವತಿ ಮಾಡಿದರು. ಜನವರಿ 30 ರ ವೇಳೆಗೆ ಅವರು 28.2 ಲಕ್ಷ ರೂಪಾಯಿ ಪಾವತಿ ಮಾಡಿದ್ದಾರೆ. ಆ ನಂತರವೇ ಅವರು ನೀಡಿದ ವೆಬ್‌ಸೈಟ್ ನಕಲಿ ಮತ್ತು ದೀಪಾಲಿ, ಪಂಕಜ್ ಮತ್ತು ಇತರ ಸದಸ್ಯರು ವಂಚನೆಯ ಭಾಗವಾಗಿರುವುದು ತನ್ನ ಅರಿವಿಗೆ ಬಂದಿದೆ ಎಂದು ಅರುಣ್ ಹೇಳಿದ್ದಾರೆ.
ಟ್ಯಾಕ್ಸಿ ಅಗ್ರಿಗೇಟರ್ ಹೊಂದಿರುವ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ ವರುಣ್, ಪ್ರತಿ ವಹಿವಾಟಿಗೆ ಬರೀ 100 ರೂಪಾಯಿ ಪಡೆಯುತ್ತಾರೆ. ಅವರ ಕುಟುಂಬ ಈಗ ಸಾಲದಲ್ಲಿದೆ. ವಂಚಕರ ಖಾತೆಯಲ್ಲಿನ ಮೊತ್ತವನ್ನು ಫ್ರೀಜ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ವರುಣ್ ದೂರು ನೀಡಿರುವ ಬಗ್ಗೆ ವಂಚಕರಿಗೆ ತಿಳಿಯದೆ ಇನ್ನಷ್ಟು ಹೂಡಿಕೆ ಮಾಡಲು ತಿಳಿಸುತ್ತಿದ್ದಾರೆ ಎಂದು ವರದಿಯಾಗಿದೆ.


Click it and Unblock the Notifications