ಭಾರತದ ಎಂಸಿ ಎಕ್ಸ್ ನಲ್ಲಿ ಸೋಮವಾರ (ನವೆಂಬರ್ 2, 2020) ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಚಿನ್ನದ ಫ್ಯೂಚರ್ಸ್ 0.04% ಇಳಿಕೆ ಕಂಡು, ಪ್ರತಿ 10 ಗ್ರಾಮ್ ಗೆ 50,677 ರುಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ. ಒಟ್ಟಾರೆಯಾಗಿ ಕಳೆದ 4 ದಿನದಲ್ಲಿ ಮೂರನೇ ಬಾರಿಗೆ ಬೆಲೆ ಕುಸಿತ ಕಂಡಿದೆ.
ಇನ್ನು ಬೆಳ್ಳಿ ಬೆಲೆಯಲ್ಲಿ ಪ್ರತಿ ಕೇಜಿಗೆ 1% ಹೆಚ್ಚಳ ಕಂಡು, 61,510 ರುಪಾಯಿಯಂತೆ ವಹಿವಾಟು ನಡೆಸಿತು. ಹಲವು ತಜ್ಞರು ದೀರ್ಘಾವಧಿಯಲ್ಲಿ ಚಿನ್ನದ ದರದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನ ಹೊಂದಿದ್ದಾರೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಯುಎಸ್ ನಲ್ಲಿ ದೊಡ್ಡ ಮೊತ್ತದ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಿಸಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ.
ಬೆಲೆಬಾಳುವ ಲೋಹಗಳ ಬೆಲೆ
ಆದರೂ ಯುಎಸ್ ಡಾಲರ್ ಮೌಲ್ಯ ದುರ್ಬಲವಾದಲ್ಲಿ ಮಾತ್ರ ಚಿನ್ನದ ದರ ಹೆಚ್ಚಳವಾಗುತ್ತದೆ. ಸ್ಥಿರವಾದ ಡಾಲರ್ ಮೌಲ್ಯದ ಕಾರಣಕ್ಕೆ ಚಿನ್ನದ ದರಕ್ಕೆ ಮಿತಿ ಬಿದ್ದಿತು. ಎಂಸಿಎಕ್ಸ್ ಚಿನ್ನವು 50,960 ರುಪಾಯಿಯಲ್ಲಿ ರೆಸಿಸ್ಟೆನ್ಸ್ ಹಾಗೂ 50,120ರಲ್ಲಿ ಬೆಂಬಲ ಪಡೆಯುತ್ತದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ ಅಭಿಪ್ರಾಯ ಪಟ್ಟಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಳವಾಗಿದೆ. ಏರಿಳಿತದ ವ್ಯವಹಾರದಲ್ಲಿ ಹೂಡಿಕೆದಾರರು ಬಹಳ ಎಚ್ಚರಿಕೆಯಿಂದ ಯುಎಸ್ ಅಧ್ಯಕ್ಷೀಯ ಚುನಾವಣೆ ಹಾಗೂ ಫೆಡರಲ್ ರಿಸರ್ವ್ ನೀತಿ ಸಭೆಯನ್ನು ಗಮನಿಸುತ್ತಿದ್ದಾರೆ. ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ ಗೆ (28.3495 ಗ್ರಾಮ್) 0.2% ಹೆಚ್ಚಳ ಕಂಡು, $ 1882ರಲ್ಲಿ ವಹಿವಾಟು ನಡೆಸಿದೆ. ಇನ್ನು ಇತರ ಬೆಲೆ ಬಾಳುವ ಲೋಹಗಳಾದ ಬೆಳ್ಳಿ 1.2% ಹೆಚ್ಚಳವಾಗಿ ಔನ್ಸ್ ಗೆ $ 23.92, ಪಲಾಡಿಯಂ 1.7% ಏರಿಕೆ ಕಂಡು, $ 2250.19 ಹಾಗೂ ಪ್ಲಾಟಿನಂ 0.4% ಕುಸಿದು $ 845.26ರಲ್ಲಿ ವ್ಯವಹಾರ ನಡೆಸಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ
ವಾರಾಂತ್ಯದ ಬೆಳವಣಿಗೆಗಳು ಹೂಡಿಕೆದಾರರನ್ನು ಇನ್ನಷ್ಟು ತುದಿಗೆ ತಂದು ನಿಲ್ಲಿಸಿವೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟ್ ಜೋ ಬಿಡೆನ್ ಮುಂದಿದ್ದಾರೆ. ಆದರೂ ಚುನಾವಣೆ ಕಣ ಬಹಳ ಬಿಗುವಾಗಿದೆ. ಇನ್ನು ಯುರೋಪ್ ನಲ್ಲಿ ಕಳೆದ ಐದು ವಾರದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ದುಪ್ಪಟ್ಟಾಗಿವೆ. ಭಾನುವಾರಕ್ಕ್ ಒಟ್ಟಾರೆ ಸೋಂಕಿನ ಪ್ರಕರಣ ಒಂದು ಕೋಟಿ ದಾಟಿದೆ. ಬ್ರಿಟನ್, ಪೋರ್ಚುಗಲ್ ನಿಂದ ಹೊಸದಾಗಿ ಲಾಕ್ ಡೌನ್ ವಿದಿಸುವ ಚಿಂತನೆ ನಡೆಯುತ್ತಿದೆ. ಇನ್ನು ಡಾಲರ್ ಮೌಲ್ಯ ಪ್ರಬಲ ಆಗುತ್ತಿದ್ದಂತೆ ಚಿನ್ನದ ಮೇಲೆ ಒತ್ತಡ ಹೆಚ್ಚಾಗುತ್ತದೆ ಹಾಗೂ ಅದರ ಏರಿಕೆಗೆ ಮಿತಿ ಹಾಕುತ್ತದೆ. ಇತರ ಕರೆನ್ಸಿಗಳ ವಿರುದ್ಧ ಡಾಲರ್ ಸೂಚ್ಯಂಕವು 0.09% ಏರಿಕೆ ಕಂಡಿತ್ತು. ಈ ಕಾರಣಕ್ಕೆ ಇತರ ಕರೆನ್ಸಿಗಳನ್ನು ಇರಿಸಿಕೊಂಡವರಿಗೆ ಚಿನ್ನದ ಖರೀದಿ ಉತ್ತಮ ಆಯ್ಕೆ ಆಗಿರಲಿಲ್ಲ.
ಫೆಡರಲ್ ರಿಸರ್ವ್ ಸಭೆ ಕಡೆಗೆ ಚಿತ್ತ
ಇಟಿಎಫ್ ಹೂಡಿಕೆದಾರರು ಕೂಡ ಸನ್ನಿವೇಶವನ್ನು ಕಾದು ನೋಡುತ್ತಿದ್ದಾರೆ. ವಿಶ್ವದ ಅತಿ ದೊಡ್ಡ ಚಿನ್ನದ ಇಟಿಎಫ್ ಹೋಲ್ಡಿಂಗ್ಸ್ ಎಸ್ ಪಿಡಿಆರ್ ನಲ್ಲಿ ಶುಕ್ರವಾರದಂದು 0.1% ಇಳಿಕೆಯಾಗಿ, 1257.67 ಟನ್ ತಲುಪಿದೆ. ಚಿನ್ನದ ಮೇಲಿನ ದೀರ್ಘಾವಧಿ ಕಾಂಟ್ರ್ಯಾಕ್ಟ್ ಗಳನ್ನು ಸಹ ಕಾಮೆಕ್ಸ್ ಚಿನ್ನದಲ್ಲಿ ಕಡಿತಗೊಳಿಸಿಕೊಂಡಿದ್ದಾರೆ ಎಂದು ಯುಎಸ್ ನ ಸಿಎಫ್ ಟಿಸಿ ಶುಕ್ರವಾರ ತಿಳಿಸಿದೆ. ಇನ್ನು ಚಿನ್ನದ ವ್ಯವಹಾರಸ್ಥರು ಫೆಡರಲ್ ರಿಸರ್ವ್ ನೀತಿಯ ನಿರ್ಧಾರದ ಕಡೆಗೆ ಎಚ್ಚರಿಕೆಯಿಂದ ಗಮನಿಸುತ್ತಿದ್ದಾರೆ. ಯುಎಸ್ ಅಧ್ಯಕ್ಷೀಯ ಚುನಾವಣೆ ಮುಗಿದ ಮೇಲೆ ನವೆಂಬರ್ ನಾಲ್ಕು ಅಥವಾ ಐದನೇ ತಾರೀಕಿನಂದು ಫೆಡರಲ್ ಓಪನ್ ಮಾರ್ಕೆಟ್ ಸಮಿತಿ ಸಭೆ ನಡೆಯಲಿದೆ.


Click it and Unblock the Notifications