ಸೆಪ್ಟೆಂಬರ್ ತಿಂಗಳಿನಲ್ಲಿ ಗಗನಕ್ಕೇರಿದ್ದ ಚಿನ್ನದ ಬೆಲೆಯು ಅಕ್ಟೋಬರ್‌ನಲ್ಲಿ ಇಳಿಕೆ ಕಂಡ ಬಳಿಕ ನವೆಂಬರ್‌ನಲ್ಲಿ ಸತತ 7ನೇ ದಿನವೂ ಕುಸಿತ ಕಂಡಿದೆ. ಜಾಗತಿಕ ದರಗಳಲ್ಲಿನ ಕುಸಿತ ಮತ್ತು ಇತ್ತೀಚಿಗೆ ರುಪಾಯಿ ಮೌಲ್ಯದಲ್ಲಿ ಚೇತರಿಕೆಯು ದೇಶೀಯ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರಿದೆ.
ಬುಧವಾರ ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನ 10ಗ್ರಾಂ 40 ರುಪಾಯಿ ಇಳಿಕೆ ದಾಖಲಿಸಿದ್ದು 38,680 ತಲುಪಿದ್ದು, 22 ಕ್ಯಾರೆಟ್ ಚಿನ್ನ 50 ರುಪಾಯಿ ಕುಸಿತ ಕಂಡಿದ್ದು 35,450ಕ್ಕೆ ಮುಟ್ಟಿದೆ. ಕಳೆದ ಬುಧವಾರ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ 398 ರುಪಾಯಿ ಏರಿಕೆಗೊಂಡು 38,407ಕ್ಕೆ ತಲುಪಿತ್ತು. ಆದರೆ ಆ ಬಳಿಕ ಸತತ 7ನೇ ದಿನವೂ ಚಿನ್ನದ ದರವು ಕುಸಿತ ಕಂಡಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಚಿನ್ನದ ದರವು ಪ್ರತಿ 10ಗ್ರಾಂ 40,000 ರುಪಾಯಿಗೆ ತಲುಪಿತ್ತು. ಆದರೆ ಅಕ್ಟೊಬರ್ ಕೊನೆಯಲ್ಲಿ ದಿಢೀರ್ ಇಳಿಕೆ ಕಂಡ ಚಿನ್ನದ ದರವು ಇದೀಗ ಸತತ 7ನೇ ದಿನ ಇಳಿಕೆ ಹಾದಿ ಹಿಡಿದಿದೆ. ಇದುವರೆಗೂ ಒಟ್ಟಾರೆ ಪ್ರತಿ 10ಗ್ರಾಂ ಚಿನ್ನದ ದರವು 2,400 ರುಪಾಯಿ ಇಳಿಕೆ ದಾಖಲಿಸಿದೆ. ಬೆಳ್ಳಿ ದರದಲ್ಲೂ ಶೇಕಡಾ 0.40ರಷ್ಟು ಕುಸಿತ ಕಂಡಿದ್ದು ಕೆ.ಜಿ 44,262 ರುಪಾಯಿ ದಾಖಲಾಗಿದೆ.
ಅಮೆರಿಕಾ ಮತ್ತು ಚೀನಾ ನಡುವಿನ ವ್ಯಾಪಾರದ ಒಪ್ಪಂದವು ಮೊದಲ ಹಂತಕ್ಕೆ ಹತ್ತಿರವಾಗಿದೆ ಎಂದು ಮಂಗಳವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆ ಬಳಿಕ ಉಭಯ ದೇಶಗಳ ಸಮಾಲೋಚಕರು ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ಮೂಲಕ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿದಂತಾಗಿದ್ದು, ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರಿದೆ.


Click it and Unblock the Notifications