ವಾರದ ಎತ್ತರದಿಂದ ಕೆಳಕ್ಕೆ ಇಳಿದು, ಡಾಲರ್ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ದರ ಏರಿಕೆ ಆಗಿದೆ. ಸೋಮವಾರ (ಸೆಪ್ಟೆಂಬರ್ 7, 2020) ಬೆಳಗ್ಗೆ ವಹಿವಾಟಿನಲ್ಲಿ MCXನಲ್ಲಿ ಚಿನ್ನದ ಅಕ್ಟೋಬರ್ ಡೆಲಿವರಿ ದರ ಪ್ರತಿ 10 ಗ್ರಾಮ್ ಗೆ 127 ರುಪಾಯಿ ಹೆಚ್ಚಳ ಕಂಡು, 50,805 ರು.ಗೆ ವಹಿವಾಟು ನಡೆಸಿತು. ಇನ್ನು ಬೆಳ್ಳಿ ದರ ಭರ್ಜರಿ ಏರಿಕೆಯಾಗಿ ಕೇಜಿಗೆ 68,150 ರು.ನಂತೆ ವ್ಯವಹಾರ ನಡೆಸಿತು.
ಕೊರೊನಾ ಕಾರಣಕ್ಕೆ ಯು.ಎಸ್.ನಲ್ಲಿ ಆರ್ಥಿಕತೆ ಚೇತರಿಕೆಗೆ ಆತಂಕ ಎದುರಾಗಿದೆ. ಈ ಕಾರಣಕ್ಕೆ ಡಾಲರ್ ಮೌಲ್ಯ ಇಳಿಕೆ ಹಾದಿಯಲ್ಲಿದ್ದು, ಸೋಮವಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಕಂಡಿತು. ಸ್ಪಾಟ್ ಚಿನ್ನದ ದರ ಪ್ರತಿ ಔನ್ಸ್ ಗೆ $ 1,935.53ಕ್ಕೆ ವಹಿವಾಟು ನಡೆಸಿತು. ಅದಕ್ಕೂ ಮುನ್ನ ಶುಕ್ರವಾರದಂದು ವಾರದ ಕನಿಷ್ಠ ಮಟ್ಟವಾದ $ 1916.24ಕ್ಕೆ ವ್ಯವಹಾರ ಮಾಡಿತು.
ಈ ಮಧ್ಯೆ ಗ್ರಾಹಕರ ವಿಶ್ವಾಸ ಸೂಚ್ಯಂಕವು ಆಗಸ್ಟ್ ನಲ್ಲಿ 84.8ಕ್ಕೆ ಕುಸಿದಿದೆ. ಕಳೆದ ತಿಂಗಳು ಇದು 91.7 ಇತ್ತು. ಇನ್ನು ಯು.ಎಸ್. ಸರ್ಕಾರಕ್ಕೆ ಹಣಕಾಸು ನಿಧಿ ಒದಗಿಸುವ ಬಗ್ಗೆ ಕಾಂಗ್ರೆಸ್ ಮತ್ತು ಶ್ವೇತ ಭವನದ ಜತೆಗೆ ಡಿಸೆಂಬರ್ ನಲ್ಲಿ ಒಪ್ಪಂದ ಆಗಲಿದೆ. ಈ ಮಸೂದೆ ಈ ವಾರದ ಕೊನೆಗೆ ಅಂತಿಮವಾಗಲಿದೆ.

ಕೊರೊನಾ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳದ ಹೊರತು ಚಿನ್ನದ ಬೆಲೆಯ ಏರಿಕೆ ಹಾದಿ ಮುಂದುವರಿಯಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಇನ್ನು ಭಾರತದಲ್ಲಿ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ವರ್ತಕರು ರಿಯಾಯಿತಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. 22 ಕ್ಯಾರೆಟ್ ನ ಪ್ರತಿ 10 ಗ್ರಾಮ್ ಚಿನ್ನದ ದರ 49,510 ರುಪಾಯಿ ಇದ್ದರೆ, 24 ಕ್ಯಾರೆಟ್ ದರ 50,510 ರುಪಾಯಿ ಇದೆ.


Click it and Unblock the Notifications