ಯುಎಸ್ ಅಧ್ಯಕ್ಷೀಯ ಚುನಾವಣೆ ಬಹಳ ಬಿಗುವಿನ ಸ್ಪರ್ಧೆ ಕಾಣುತ್ತಿರುವ ಸಂದರ್ಭದಲ್ಲೇ ಬುಧವಾರ (ನವೆಂಬರ್ 4, 2020) ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆ ಆಗಿದೆ. ಎಂಸಿಎಕ್ಸ್ ನಲ್ಲಿ ಡಿಸೆಂಬರ್ ಫ್ಯೂಚರ್ಸ್ 0.5% ಇಳಿಕೆ ಆಗಿ, ಪ್ರತಿ 10 ಗ್ರಾಮ್ ಗೆ 51,328 ರುಪಾಯಿಯಂತೆ ವಹಿವಾಟು ನಡೆಸಿದೆ. ಇನ್ನು ಬೆಳ್ಳಿ ದರವು 1.5% ಕುಸಿತ ಕಂಡು, ಪ್ರತಿ ಕೇಜಿಗೆ 61,773 ರುಪಾಯಿಗೆ ವ್ಯವಹಾರ ಮಾಡಿದೆ.
ಈ ಹಿಂದಿನ ಸೆಷನ್ ನಲ್ಲಿ ಚಿನ್ನ ಹಾಗೂ ಬೆಳ್ಳಿ ಎರಡೂ ತಲಾ 1 ಪರ್ಸೆಂಟ್ ಗಳಿಕೆಯನ್ನು ದಾಖಲು ಮಾಡಿದ್ದವು. ಯುಎಸ್ ಡಾಲರ್ ಬಲಗೊಂಡ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಚಿನ್ನದ ದರವು ಪ್ರತಿ ಔನ್ಸ್ ಗೆ (28.3495 ಗ್ರಾಮ್) 0.8% ಇಳಿಕೆಯಾಗಿ, $ 1894.33ರಲ್ಲಿ ವಹಿವಾಟು ನಡೆಸಿದೆ.
ಇತರ ಬೆಲೆ ಬಾಳುವ ಲೋಹಗಳು
ಇತರ ಬೆಲೆ ಬಾಳುವ ಲೋಹಗಳ ಪೈಕಿ ಬೆಳ್ಳಿ ಪ್ರತಿ ಔನ್ಸ್ ಗೆ 0.2% ಇಳಿಕೆಯಾಗಿ, $ 24.11ನಲ್ಲಿತ್ತು. ಪ್ಲಾಟಿನಂ 0.5% ಕುಸಿದು, $ 861.90ಗೆ ವ್ಯವಹಾರ ನಡೆಸಿದೆ. ಪಲಾಡಿಯಂ 1.1% ಇಳಿಕೆಯಾಗಿ, $ 2256.88 ನಲ್ಲಿದೆ. ಯುಎಸ್ ಡಾಲರ್ ಆರಂಭದ ನಷ್ಟವನ್ನು ಮತ್ತೆ ಸರಿತೂಗಿಸುವಲ್ಲಿ ಸಫಲವಾಗಿ, 0.45% ಏರಿಕೆ ಕಂಡಿತು. 94.071 ತಲುಪಿತು. ಇನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಬರುವ ಹಿನ್ನೆಲೆಯಲ್ಲಿ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಹೊಯ್ದಾಟ ಕಂಡುಬರುತ್ತಿದೆ. ಏಕೆಂದರೆ, ಸ್ಪರ್ಧೆ ತುರುಸಾಗಿದ್ದು, ಯಾರು ವಿಜೇತರಾಗಬಹುದು ಎಂಬ ಬಗ್ಗೆ ಸ್ಪಷ್ಟ ಸೂಚನೆ ಕಂಡುಬರುತ್ತಿಲ್ಲ.
ಫೆಡರಲ್ ರಿಸರ್ವ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ಸಭೆ
ಈ ವಾರ ನಡೆಯಲಿರುವ ಫೆಡರಲ್ ರಿಸರ್ವ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ಸಭೆಯ ಫಲಿತಾಂಶ ಏನಾಗಬಹುದು ಎಂದು ಚಿನ್ನದ ಹೂಡಿಕೆದಾರರು ಕಾಯುತ್ತಿದ್ದಾರೆ. ಇವುಗಳಿಂದ ಇನ್ನಷ್ಟು ಉತ್ತೇಜನ ದೊರೆಯಬಹುದು ಎಂಬ ನಿರೀಕ್ಷೆ ಇದೆ. ಇನ್ನು ರಿಸರ್ವ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ ಮಂಗಳವಾರ ಬಡ್ಡಿ ದರವನ್ನು ಕಡಿತ ಮಾಡಿ, ಹತ್ತಿರಹತ್ತಿರ ಶೂನ್ಯಕ್ಕೆ ಇಳಿಸಿದೆ. ಬಾಂಡ್ ಖರೀದಿ ಕಾರ್ಯಕ್ರಮಕ್ಕೆ ಚುರುಕು ಮುಟ್ಟಿಸಿದೆ. ಜಾಗತಿಕ ಅರ್ಥ ವ್ಯವಸ್ಥೆಗೆ ಸುಲಭವಾಗಿ ಹಣ ಹರಿದುಹೋಗುವಂತೆ ಮಾಡುವುದಕ್ಕೆ ಎಲ್ಲ ಪ್ರಯತ್ನ ನಡೆಯುತ್ತಿದೆ. ಭಾರತದಲ್ಲಿ ಕಳೆದ ಕೆಲವು ವಾರಗಳಿಂದಲೇ ಚಿನ್ನದ ಬೆಲೆ ಇಳಿಕೆ ಹಾದಿಯಲ್ಲಿ ಇದ್ದರೂ ಈ ವರ್ಷ ಇಲ್ಲಿಯವರೆಗೆ ಶೇಕಡಾ ಮೂವತ್ತರವರೆಗೆ ಏರಿಕೆ ಕಂಡಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದಿಂದ ಏನಾಗಬಹುದು?
ಜಾಗತಿಕ ಮಟ್ಟದಲ್ಲಿ ನಗದಿನ ಹರಿವು ಕಾರಣಕ್ಕೆ ಈ ಬೆಳವಣಿಗೆ ಆಗಿದೆ. "ಯುಎಸ್ ಸೆನೆಟ್ ನಲ್ಲಿ ಡೆಮಾಕ್ರಟ್ ಗಳು ಬಹುಸಂಖ್ಯೆಯಲ್ಲಿ ಇರುವ ಸಾಧ್ಯತೆ ಹೆಚ್ಚಿದೆ. ಇದರರ್ಥ ಹೆಚ್ಚಿನ ಆರ್ಥಿಕ ಉತ್ತೇಜನ ದೊರೆಯುತ್ತದೆ. ಹೀಗಾದಲ್ಲಿ ಯುಎಸ್ ಈಕ್ವಿಟಿಯಲ್ಲಿ ಮಾರಾಟ ಹಾಗೂ ಡಾಲರ್ ಕೂಡ ಮಾರಾಟ ಆಗಿ, ಚಿನ್ನದ ದರ ಏರಿಕೆ ಆಗಬಹುದು. ಇನ್ನು ಫೆಡ್ ನಿಂದ ಮುಂದಿನ ಮೂರು ವರ್ಷ ಬಡ್ಡಿ ದರದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇಲ್ಲ," ಎಂದು ಯೆಸ್ ಸೆಕ್ಯೂರಿಟೀಸ್ ಹೇಳಿದೆ. ಅದೇ ಟ್ರಂಪ್ ಮತ್ತೊಮ್ಮೆ ಅಧ್ಯಕ್ಷರಾದಲ್ಲಿ ಷೇರು ಮಾರ್ಕೆಟ್ ಏರಿಕೆ ಕಂಡು, ಡಾಲರ್ ಬಲಗೊಳ್ಳುತ್ತದೆ. ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.


Click it and Unblock the Notifications