ಭಾರತದ ಮಾರುಕಟ್ಟೆಯಲ್ಲಿ ಬುಧವಾರ (ಅಕ್ಟೋಬರ್ 21, 2020) ಚಿನ್ನದ ಬೆಲೆ ಏರಿಕೆ ಕಂಡಿದೆ. ನವೆಂಬರ್ 3ನೇ ತಾರೀಕಿನ ಯುಎಸ್ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಅಲ್ಲಿನ ಜನಪ್ರತಿನಿಧಿಗಳು ಹೊಸ ಆರ್ಥಿಕ ಪ್ಯಾಕೇಜ್ ಘೋಷಣೆ ಆಗಬಹುದು ಎಂಬ ಹಿನ್ನೆಲೆಯಲ್ಲಿ ಸತತ ಮೂರನೇ ದಿನ ಹೆಚ್ಚಳವಾಗಿದೆ.
MCXನಲ್ಲಿ ಡಿಸೆಂಬರ್ ಫ್ಯೂಚರ್ಸ್ ದರ 0.27% ಹೆಚ್ಚಳವಾಗಿ ಪ್ರತಿ 10 ಗ್ರಾಮ್ ಗೆ 51,047 ರುಪಾಯಿಗೆ ವಹಿವಾಟು ನಡೆಸಿದೆ. ಇನ್ನು ಬೆಳ್ಳಿ ಫ್ಯೂಚರ್ಸ್ 0.6% ಏರಿಕೆಯಾಗಿ, ಪ್ರತಿ ಕೇಜಿಗೆ 63,505 ರುಪಾಯಿಗೆ ವ್ಯವಹಾರ ನಡೆಸಿತು. ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ದರ 0.45% ಹಾಗೂ ಬೆಳ್ಳಿ ದರ 1.6% ಹೆಚ್ಚಳ ಆಗಿತ್ತು.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ
ಯುಎಸ್ ನಲ್ಲಿ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಣೆಯ ಭರವಸೆಯ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಕಂಡುಬಂತು. ಇನ್ನು ಯುಎಸ್ ಡಾಲರ್ ಮೌಲ್ಯ ದುರ್ಬಲವಾದ ಹಿನ್ನೆಲೆಯಲ್ಲಿ ಚಿನ್ನದ ದರಕ್ಕೆ ಬೆಂಬಲ ದೊರೆಯಿತು. ಸ್ಪಾಟ್ ಗೋಲ್ಡ್ 0.3% ಏರಿಕೆ ಕಂಡು, ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1912.11ರಂತೆ ವಹಿವಾಟು ನಡೆಸಿತು. ಬೆಳ್ಳಿ ದರವು 0.7% ಹೆಚ್ಚಳವಾಗಿ, ಪ್ರತಿ ಔನ್ಸ್ ಗೆ $ 24.82 ತಲುಪಿತು. ಪ್ಲಾಟಿನಂ 0.3% ಮೇಲಕ್ಕೆ ಏರಿ, $ 873.89 ತಲುಪಿತು. ಡಾಲರ್ ಸೂಚ್ಯಂಕವು ಪ್ರತಿಸ್ಪರ್ಧಿ ಕರೆನ್ಸಿಗಳ ವಿರುದ್ಧ 0.14% ಇಳಿಕೆ ಆಯಿತು. ಈ ಮೂಲಕ ಇತರ ಕರೆನ್ಸಿಗಳ ಮೂಲಕ ಚಿನ್ನ ಖರೀದಿ ಮಾಡಬೇಕು ಎಂದಿರುವವರಿಗೆ ಚಿನ್ನ ಅಗ್ಗವಾಗಿದೆ.
ಯುಎಸ್ ಅಧ್ಯಕ್ಷೀಯ ಚುನಾವಣೆ ಕಡೆಗೆ ಹೂಡಿಕೆದಾರರ ಚಿತ್ತ
ಯುಎಸ್ ಜನಪ್ರತಿನಿಧಿಗಳ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ಮಂಗಳವಾರ ಮಾತನಾಡಿ, ಉತ್ತೇಜನ ಪ್ಯಾಕೇಜ್ ಒಪ್ಪಂದಕ್ಕೆ ಸಹಿ ಹಾಕುವ ಭರವಸೆ ಇದೆ. ಶ್ವೇತ ಭವನವು $ 80 ಬಿಲಿಯನ್ ನಿಂದ $ 1.88 ಲಕ್ಷ ಕೋಟಿಗೆ ಹೆಚ್ಚಳ ಮಾಡಿದೆ. ಆದರೂ ಡೆಮಾಕ್ರಟ್ ನಿಂದ ಕೇಳುತ್ತಿರುವ $ 2.2 ಲಕ್ಷ ಕೋಟಿ ಪರಿಹಾರ ಯೋಜನೆಗಿಂತ ಕಡಿಮೆ ಇದೆ. ಆದರೆ ಅದಕ್ಕಿಂತ ದೊಡ್ಡ ಮೊತ್ತದ ಪರಿಹಾರ ನೀಡುವ ಬಗ್ಗೆ ಟ್ರಂಪ್ ಮಾತನಾಡಿದ್ದಾರೆ. ಯುಎಸ್ ನಿಂದ ಕೊರೊನಾ ಆರ್ಥಿಕ ಉತ್ತೇಜನಾ ಘೋಷಣೆ ಬಗ್ಗೆ ಮಾರುಕಟ್ಟೆ ತುಂಬ ಎಚ್ಚರಿಕೆಯಿಂದ ಗಮನಿಸುತ್ತಿದೆ ಎಂದು ಕೊಟಕ್ ಸೆಕ್ಯೂರಿಟೀಸ್ ಹೇಳಿದೆ. ಚಿನ್ನವೂ ಸೇರಿದಂತೆ ಇತರ ಲೋಹಗಳಿಗೆ ಯುಎಸ್ ಡಾಲರ್ ಸೂಚ್ಯಂಕವು ದುರ್ಬಲವಾದ್ದರಿಂದ ಬೆಂಬಲ ಸಿಗುತ್ತದೆ ಎಂದಿದ್ದಾರೆ.
ಆರ್ಥಿಕ ಸವಾಲು ಮುಂದುವರಿದಂತೆ ಚಿನ್ನದ ಮೇಲೆ ಆಸಕ್ತಿ
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಚಿನ್ನದ ಮೇಲೆ ಹೂಡಿಕೆ ಮಾಡುವುದು ಸುರಕ್ಷಿತ ಎಂಬ ಭಾವನೆ ಇದೆ. ಇದರಿಂದ ಚಿನ್ನದ ದರ ಏರಿಕೆಗೆ ಅನುಕೂಲ ಆಗಲಿದೆ ಎಂದು ಬ್ರೋಕರೇಜ್ ಹೇಳಿದೆ. ಹಣದುಬ್ಬರ ಹಾಗೂ ಕರೆನ್ಸಿ ಅಸ್ಥಿರತೆ ವಿರುದ್ಧ ಚಿನ್ನವು ಗುರಾಣಿಯಂತೆ ಕೆಲಸ ಮಾಡುತ್ತದೆ. ಇಟಿಎಫ್ ಹೂಡಿಕೆದಾರರು ಸದ್ಯಕ್ಕೆ ಪಕ್ಕಕ್ಕೆ ಸರಿದಿದ್ದಾರೆ. ಮುಂದೆ ಚಿನ್ನದ ದರ ಎತ್ತ ಸಾಗಲಿದೆ ಎಂಬ ಕಡೆಗೆ ನೋಡುತ್ತಿದ್ದಾರೆ. ಎಸ್ ಡಿಪಿಆರ್ ಗೋಲ್ಡ್ ಟ್ರಸ್ಟ್ ಹೋಲ್ಡಿಂಗ್ಸ್ 0.23% ಇಳಿಕೆಯಾಗಿ, ಮಂಗಳವಾರ 1269.93 ಟನ್ ತಲುಪಿದೆ. ಇದು ವಿಶ್ವದಲ್ಲೇ ಅತಿ ದೊಡ್ಡ ಚಿನ್ನದ ಇಟಿಎಫ್. ಯುಎಸ್ ಆರ್ಥಿಕ ಉತ್ತೇಜನದ ಹಿನ್ನೆಲೆಯಲ್ಲಿ ಚಿನ್ನದ ದರವು ಏರಿಳಿತ ಮುಂದುವರಿಯಲಿದೆ. ಜಾಗತಿಕ ಆರ್ಥಿಕತೆಯಲ್ಲಿ ಸವಾಲು ಮುಂದುವರಿದಂತೆ ಚಿನ್ನದ ಖರೀದಿ ಬಗ್ಗೆ ಆಸಕ್ತಿ ತೋರಲಿದ್ದಾರೆ ಎಂದು ಕೊಟಕ್ ಸೆಕ್ಯೂರಿಟೀಸ್ ಹೇಳಿದೆ.


Click it and Unblock the Notifications