ಕೆಲವು ತಿಂಗಳ ಹಿಂದಷ್ಟೇ ಕಾಫಿ ಬೆಳೆಗಾರರು ಬೆಲೆ ಇಳಿಕೆಯಿಂದಾಗಿ ಆತಂಕದಲ್ಲಿದ್ದರು. ಆದರೆ ಬೆಳೆ ಉತ್ಪಾದನೆಯಲ್ಲಿ ಜಾಗತಿಕ ಕೊರತೆ ಉಂಟಾದ ಕಾರಣದಿಂದಾಗಿ ಈಗ ಕಾಫಿ ಬೀಜಗಳ ಬೆಲೆಗಳು ಗಗನಕ್ಕೇರಿದೆ. ರಾಜ್ಯದ ಕಾಫಿ ಬೆಳೆಗಾರರಿಗೆ ಇದೊಂದು ಭರವಸೆಯನ್ನು ನೀಡಿದೆ.
ಕಾಫಿ ಬೆಲೆಗಳು ಈಗ 15 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಳೆದ ಒಂದು ದಶಕದಲ್ಲಿ ನಷ್ಟವನ್ನು ಕಾಣುತ್ತಿರುವ ಬೆಳೆಗಾರರಿಗೆ ಇದು ವರದಾನವಾಗಿದೆ. ಈ ವರ್ಷವೂ ಬರಗಾಲದಿಂದ ಇಳುವರಿ ಕಳಪೆಯಾಗಿದ್ದರೂ, ಕೊಡಗು, ಚಿಕ್ಕಮಗಳೂರು, ಹಾಸನ ಭಾಗದ ಬೆಳೆಗಾರರಿಗೆ ದಾಖಲೆಯ ಬೆಲೆ ಸಮಾಧಾನ ತರಿಸಿದೆ.

ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿದ ಕೊಡಗಿನ ಗೋಣಿಕೊಪ್ಪಲಿನ ಪ್ರಮುಖ ಕಾಫಿ ಡೀಲರ್ ಮುಸ್ತಫಾ 50 ಕೆ.ಜಿ ರೋಬಸ್ಟಾ ಬೀನ್ಸ್‌ಗೆ 6,600 ಮತ್ತು 6,800 ರೂಪಾಯಿ ಇದೆ. ಅರೇಬಿಕಾ 7,750 ರಿಂದ 7,850 ರೂಪಾಯಿಗೆ ಮಾರಾಟವಾಗುತ್ತದೆ ಎಂದು ಹೇಳಿದ್ದಾರೆ.
ಇದು 2008ರ ಬೆಲೆಗೆ ನಾವು ಹೋಲಿಕೆ ಮಾಡಿದರೆ ಈ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ರೋಬಸ್ಟಾ 3,000 ರೂಪಾಯಿಗಿಂತ ಕಡಿಮೆ ಬೆಲೆಯನ್ನು ಮತ್ತು ಅರೇಬಿಕಾ 5,000 ರೂಪಾಯಿಗಿಂತ ಕಡಿಮೆ ಬೆಲೆಯನ್ನು 2008 ರಲ್ಲಿ ಹೊಂದಿತ್ತು.
"ಕಾಫಿ ಜಾಗತಿಕ ಬೇಡಿಕೆಯಲ್ಲಿ ಗಣನೀಯ ಏರಿಕೆಯಾಗಿದೆ. ಪ್ರಾಥಮಿಕವಾಗಿ ವಿಶ್ವದ ಅಗ್ರಗಣ್ಯ ಕಾಫಿ ರಫ್ತುದಾರ ಬ್ರೆಜಿಲ್‌ನಿಂದಾಗಿ ಬೆಲೆಗಳು ಏರಿಕೆಯಾಗಿದೆ. ತೀವ್ರ ಹವಾಮಾನ ಪರಿಸ್ಥಿತಿಗಳು (2021 ರಲ್ಲಿ ಹಿಮ) ದಕ್ಷಿಣ ಅಮೆರಿಕಾದ ರಾಷ್ಟ್ರದ ಬೆಳೆಗಳ ಮೇಲೆ ಪರಿಣಾಮ ಬೀರಿದೆ. ಅಲ್ಲಿನ ಬೆಳೆಗಾರರು ಪ್ರಸ್ತುತ ಮರು ನಾಟಿ ಮಾಡುತ್ತಿದ್ದಾರೆ. ಇದು ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ," ಎಂದು ಕಾಫಿ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಕೆ.ಜಿ.ಜಗದೀಶ ಟಿಒಐಗೆ ತಿಳಿಸಿದ್ದಾರೆ.
ಕಡಿಮೆ ಉತ್ಪಾದನೆ ಇದ್ದರೂ ಕೂಡಾ ಕಾಫಿ ಒಟ್ಟು ಉತ್ಪಾದನೆಯು 3.54 ಲಕ್ಷ ಟನ್‌ಗೆ ತಲುಪುವ ನಿರೀಕ್ಷೆಯಿದೆ. ಕಳೆದ ವರ್ಷದ ಉತ್ಪಾದನೆಯಾದ 3.52 ಲಕ್ಷ ಟನ್‌ಗಿಂತ ಅಧಿಕ ಉತ್ಪಾದನೆ ನಿರೀಕ್ಷೆಯಿದೆ. ಕರ್ನಾಟಕವು ದೇಶದಲ್ಲಿ ಅತೀ ಹೆಚ್ಚು ಕಾಫಿ ಬೆಳೆಯುವ ರಾಜ್ಯವಾಗಿದೆ. ನಂತರದ ಸ್ಥಾನದಲ್ಲಿ ಕರ್ನಾಟಕದ ನೆರೆ ರಾಜ್ಯ ಕೇರಳವಿದೆ.
ಕರ್ನಾಟಕ ಹಾಗೂ ಕೇರಳ ಸೇರಿ ದೇಶದಲ್ಲಿ ಶೇಕಡ 90ರಷ್ಟು ಕಾಫಿಯನ್ನು ಉತ್ಪಾದಿಸುತ್ತದೆ. ಈ ಪೈಕಿ ಶೇಕಡ 71 ರಷ್ಟು ಕಾಫಿ ಉತ್ಪಾದನೆಯನ್ನು ಕರ್ನಾಟಕದಲ್ಲಿಯೇ ಮಾಡಲಾಗುತ್ತದೆ. ಜರ್ಮನಿ, ಫ್ರಾನ್ಸ್, ರಷ್ಯಾ, ಸ್ಪೇನ್, ಸೊಲೋವಿಯಾ, ಬೆಲ್ಜಿಯಂ, ನೆದರ್‌ಲ್ಯಾಂಡ್, ಗ್ರೀಸ್, ಯುಎಸ್‌ಎ, ಯುನೈಟೆಡ್ ಕಿಂಗ್‌ಡಮ್‌ಗೆ ಭಾರತದಿಂದ ಕಾಫಿಯನ್ನು ರಫ್ತು ಮಾಡಲಾಗುತ್ತದೆ.
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯು ರಾಜ್ಯದಲ್ಲಿ ಅತೀ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಒಂದಾಗಿದ್ದು, ಈ ಜಿಲ್ಲೆಯನ್ನು ಕಾಫಿ ನಾಡು ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಅತೀ ಹೆಚ್ಚು ಕಾಫಿ ಉತ್ಪಾದನೆ ಮಾಡುವ ಜಿಲ್ಲೆ ಕೊಡಗು. ಭಾರತದ ಒಟ್ಟು ಕಾಫಿ ಉತ್ಪಾದನೆ ಪೈಕಿ ಸುಮಾರು ಶೇಕಡ 33ರಷ್ಟು ಕಾಫಿಯನ್ನು ಕೊಡಗು ಜಿಲ್ಲೆಯಲ್ಲಿ ಉತ್ಪಾದಿಸಲಾಗುತ್ತದೆ. ಇದನ್ನು ಹೊರತುಪಡಿಸಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಕಾಫಿ ಬೆಳೆಯಲಾಗುತ್ತದೆ.


Click it and Unblock the Notifications