ಕೇರಳದ ಧಾರ್ಮಿಕ ಕೇಂದ್ರಗಳಲ್ಲಿ ಶಬರಿಮಲೆ ಅಯ್ಯಪ್ಪ ಕ್ಷೇತ್ರ (Shabrimale) ಕೂಡಾ ಒಂದು. ಕೇರಳ ರಾಜ್ಯದ ಪತ್ತನಂತಿಟ್ಟ ಜಿಲ್ಲೆಯ ಸಹ್ಯಾದ್ರಿ ಪರ್ವತದಲ್ಲಿದೆ. ಈ ದೇವಾಲಯವು ಸಮುದ್ರ ತಟದಿಂದ 3000 ಅಡಿ ಎತ್ತರದಲ್ಲಿದ್ದು, ದಟ್ಟವಾದ ಅರಣ್ಯಗಳಿಂದ ಕೂಡಿದ, 18 ಬೆಟ್ಟಗಳ ನಡುವೆ ಪ್ರತಿಷ್ಠಾಪನೆಯಾಗಿದೆ. ಈಗಾಗಲೇ ಮಕರ ಸಂಕ್ರಾಂತಿ ಪ್ರಯುಕ್ತ ಲಕ್ಷಗಟ್ಟಲೆ ಭಕ್ತರು ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ಸಮಯದಲ್ಲಿ ಭಕ್ತರು ಮಾಲೆ ಧರಿಸಿ, ವೃತದೊಂದಿಗೆ ಅಯ್ಯಪ್ಪನ ದರ್ಶನ (Lord Ayyappa) ಪಡೆಯುತ್ತಾರೆ. ಆದ್ರೆ ಇದೀಗ ಅಯ್ಯಪ್ಪನ ದರ್ಶನಕ್ಕೆ ಕೇರಳಕ್ಕೆ ಹೋಗುವ ಭಕ್ತರಿಗೆ ಭಾರತೀಯ ರೈಲ್ವೇ ಇಲಾಖೆ ಗುಡ್ ನ್ಯೂಸ್ ನೀಡಿದೆ.

ಕರ್ನಾಟಕದ ಬೆಂಗಳೂರು-ಹುಬ್ಬಳ್ಳಿ-ಕೇರಳದ ಕೊಲ್ಲಂ ನಡುವೆ ದಿಸೆಂಬರ್ ಅಂತ್ಯಕ್ಕೆ ಭಾರತೀಯ ರೈಲ್ವೇ ಇಲಾಖೆ ಹೆಚ್ಚುವರಿ ರೈಲು ನಿಯೋಜಿಸಲು ಮುಂದಾಗಿದೆ. ಜನವರಿಯಲ್ಲಿ ಮಕರ ಸಂಕ್ರಾಂತಿ ಹಿನ್ನೆಲೆ, ಡಿಸೆಂಬರ್ ಅಂತ್ಯದ ವೇಳೆ ಶಬರಿಮಲೆಗೆ ಹೋಗುವ ಭಕ್ತರ ಸಂಖ್ಯೆಯೂ ಹೆಚ್ಚಾಗುವ ನಿರೀಕ್ಷೆಯಿದೆ. ಅಯ್ಯಪ್ಪ ಭಕ್ತರ ಅನುಕೂಲಕ್ಕಾಗಿ ಇದೀಗ ರೈಲ್ವೇ ಇಲಾಖೆ ವಿಶೇಷ ರೈಲು ನಿಯೋಜಿಸಲು ಮುಂದಾಗಿದೆ.
ರೈಲ್ವೇ ಇಲಾಖೆ ಹೇಳಿದ್ದೇನು?
ಇನ್ನು ಈ ಕುರಿತು ಭಾರತೀಯ ರೈಲ್ವೇ ಇಲಾಖೆ "ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆ ರೈಲ್ವೇ ಸ್ಟೇಷನ್‌ನಲ್ಲಿ ದಟ್ಟಣೆ ಹೆಚ್ಚಾಗಲಿದೆ. ಅಲ್ಲದೇ ಮಕರ ಸಂಕ್ರಾಂತಿ ಪ್ರಯುಕ್ತ ಪ್ರಯಾಣಿಕರ ಸಂಖ್ಯೆಯಲ್ಲೂ ಹೆಚ್ಚಳವಾಗುವ ನಿರೀಕ್ಷೆಯಿದೆ, ಈ ಹಿನ್ನೆಲೆ ಕರ್ನಾಟಕ ಮತ್ತು ಕೇರಳ ನಡುವೆ ಡಿಸೆಂಬರ್ ಅಂತ್ಯದಲ್ಲಿ ವಿಶೇಷ ರೈಲು ಓಡಿಸಲಾಗುತ್ತದೆ" ಎಂದು ತಿಳಿಸಿದೆ. ಈ ವಿಶೇಷ ರೈಲಿನ ಮೂಲಕ ಶಬರಿಮಲೆ ಹೋಗುವ ಯಾತ್ರಾರ್ಥಿಗಳು ಚೆಂಗನ್ನೂರ್ ಸ್ಟೇಷನ್, ಕೊಟ್ಟಾಯಂನಲ್ಲಿ ಇಳಿದು ಪಂಪಾಗೆ ಬಸ್, ಟ್ಯಾಕ್ಸಿ ಮೂಲಕ ತೆರಳಬಹುದು.
ಬೆಂಗಳೂರು ಟು ಕೊಲ್ಲಂ:
ರೈಲು ಸಂಖ್ಯೆ 06561, ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿದ ಡಿಸೆಂಬರ್ 27 ರಂದು, ಮಧ್ಯಾಹ್ನ 3 ಕ್ಕೆ ಪ್ರಯಾಣ ಬೆಳೆಸಲಿದೆ. 28ರಂದು ಬೆಳಿಗ್ಗೆ 7:25ಕ್ಕೆ ಕೊಲ್ಲಂ ರೀಚ್ ಆಗುತ್ತದೆ.
ಕೊಲ್ಲಂ ಟು ಹುಬ್ಬಳ್ಳಿ:
ಇನ್ನು ಕೊಲ್ಲಂ ಟು ಹುಬ್ಬಳ್ಳಿಗೂ ವಿಶೇಷ ರೈಲು ನಿಯೋಜಿಸಲಾಗಿದೆ. ಅಂದರೆ ಕೊಲ್ಲಂನಿಂದ ಡಿಸೆಂಬರ್ 28 ರಂದು ಬೆಳಿಗ್ಗೆ 10:40 ಕ್ಕೆ ಹೊರಡುತ್ತದೆ. ಅದೇ ರೈಲು ಮರುದಿನ ಬೆಳಿಗ್ಗೆ 10:30ಕ್ಕೆ ಹುಬ್ಬಳ್ಳಿ ತಲುಪಲಿದೆ.
ಎಲ್ಲೆಲ್ಲಿ ಸ್ಟೇಷನ್‌ಗಳಲ್ಲಿ ನಿಲ್ಲಲಿದೆ?
ಈ ರೈಲುಗಳು ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರು, ದಾವಣೆಗೆರೆ, ಕಡೂರು, ಅರಸೀಕರೆ, ತುಮಕೂರು, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಸೇಲಂ, ಈರೋಡ್, ಬಂಗಾರಪೇಟೆ, ತಿರುಪ್ಪೂರು, ಕೋಯಮತ್ತೂರು ತ್ರಿಶೂರ್, ಪಾಲಕ್ಕಾಡ್, ಆಲುವಾ, ಎರ್ನಾಕುಲಂ ಟೌನ್, ತಿರುಬಲ್ಲ, ಚೆಂಗನ್ನೂರು ಹೀಗೆ ಹಲವು ನಿಲ್ದಾಣಗಳಲ್ಲಿ ಸ್ಟಾಪ್ ಹೊಂದಿರಲಿದೆ. ಈ ರೈಲುಗಳು ಒಟ್ಟು 18 ಬೋಗಿಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಈ ವಿಶೇಷ ರೈಲಿನೊಂದಿಗೆ ಪ್ರಯಾಣ ಮಾಡಬಹುದು.
ಶಬರಿಮಲೆಗೆ ವಿಶೇಷ ರೈಲು ಸೇವೆ:
ಪ್ರತಿ ವರ್ಷ ನವೆಂಬರ್‌ನಲ್ಲಿ ಆರಂಭವಾಗಿ ಜನವರಿವರೆಗೆ ನಡೆಯುವ ಶಬರಿಮಲೆ ಯಾತ್ರೆಯಲ್ಲಿ, ದಕ್ಷಿಣ ಭಾರತದ, ವಿಶೇಷವಾಗಿ ಕರ್ನಾಟಕ, ತೆಲಂಗಾಣ, ತಮಿಳುನಾಡು ರಾಜ್ಯಗಳ ಸಾವಿರಾರು ಭಕ್ತರು ಅಯ್ಯಪ್ಪ ವೃತವನ್ನು ಕೈಗೊಳ್ಳುತ್ತಾರೆ. ಅಲ್ಲದೇ ಈ ಸಂದರ್ಭದಲ್ಲಿ ಭಕ್ತರ ಅನುಕೂಲಕ್ಕಾಗಿ ಭಾರತೀಯ ರೈಲ್ವೇ ಇಲಾಖೆ ಕೂಡಾ ವಿಶೇಷ ರೈಲುಗಳನ್ನು ನಿಯೋಜಿಸುತ್ತದೆ. ಅದೇ ರೀತಿ ಈ ಬಾರಿ ಕೂಡಾ ರೈಲ್ವೇ ಇಲಾಖೆ ವಿಶೇಷ ರೈಲುಗಳನ್ನು ನಿಯೋಜಿಸಿದೆ.


Click it and Unblock the Notifications