ಗೂಗಲ್ ಸಿಇಒ ಸುಂದರ್ ಪಿಚೈ 2020ರ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ವಿಶೇಷವಾದ ಸಂದೇಶ ನೀಡಿದ್ದಾರೆ. ಮುಕ್ತವಾಗಿರಿ, ಭರವಸೆ ಇರಲಿ ಹಾಗೂ "ಅಸಹನೆ" ಇರಲಿ ಎಂದಿರುವ ಅವರು, ಎಲ್ಲವನ್ನೂ ಬದಲಿಸಲು ಅವರಿಗೆ ಇರುವ ಅವಕಾಶದ ಬಗ್ಗೆ ತಿಳಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಪದವಿ ಪ್ರದಾನ ಸಮಾರಂಭಗಳೂ ವರ್ಚುವಲ್ ಆಗಿ ನಡೆಯುತ್ತಿವೆ.
ಗೂಗಲ್ ನ ವಿಡಿಯೋ ಪ್ಲಾಟ್ ಫಾರ್ಮ್ ಆದ ಯೂಟ್ಯೂಬ್ ನಿಂದ ಈ ವಿದ್ಯಾರ್ಥಿಗಳಿಗೆ ವಿದಾಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಅವರ ಪತ್ನಿ ಮಿಶೆಲ್ ಒಬಾಮ, ಕೊರಿಯನ್ ಪಾಪ್ ತಂಡ ಬಿಟಿಎಸ್, ಗಾಯಕರಾದ ಬಿಯಾನ್ಸ್, ಲೇಡಿ ಗಾಗಾ, ಮಾಜಿ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಎಂ ಗೇಟ್ಸ್, ಸರ್ಕಾರದ ಮಾಜಿ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಮಲಾಲಾ ಯೂಸುಫಜೈ ಈ ಕಾರ್ಯಕ್ರಮದಲ್ಲಿ ಇದ್ದರು.
ಸುಂದರ್ ಪಿಚೈ ಮಾತಿನ ಆಯ್ದ ಭಾಗ ಇಲ್ಲಿದೆ.
ಎಲ್ಲವನ್ನೂ ಬದಲಿಸುವ ಅವಕಾಶ ನಿಮಗಿದೆ
ನೀವು ಅಂದುಕೊಂಡಂಥ ಪದವಿ ಸಮಾರಂಭ ಇದಲ್ಲ ಅಂತ ನಾನು ಅಂದುಕೊಳ್ತೀನಿ. ನೀವು ಪಡೆದ ಜ್ಞಾನ ಏನು ಎಂದು ಸಂಭ್ರಮಿಸುತ್ತಿರುವಾಗ ಕಳೆದುಕೊಂಡಿದ್ದೇನು ಎಂದು ದುಃಖ ಪಡುತ್ತಿರಬಹುದು: ನೀವು ಅಂದುಕೊಂಡಂಥ ಹೆಜ್ಜೆಗಳು, ಗಳಿಸಿದ ಕೆಲಸ, ಯಾವ ರೀತಿಯ ಅನುಭವ ಪಡೆಯಬೇಕು ಅಂದುಕೊಂಡಿದ್ದೀರೋ ಅದು. ಈಗಿನ ಕರಾಳ ಸನ್ನಿವೇಶದಲ್ಲಿ ಭರವಸೆ ಇರಿಸಿಕೊಳ್ಳುವುದು ಕಷ್ಟ. ಆದರೆ ನೀವು ಮುಕ್ತವಾಗಿರಿ, ಅಸಹನೆ ಇರಲಿ. ಭರವಸೆ ಇರಲಿ. ನಿಮ್ಮಿಂದ ಇದು ಸಾಧ್ಯವಾದರೆ 2020ರ ತರಗತಿಯನ್ನು ಇತಿಹಾಸ ನೆನಪಿಟ್ಟುಕೊಂಡಿರುತ್ತದೆ. ಹ್ಞಾಂ, ನೀವು ಏನು ಕಳೆದುಕೊಂಡಿದ್ದೀರಿ ಅಂತಲ್ಲ, ನೀವು ಏನು ಬದಲಾಯಿಸಿದ್ದೀರಿ ಎಂಬುದಕ್ಕೆ. ಎಲ್ಲವನ್ನೂ ಬದಲಿಸುವ ಅವಕಾಶ ನಿಮಗಿದೆ. ನೀವು ಅದನ್ನು ಮಾಡುತ್ತೀರಿ ಎಂಬ ಆಶಾವಾದ ನನಗಿದೆ.
ವಿವಿಧ ಸವಾಲುಗಳನ್ನು ಮೀರಿದ್ದಾರೆ
ವಿವಿಧ ಹಂತಗಳಲ್ಲಿ ಪದವಿ ಮುಗಿಸಿ ಹೊರಬಂದ ವಿದ್ಯಾರ್ಥಿಗಳು ಸವಾಲುಗಳನ್ನು ಮೀರಿ ನಿಂತಿದ್ದಾರೆ. 1920ರಲ್ಲಿ ಪದವಿ ಪಡೆದವರು ಭೀಕರ ಜಾಗತಿಕ ಪಿಡುಗಿನ ಕೊನೆಯ ಹಂತವನ್ನು ಕಂಡರು. 1970ನೇ ಇಸವಿಯಲ್ಲಿ ಪದವಿ ಮುಗಿಸಿದವರು ವಿಯೆಟ್ನಾಂ ಯುದ್ಧದ ಮಧ್ಯ ಭಾಗವನ್ನು ಕಂಡರು. ಅಷ್ಟೇ ಏಕೆ, 2001ರಲ್ಲಿ ಪದವಿ ಮುಗಿಸಿ ಹೊರ ಬಂದ ಕಾಲಕ್ಕೆ ಯು.ಎಸ್. ಮೇಲೆ 9/11 ದಾಳಿಯನ್ನು ನೋಡಿದರು. ಈ ಎಲ್ಲ ಪ್ರಕರಣಗಳಲ್ಲೂ ಮೇಲುಗೈ ಸಾಧಿಸಿದರು. ಈ ಸುದೀರ್ಘ ಇತಿಹಾಸವು ನಾವು ಏಕೆ ಭರವಸೆ ಇರಿಸಿಕೊಳ್ಳಬೇಕು ಎಂಬುದನ್ನೇ ಹೇಳುತ್ತಿದೆ. ಆದ್ದರಿಂದ ಭರವಸೆ ಇರಿಸಿಕೊಳ್ಳಿ. ಇನ್ನು ಒಂದು ತಲೆಮಾರು ಅದರ ಮುಂದಿನ ತಲೆಮಾರಿನ ಸಾಮರ್ಥ್ಯ ಅರಿಯುವುದಿಲ್ಲ. ಏಕೆಂದರೆ, ಅವರೇ ಮುಂದಿನವರ ಪಾಲಿನ ತಳಹದಿ ಎಂದು ತಿಳಿದಿರುವುದಿಲ್ಲ. ಹೊಸ ತಲೆಮಾರು ಯಾವಾಗಲೂ ಸಾಧ್ಯತೆಗಳೊಂದಿಗೆ ಹೊರಬರುತ್ತದೆ.
ಅಸಹನೆಯನ್ನು ಉಳಿಸಿಕೊಳ್ಳಿ
ತಂತ್ರಜ್ಞಾನದ ವಿಚಾರಗಳು ನಿಮ್ಮನ್ನು ಹತಾಶರನ್ನಾಗಿ ಮಾಡಬಹುದು. ಹಾಗೂ ಅಸಹನೆ ಮೂಡುವಂತೆ ಆಗಬಹುದು. ಆ ಅಸಹನೆಯನ್ನು ಕಳೆದುಕೊಳ್ಳಬೇಡಿ. ಅದೇ ಹೊಸ ತಂತ್ರಜ್ಞಾನ ಕ್ರಾಂತಿಯನ್ನು ಸೃಷ್ಟಿಸುತ್ತದೆ. ನನ್ನ ತಲೆಮಾರು ಕನಸಲ್ಲೂ ಕಾಣದ ವಸ್ತುಗಳನ್ನು ನೀವು ಸೃಷ್ಟಿಸಲು ಕಾರಣವಾಗುತ್ತದೆ. ಹವಾಮಾನ ಬದಲಾವಣೆ ಅಥವಾ ಶಿಕ್ಷಣದ ಬಗ್ಗೆ ನಮ್ಮ ತಲೆಮಾರು ಎಷ್ಟು ಹತಾಶವಾಗಿದೆಯೋ ಅಷ್ಟು ನೀವು ಹತಾಶರಾಗಿರಬಹುದು. ನಿಮ್ಮಲ್ಲಿ ಅಸಹನೆ ಇರಲಿ. ಅದು ಈ ವಿಶ್ವದ ಅಗತ್ಯಗಳ ಬೆಳವಣಿಗೆಗೆ ಅವಕಾಶ ಮಾಡಿಕೊಡುತ್ತದೆ. ಯುವಜನರಲ್ಲಿರುವ ವಿಶ್ವಾಸ ಈ ಜಗತ್ತನ್ನು ತನ್ನದೇ ದಾರಿಯಲ್ಲಿ ಉತ್ತಮಪಡಿಸುತ್ತದೆ.
ವಿಶ್ವದಲ್ಲಿ ಅತ್ಯಂತ ಇಷ್ಟವಾದ್ದನ್ನು ಹುಡುಕಿ
ಮುಖ್ಯವಾದ ವಿಷಯ ಏನೆಂದರೆ, ನೀವು ಮುಕ್ತ ಮನಸ್ಸಿನಿಂದ ಇರಬೇಕು. ಆಗ ನೀವು ಪ್ರೀತಿಸಿದ್ದನ್ನು ಹುಡುಕಲು ಸಾಧ್ಯ. ಈ ವಿಶ್ವದಲ್ಲಿ ನಿಮಗೆ ಅತ್ಯಂತ ಖುಷಿ ಕೊಡುವ ಸಂಗತಿ ಯಾವುದು ಎಂಬುದನ್ನು ಹುಡುಕುವುದಕ್ಕೆ ಸಮಯ ನೀಡಿ. ಪೋಷಕರು ನೀವೇನಾಗಲು ಬಯಸುತ್ತಾರೋ ಅದಕ್ಕಲ್ಲ. ಅಥವಾ ನಿಮ್ಮ ಎಲ್ಲ ಸ್ನೇಹಿತರು ಮಾಡುತ್ತಾರಲ್ಲ ಅದಕ್ಕಾಗಿ ಅಲ್ಲ. ಅಥವಾ ಈ ಸಮಾಜ ಏನನ್ನು ನಿರೀಕ್ಷೆ ಮಾಡುತ್ತಿದೆಯೋ ಅದಕ್ಕಾಗಿ ಅಲ್ಲ. ನನ್ನ ತಂದೆಯ ಒಂದಿಡೀ ವರ್ಷದ ಸಂಬಳವನ್ನು ಯು.ಎಸ್. ವಿಮಾನದ ಟಿಕೆಟ್ ಗಾಗಿ ಖರ್ಚು ಮಾಡಿದರು. ಆದ್ದರಿಂದ ಸ್ಟ್ಯಾನ್ ಫೋರ್ಡ್ ಗೆ ನಾನು ಬರುವುದಕ್ಕೆ ಸಾಧ್ಯವಾಯಿತು. ಅದು ನನ್ನ ಮೊದಲ ವಿಮಾನ ಪ್ರಯಾಣ. ನಾನು ಅಲ್ಲಿಂದ ಇಲ್ಲಿಗೆ ಬರಲು ಕಾರಣವಾಗಿದ್ದು ಅದೃಷ್ಟವಲ್ಲ. ಬದಲಿಗೆ ತಂತ್ರಜ್ಞಾನದ ಬಗ್ಗೆ ನನಗಿದ್ದ ಅಪರಿಮಿತವಾದ ಪ್ರೀತಿ ಮತ್ತು ಮುಕ್ತವಾದ ಮನಸ್ಸು.


Click it and Unblock the Notifications